More

    ಸಮರ್ಪಕವಾಗಿ ಪಾವತಿಯಾಗದ ಬೆಳೆ ವಿಮೆ

    ಚಳ್ಳಕೆರೆ: ಫಸಲ್ ಬಿಮಾ ಯೋಜನೆಯಡಿ ಹಳೇ ವಿಮೆ ಪಾವತಿ ಮಾಡದೆ ಹೊಸ ವಿಮೆಗೆ ಕಂತು ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ದೂರಿದ್ದಾರೆ.

    2018, 2019ರ ಸಾಲಿನ ಬೆಳೆ ವಿಮೆ ಸಮರ್ಪಕವಾಗಿ ಸಿಕ್ಕಿಲ್ಲ. ಆದರೆ, 2020-21ನೇ ಸಾಲಿನ ಕಂತು ಕಟ್ಟಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ವಿಮೆ ಕಟ್ಟಿಸಿಕೊಳ್ಳಲು ದಿನಾಂಕ ನಿಗದಿ ಮಾಡಿದಂತೆ ರೈತರಿಗೆ ವಿಮೆ ಹಣ ತಲುಪಿಸಲು ನಿಗದಿತ ಸಮಯ ಸರ್ಕಾರಕ್ಕೆ ಇಲ್ಲ. ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಕೃಷಿಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಈ ವರ್ಷ ಮುಂಗಾರು ಉತ್ತಮವಾಗಿ ಆರಂಭವಾಗಿದ್ದರೂ, ಜೂನ್‌ನಲ್ಲಿ ವಾಡಿಕೆ ಮಳೆಯಾಗದೆ ಬಿತ್ತನೆ ಕುಂಠಿತವಾಗಿದೆ. ಹತ್ತು ವರ್ಷಗಳಿಂದ ಇಲ್ಲಿನ ರೈತರಿಗೆ ನೆಲಗಡಲೆ ಬೆಳೆಯಲ್ಲಿ ಲಾಭ ಕಂಡಿಲ್ಲ. ಕೃಷಿಕರಿಗೆ ಆಧಾರವಾಗಬೇಕಿದ್ದ ವಿಮೆ ಕೂಡ ಅವರ ಕೈ ತಲುಪುತ್ತಿಲ್ಲ ಎಂದು ಆಪಾದಿಸಿದ್ದಾರೆ.

    ವಿಮಾ ಕಂಪನಿಗಳ ನಡುವೆ ಒಪ್ಪಂದ ಮಾಡಿಕೊಳ್ಳುತ್ತಿರುವ ಸರ್ಕಾರಗಳು ರೈತರಿಗೆ ನ್ಯಾಯ ಒದಗಿಸುತ್ತಿಲ್ಲ. ಬಾಕಿ ಇರುವ ವಿಮೆ ಹಣ ಬಿಡುಗಡೆ ಮಾಡಿಸಿ, ಈ ವರ್ಷದ ವಿಮೆ ಹಣ ಕಟ್ಟಿಸಿಕೊಳ್ಳಲು ಮುಂದಾಗಬೇಕು. ಕರೊನಾ ಸಂಕಷ್ಟದಲ್ಲಿರುವ ರೈತರಿಗೆ ವಿಮೆ ಹಣ ಕಟ್ಟಲು ಶಕ್ತಿ ಇಲ್ಲ. ರೈತರ ಹೆಸರಲ್ಲಿ ಸರ್ಕಾರವೇ ವಿಮೆ ಹಣ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.

    2019-20ರ ಮುಂಗಾರು ಅವಧಿಯಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ತಾಲೂಕಿನ 23468 ರೈತರಿಗೆ ಬೆಳೆವಿಮೆ ಸೌಲಭ್ಯದಡಿ 41.27 ಕೋಟಿ ರೂ. ದೊರಕಿಸಿ ಕೊಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಮತ್ತು ರೈತರ ಹೆಸರು ಆರ್‌ಟಿಸಿ ಪಹಣಿ ಹೊಂದಾಣಿಕೆ ಇಲ್ಲದಿರುವ 494 ರೈತರಿಗೆ 1.46 ಕೋಟಿ ರೂ. ಜಮೆ ಆಗಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ.
    ಡಾ.ಮೋಹನ್‌ಕುಮಾರ್
    ಸ.ನಿರ್ದೇಶಕ, ಕೃಷಿ ಇಲಾಖೆ, ಚಳ್ಳಕೆರೆ

    2018ರಿಂದ ಫಸಲ್ ಬಿಮಾ ವಿಮೆ ಬಾಕಿ ಇದೆ. ವಿಮೆ ಬಿಡುಗಡೆಗಾಗಿ ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಇನ್ನೂ ರೈತರಿಗೆ ಬೆಳೆ ವಿಮೆ ಬಾಕಿ ಇರುವಾಗಲೇ ಈ ವರ್ಷ ವಿಮಾ ಕಂತು ಕಟ್ಟಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
    ಕೆ.ಪಿ.ಭೂತಯ್ಯ
    ರಾಜ್ಯ ಉಪಾಧ್ಯಕ್ಷ, ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts