More

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ವಗುರು; ಇಟಲಿಯಲ್ಲೂ ನುಸುಳುಕೋರರನ್ನು ಹೊರದಬ್ಬುತ್ತಿದ್ದಾರೆ! 

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ವಗುರು; ಇಟಲಿಯಲ್ಲೂ ನುಸುಳುಕೋರರನ್ನು ಹೊರದಬ್ಬುತ್ತಿದ್ದಾರೆ! ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಒಳಬಂದಿರುವ ಈ ನುಸುಳುಕೋರರನ್ನು ಮುಲಾಜಿಲ್ಲದೆ ಹೊರಹಾಕುತ್ತೇವೆ ಎಂದು ಹೇಳಿರುವ ಇಟಲಿಯ ಹೊಸ ಪ್ರಧಾನಿ ಒಳಬರುವ ಸಂಖ್ಯೆ ಕಡಿಮೆ ಮಾಡಿದರೆ ಸಾಲದು ಹೊರದಬ್ಬುವುದನ್ನು ಹೆಚ್ಚಿಸಬೇಕು ಎಂದು ಸ್ಪಷ್ಟವಾದ ದನಿಯಲ್ಲಿ ಹೇಳಿದ್ದಾರೆ.

    ಮಳೆ ನಿಂತರೂ ಹನಿಯುವುದು ಮಾತ್ರ ನಿಲ್ಲುತ್ತಲೇ ಇಲ್ಲ. ಸಿಎಎ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವಿರೋಧದ ಕೂಗು ನಿಧಾನವಾಗಿ ಕಡಿಮೆಯಾಗುತ್ತಿದ್ದರೆ ಜಾಗೃತಿಯ ನೆಪದಲ್ಲಿ ಪರವಾಗಿರುವವರೆಲ್ಲ ಶಾಂತವಾಗಿಯೇ ಒಗ್ಗೂಡುತ್ತಿದ್ದಾರೆ. ವಿಚಾರವನ್ನೇ ಅರಿಯದೇ ಮೂರ್ಖತನ ಮಾತ್ರದಿಂದಲೇ ಹೇಗೆ ಒಂದಿಡೀ ಆಂದೋಲನವನ್ನು ಹುಟ್ಟುಹಾಕಬಹುದೆಂಬುದಕ್ಕೆ ಸಿಎಎ ವಿರೋಧಿ ಪ್ರತಿಭಟನೆಯೇ ಉದಾಹರಣೆ. ಆರಂಭದಲ್ಲಿ ಸರ್ಕಾರದ ವಿರುದ್ಧದ ಈ ಪ್ರತಿಭಟನೆಗೆ ಸಹಜವಾಗಿಯೇ ಜೊತೆಯಾಗಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ಬರುಬರುತ್ತ ಪ್ರತಿಭಟನಾಕಾರರ ಉದ್ದೇಶವನ್ನು ನಗ್ನಗೊಳಿಸುತ್ತ ನಡೆದದ್ದು ವಿಶೇಷವಾಗಿತ್ತು.

    ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ ದೆಹಲಿಯಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ಕಾಶ್ಮೀರದ ಪೊಲೀಸ್ ಅಧಿಕಾರಿಯ ಮಗಳೊಬ್ಬಳು ಮಾತನಾಡಿದ್ದಾಳೆ. ‘ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ 40 ಕೋಟಿ ಜನರನ್ನು ಭಾರತಕ್ಕೆ ಕರೆತಂದು ನಾಗರಿಕತೆ ಕೊಡುವ ಈ ಕಾನೂನನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದಿದ್ದಾಳೆ. ಮೂರೂ ರಾಷ್ಟ್ರಗಳನ್ನು ಕೂಡಿದರೆ ಒಟ್ಟೂ ಜನಸಂಖ್ಯೆ ಅಷ್ಟಾಗುವುದು ಅನುಮಾನ. ಬುದ್ಧಿವಂತ ಮಹಿಳೆ ಎಂದು ತನ್ನ ತಾನು ಹೇಳಿಕೊಳ್ಳುವ ಆ ಹುಡುಗಿಗೆ ಇಷ್ಟೂ ಅರ್ಥವಾಗದೇ ಪ್ರತಿಭಟನೆಗೆ ಬಂದಿದ್ದಾಳೆಂದರೆ ಬೆನ್ನು ತಟ್ಟಲೇಬೇಕು!

    ಇಷ್ಟಕ್ಕೂ ಈ ಕಾಯ್ದೆಯ ಲಾಭ ಪಡೆದು ನಾಗರಿಕತೆ ಪಡೆಯುತ್ತಿರುವವರ ಸಂಖ್ಯೆ 40 ಸಾವಿರ ದಾಟಲಾರದು. ಆ ಹುಡುಗಿ ತನ್ನ ಅಜ್ಞಾನದ ಪ್ರದರ್ಶನವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ‘ಕಾನೂನು ವಿದ್ಯಾರ್ಥಿಗಳಾದ ನಾವು ಈ ದೇಶದಲ್ಲಿ ಪಾಲಿಸಿಗಳನ್ನು ರೂಪಿಸಿ ಆಚರಣೆಗೆ ತರುತ್ತೇವೆ’ ಎಂದು ಹೇಳಲು ಹಿಂದೆ-ಮುಂದೆ ನೋಡುವುದಿಲ್ಲ.

    ಕಾರ್ಯನೀತಿ ರಚನೆಗೆಂದು ಆಯ್ಕೆಗೊಂಡ ಜನಪ್ರತಿನಿಧಿಗಳಿದ್ದಾರೆ ಎಂಬ ಸಾಮಾನ್ಯಜ್ಞಾನವೂ ಆಕೆಗಿಲ್ಲ. ಸಂಘ, ಬಿಜೆಪಿ, ಎಬಿವಿಪಿಗಳ ಬಗ್ಗೆ ಪುಂಖಾನುಪುಂಖವಾಗಿ ತಪ್ಪು-ತಪ್ಪು ಮಾಹಿತಿಗಳನ್ನೇ ನೀಡುವ ಆ ಹೆಣ್ಣುಮಗಳು ಪ್ರತಿಭಟನಾಕಾರರ ಒಟ್ಟಾರೆ ಮಾನಸಿಕ ಸ್ಥಿತಿಯನ್ನು ಪ್ರದರ್ಶಿಸುತ್ತಾಳೆ. ಆಕೆಯೊಳಗೆ ಕಂಡಿದ್ದು ಸುಳ್ಳನ್ನು ಧೈರ್ಯವಾಗಿ ಹೇಳಬಲ್ಲ ಸಾಹಸ ಮಾತ್ರ. ಮತ್ತದು ಪ್ರತಿಭಟನಾಕಾರರ ಮಾನಸಿಕತೆಯೇ. ಇಲ್ಲವಾದಲ್ಲಿ ದೆಹಲಿಯ ಬೀದಿಬೀದಿಗಳಲ್ಲಿ ಸುಳ್ಳನ್ನು ಸಮರ್ಥಿಸಿಕೊಳ್ಳಲು ಬಸ್ಸಿಗೆ ಕಲ್ಲು ಹೊಡೆಯುವ ಸಾಹಸ ಅವರು ಮಾಡುತಿರಲಿಲ್ಲ!

    ಪ್ರತಿಭಟನಾಕಾರರ ಬೌದ್ಧಿಕಸ್ತರ ಇಷ್ಟೇ ಎಂಬ ಧೈರ್ಯದ ಮೇಲೆ ಇತ್ತೀಚೆಗೆ ಅಮಿತ್ ಷಾ ಸಾರ್ವಜನಿಕವಾಗಿ ಮಾತನಾಡುತ್ತ, ‘ತಾಕತ್ತಿದ್ದರೆ ರಾಹುಲ್ ಚರ್ಚೆಗೆ ಬರಲಿ’ ಎಂದು ಮುಕ್ತವಾಗಿ ಆಹ್ವಾನಿಸಿದ್ದರು. ಸಿಎಎ ಚರ್ಚೆ ಮಾಡುವಾಗಲೂ ರಾಹುಲ್ ಮಹಿಳಾ ಸಬಲೀಕರಣದ ಬಗ್ಗೆಯೇ ಮಾತನಾಡುತ್ತಾರೆಂಬುದು ಅಮಿತ್ ಷಾಗೆ ಗೊತ್ತಿರದ ಸಂಗತಿ ಏನಲ್ಲ. ವಾದದಲ್ಲಿ ಸೋಲುವ ಭಯವಿರುವುದರಿಂದಲೇ ಪ್ರತಿಭಟನಾಕಾರರು ಜಾಗೃತಿಯ ಸಭೆಗಳಿಗಿಂತ ಹೆಚ್ಚಾಗಿ ಕೂಗಾಟ, ಅರಚಾಟಗಳಲ್ಲೇ ಕಾಲ ಕಳೆಯುತ್ತಿರುವುದು.

    ಇತ್ತೀಚೆಗೆ ಜೆಎನ್​ಯುುನಲ್ಲಿ ದೀಪಿಕಾ ಎಂಬ ಕಾಶ್ಮೀರದ ಪಂಡಿತರ ಹೆಣ್ಣುಮಗಳು ಮುಸಲ್ಮಾನರು ಪಂಡಿತರ ಮೇಲೆ ಮಾಡಿದ ಅತ್ಯಾಚಾರವನ್ನು ವಿದ್ಯಾರ್ಥಿಗಳ ಮುಂದೆ ಕಣ್ಣಿಗೆ ಕಟ್ಟುವಂತೆ ಬಿಚ್ಚಿಡುತ್ತಿರುವಾಗ ಎಡಪಂಥೀಯ, ಕಾಂಗ್ರೆಸ್ ವಿದ್ಯಾರ್ಥಿಗಳು ಆಕೆಯ ಮಾತಿಗೆ ತಡೆಯೊಡ್ಡಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಒಂದಿನಿತೂ ಅಳುಕದೆ ಈ ಘಟನೆಯಿಂದ ಘಾಸಿಗೊಂಡದ್ದರಿಂದ ಕಣ್ಣೀರು ಹಾಕುತ್ತಲೇ ದೀಪಿಕಾ ತನ್ನ ಮಾತುಗಳನ್ನು ಮುಂದಿರಿಸಿದರು. ಸದಾ ವಾಕ್​ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಬುದ್ಧಿಜೀವಿಗಳು ಯಾಕೋ ಈ ಬಾರಿ ತುಟಿ ಬಿಚ್ಚಲಿಲ್ಲ.

    ಈ ಎಡಪಂಥೀಯ ಬುದ್ಧಿಜೀವಿಗಳಿಗೆ ವಾದದಲ್ಲಿ ಸೋಲುತ್ತೇವೆನಿಸಿದಾಗಲೆಲ್ಲ ವೈಯಕ್ತಿಕವಾಗಿ ದಾಳಿ ಮಾಡುವ ಕಲೆ ಸಿದ್ಧಿಸಿಬಿಟ್ಟಿದೆ. ಹಾಗೆ ಮಾಡುವ ಮೂಲಕ ಎದುರಾಳಿಯನ್ನು ಶಾಂತಗೊಳಿಸುವ ಪ್ರಯತ್ನ ಅದು. ರಾಜಕಾರಣಿಗಳಾದರೆ ಇಂಥದ್ದಕ್ಕೆ ಅದಕ್ಕಿಂತಲೂ ಕೆಳಮಟ್ಟದ ಉತ್ತರಕೊಟ್ಟು ಸುಮ್ಮನಾಗುತ್ತಾರೆ. ಆದರೆ ಸಂಸ್ಕೃತಿ, ಸಭ್ಯತೆಯನ್ನೇ ಉಸಿರಾಡುವ ಬಲಪಂಥೀಯ ಚಿಂತಕರು ಇಂತಹ ಟೀಕೆಗಳು ಬಂದಾಗ ಕೆಸರಿನಿಂದ ದೂರವಿರುವುದು ಒಳಿತೆಂದು ಸುಮ್ಮನಾಗಿಬಿಡುತ್ತಾರೆ. ಆಗೆಲ್ಲ ಬುದ್ಧಿಜೀವಿಗಳಿಗೆ ಗೆದ್ದೆವೆಂಬ ಹಬ್ಬ. ಈಗ ಪರಿಸ್ಥಿತಿ ಹಾಗಿಲ್ಲ. ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಕೆಲಸ ಮಾಡುತ್ತಿರುವುದರಿಂದ ಪ್ರತೀ ದಾಳಿಗೂ ಪ್ರತಿದಾಳಿ ಇದ್ದೇ ಇರುತ್ತದೆ.

    ತೀರಾ ಇತ್ತೀಚೆಗೆ ಸಿಎಎ ಪರವಾಗಿ ಜೋರು- ಜೋರಾಗಿಯೇ ಮಾತನಾಡುತ್ತಿರುವ ಅನುಪಮ್ ಖೇರ್ ಕುರಿತಂತೆ ನಸಿರುದ್ದೀನ್ ಶಾ ವೈಯಕ್ತಿಕ ಟೀಕೆ ಮಾಡಿದ್ದು ಅನೇಕರ ಮನಸ್ಸು ನೋಯಿಸಿತು. ಈ ಹಿಂದೆಯೂ ಶಾ ಅಮಿತಾಬ್ ಬಚ್ಚನ್, ರಾಜೇಶ್ ಖನ್ನಾರಲ್ಲದೆ ವಿರಾಟ್ ಕೋಹ್ಲಿ ಕುರಿತಂತೆಯೂ ಬೇರೆ ಬೇರೆ ಸಂದರ್ಭಗಳಲ್ಲಿ ವೈಯಕ್ತಿಕ ದಾಳಿ ಮಾಡಿದ್ದರು. ಆಗೆಲ್ಲ ಅವರು ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ. ಅದು ಸಭ್ಯತೆಯ ಚೌಕಟ್ಟು.

    ಈ ಬಾರಿ ಹಾಗಾಗಲಿಲ್ಲ. ಅನುಪಮ್ ಖೇರ್ ಹಿಂದಿನ ಎಲ್ಲ ಘಟನೆಗಳನ್ನು ನೆನಪಿಸಿ ಆ ಮಹನೀಯರುಗಳೆಲ್ಲ ಉತ್ತರಿಸದೇ ಇದ್ದುದಕ್ಕೆ ಕಾರಣವೇ ನಸಿರುದ್ದೀನ್ ಶಾ ಗಣಿಸಲ್ಪಡಬೇಕಾದ ವ್ಯಕ್ತಿಯಾಗಿರಲಿಲ್ಲ ಎಂಬುದನ್ನು ಹೇಳಿದರಲ್ಲದೆ ದಿನನಿತ್ಯ ಆತ ಸೇವಿಸುವ ವಸ್ತುಗಳಿಂದ ವಿವೇಚನಾ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾನೆ ಎಂಬುದನ್ನು ಸಮಾಜಕ್ಕೆ ನೆನಪಿಸಿಕೊಟ್ಟರು. ಆನಂತರ ಅನೇಕ ದಿನಗಳ ಕಾಲ ನಸೀರುದ್ದೀನ್ ಶಾ ಸೇವಿಸಬಹುದಾದ ವಸ್ತುಗಳ ಕುರಿತಂತೆ ಚರ್ಚೆ ನಡೆದಿತ್ತು. ಅದರೊಟ್ಟಿಗೆ ಆತನ ಸದ್ದೂ ನಿಂತಿತ್ತು!

    ಇದೇ ರೀತಿಯ ದಾಳಿ ಈ ಬುದ್ಧಿಜೀವಿಗಳು ಸದ್ಗುರು ಅವರ ಮೇಲೂ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಈ ಕಾಯ್ದೆ ಕುರಿತಂತೆ ಸದ್ಗುರು ಹೇಳುವ ಸಂಗತಿಯನ್ನು ಟ್ವೀಟ್ ಮಾಡಿದಾಗಿನಿಂದ ಇವರಿಗೆಲ್ಲ ಕಣ್ಣುರಿ. ಸದ್ಗುರು ಮಾತ್ರ ಒಂದಿನಿತೂ ಅಲುಗಾಡಿದಂತೆ ಕಾಣುವುದಿಲ್ಲ. ಮೊದಲಿಗಿಂತ ಹೆಚ್ಚು ಜೋರಾಗಿ ಈ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲಾರಂಭಿಸಿದರು. ಅನೇಕ ಎಡಪಂಥೀಯ ಪತ್ರಿಕೆಗಳು ಸದ್ಗುರು ಅವರ ಪೂರ್ವಾಶ್ರಮದ ಜೀವನವನ್ನು ಕೆದಕುವ, ಅವರ ಆಶ್ರಮದ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸಕ್ಕೂ ಇಳಿದರು. ಆದರೆ ಈಗ ಕಂಡು ಬರುತ್ತಿರುವ ರಾಷ್ಟ್ರೀಯತೆಯ ಸುನಾಮಿಯ ನಡುವೆ ಅವೆಲ್ಲವೂ ಕೊಚ್ಚಿ ಹೋದವು!

    ವಿರೋಧಿಗಳ ಆತ್ಮಸ್ಥೈರ್ಯ ದಿನೇದಿನೆ ಕುಸಿಯುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ಆರಂಭದಲ್ಲಿ ಇದನ್ನು ಹಿಂದೂ, ಮುಸ್ಲಿಂ, ಬೌದ್ಧ, ಜೈನ, ಸಿಖ್ಖರೆಲ್ಲರ ಹೋರಾಟವನ್ನಾಗಿ ಬಿಂಬಿಸಲು ಅವರು ಹೆಣಗಾಡುತ್ತಿದ್ದರು. ಆದರೆ ಕಾಲ ಕಳೆದಂತೆ ಇದು ಇಡಿಯ ಸಮಾಜದ ಹೋರಾಟವಲ್ಲವೆಂದು ಜಗತ್ತಿಗೆ ಅರಿವಾಗುವ ಹಂತಕ್ಕೆ ಬಂದಾಗ ತಿರಂಗಾ ಹಿಡಿದು ಬೀದಿಗೆ ಬರಲಾರಂಭಿಸಿದರು. ಆ ಮೂಲಕವಾದರೂ ರಾಷ್ಟ್ರವಾದಿಗಳನ್ನು ಸೆಳೆಯುವ ಪ್ರಯತ್ನ ಅದಾಗಿತ್ತು. ಆದರೆ ಬೆಂಗಳೂರಿನಲ್ಲಿ ಹಿಂದುತ್ವದ ವಿರುದ್ಧ ಪ್ರದರ್ಶಿಸಿದ ಭಿತ್ತಿಪತ್ರಗಳು, ಉತ್ತರಪ್ರದೇಶದಲ್ಲಿ ಹಿಂದೂ ಮನೆಗಳ ಮೇಲೆ ಎಸೆದ ಕಲ್ಲುಗಳು, ಮತ್ತು ದೇಶದೆಲ್ಲೆಡೆ ಹೋರಾಟದ ವೇಳೆ ಮೊಳಗುತ್ತಿದ್ದ ಆಕ್ಷೇಪಾರ್ಹ ಘೊಷಣೆಗಳು ಇದನ್ನು ಪಕ್ಕಾ ಮುಸಲ್ಮಾನರ ಹೋರಾಟವಾಗಿ ಮಾರ್ಪಡಿಸಿಬಿಟ್ಟಿತ್ತು.

    ಹೀಗಾಗಿಯೇ ಅಕ್ಷರಶಃ ಹಿಂದೂ ಮುಸ್ಲಿಂ ಧ್ರುವೀಕರಣ ಈ ಕಾಯ್ದೆಯ ನೆಪದಲ್ಲಿ ಏರ್ಪಟ್ಟಿತು. ಇದರ ಅತ್ಯಂತ ಕೆಟ್ಟ ಸ್ವರೂಪ ಕೇರಳದ ಮಲಪ್ಪುರಂಲ್ಲಿ ಕಂಡುಬಂತು. ಅಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ 70ರಷ್ಟಿದೆ. ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಕುಡಿಯುವ ನೀರಿಗಾಗಿಯೂ ಮುಸಲ್ಮಾನರ ಮರ್ಜಿಯಲ್ಲೇ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಲ್ಲಿನ ಕುಟ್ಟೀಪುರಂ ಎಂಬ ಭಾಗದಲ್ಲಿ ಕುಡಿಯುವ ನೀರನ್ನು ತಲುಪಿಸುತ್ತಿದ್ದ ಮುಸಲ್ಮಾನ ಸಿಎಎ ಬೆಂಬಲಕ್ಕೆ ಹಿಂದೂಗಳು ನಿಂತಿದ್ದಾರೆ ಎಂಬ ಒಂದೇ ಕಾರಣಕ್ಕೆ ನೀರು ಕೊಡಲು ನಿರಾಕರಿಸಿಬಿಟ್ಟ. ಅಲ್ಲಿನ ಪಂಚಾಯ್ತಿಯಿಂದ ಇದಕ್ಕಾಗಿ ಹಣ ಪಡೆಯುತ್ತಿದ್ದ ಆತ ಮಾಡಿದ್ದು ಅಕ್ಷಮ್ಯ ಅಪರಾಧ. ಪಂಚಾಯ್ತಿ ಇದನ್ನು ಸರಿಪಡಿಸುವ ಗೋಜಿಗೆ ಹೋಗಲೇ ಇಲ್ಲ.

    ಪ್ರಜಾಪ್ರಭುತ್ವಕ್ಕೆ ಧಕ್ಕೆಯೊದಗಿದೆ ಎಂದು ಅರಚಾಡುವ ಮಂದಿ ಈಗ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮುಸಲ್ಮಾನರ ಸಂಖ್ಯೆ ಹೆಚ್ಚಿದ್ದಲ್ಲೆಲ್ಲ ಹಿಂದೂಗಳಿಗೆ ಈ ಪಾಡು ತಪ್ಪಿದ್ದಲ್ಲ. ಆದರೆ ಇಡೀ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾಗಲೂ ಮುಸಲ್ಮಾನರು ನೆಮ್ಮದಿಯಿಂದಲೇ ಬದುಕುತ್ತಿದ್ದಾರೆ. ಇದು ಮತೀಯ ವ್ಯವಸ್ಥೆಗಳು ಹುಟ್ಟು ಹಾಕಿರುವ ಮನಸ್ಥಿತಿ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ವಾರಗಟ್ಟಲೆ ದೆಹಲಿಯ ಶಾಹೀನ್​ಬಾಗ್ ರಸ್ತೆಯನ್ನು ಅಡ್ಡಗಟ್ಟಿ ಕುಳಿತಿರುವ ಭಾಗದಲ್ಲಿರುವ ಮುಸಲ್ಮಾನರ ಜನಸಂಖ್ಯೆ ಶೇಕಡ 69ರಷ್ಟು. ಇದು ಸಾರ್ವಜನಿಕರ ಪ್ರತಿಭಟನೆ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಅವರು ಮಾಡುತ್ತಿದ್ದರೂ ಅಲ್ಲಿ ಕೇಳಿಬರುತ್ತಿರುವ ಜಿನ್ಹಾ ಕೇಳಿದ ‘ಸ್ವಾತಂತ್ರ್ಯ’ ಎಂಬ ಘೊಷಣೆ ಹಾಗೂ ಇನ್ನಿತರ ಘೊಷಣೆಗಳು ಇದು ಅಕ್ಷರಶಃ ಕಾಂಗ್ರೆಸ್, ಎಡಪಂಥೀಯರು ಮತ್ತು ಮುಸಲ್ಮಾನರೇ ದೇಶದ ಅಭಿವೃದ್ಧಿ ಯನ್ನು ತಡೆಯಲು ಮಾಡುತ್ತಿರುವ ಪ್ರಯತ್ನವೆಂಬುದನ್ನು ಸಾಬೀತು ಪಡಿಸುತ್ತಿದೆ.

    ಎಡಪಂಥೀಯರನ್ನು ಯಾಕೆ ಸೇರಿಸಲಾಯ್ತೆಂದರೆ ಸಂಸದೆ ಶೋಭಾ ಕರಂದ್ಲಾಜೆ ಮಲಪ್ಪುರಂನ ಘಟನೆಯನ್ನು ಟ್ವೀಟ್ ಮಾಡಿದ್ದಾರೆಂಬ ಕಾರಣಕ್ಕಾಗಿಯೇ ಅವರ ಮೇಲೆ ಕೇರಳದ ಸರ್ಕಾರ ಕೇಸು ದಾಖಲಿಸಿದೆ. ಎಡಪಂಥೀಯರ ಮಾನಸಿಕ ಸ್ಥಿತಿ ಎಷ್ಟು ಹಳ್ಳ ಹಿಡಿದಿರಬಹುದೆಂಬುದಕ್ಕೆ ಇದು ಸಾಕ್ಷಿ. ಇವರೆಲ್ಲರೂ ಯಾವ ಹಂತಕ್ಕೆ ಬಂದು ನಿಂತಿದ್ದಾರಂದರೆ ಸುಳ್ಳು ಹೇಳಿಯಾದರೂ ಸರ್ಕಾರಕ್ಕೆ ತೊಂದರೆ ಕೊಡಬೇಕೆಂಬ ಧಾವಂತ ಅವರಿಗಿದ್ದಂತಿದೆ.

    ಆಂಗ್ಲ ಪತ್ರಿಕೆಯೊಂದು ಐಐಟಿ ಖರಗ್​ಪುರ್​ನ ಸಂಶೋಧನಾ ವಿದ್ಯಾರ್ಥಿಗಳ ತಂಡ ಸಿಎಎ ವಿರೋಧಿಸಿದೆ ಎಂಬ ಸುದ್ದಿ ಪ್ರಕಟಿಸಿಬಿಟ್ಟಿತು. ಆದರೆ ಅಧಿಕೃತವಾಗಿ ಅಂಥದ್ದೊಂದು ಪ್ರತಿಭಟನೆಯ ದಾಖಲೆಯೇ ಇರಲಿಲ್ಲ. ಕೆಲವು ಪ್ರಮುಖ ವಿದ್ಯಾಸಂಸ್ಥೆಗಳ ಎದುರಿಗೆ ಆ ಸಂಸ್ಥೆಗೇ ಸಂಬಂಧಿಸದ ಜನ ಭಿತ್ತಿಪತ್ರಗಳನ್ನು ಹಿಡಿದು ನಿಂತು ಕೊಡುವ ಹೇಳಿಕೆಗಳನ್ನು ಅದೇ ಸಂಸ್ಥೆಯ ಹೇಳಿಕೆಗಳೆಂದು ಈ ಪತ್ರಿಕೆಗಳು ದಾಖಲಿಸುತ್ತಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಭಟನೆಯ ನೆಪದಲ್ಲಿ ಇವರೆಲ್ಲರೂ ಬೀದಿಗೆ ಬಂದುಬಿಟ್ಟಿದ್ದಾರೆ!

    ಇತ್ತ ಸೋನಿಯಾ ಅಕ್ರಮ ನುಸುಳುಕೋರರನ್ನು ಹೊರದಬ್ಬುವ ಕಾನೂನನ್ನು ವಿರೋಧಿಸುತ್ತಿದ್ದರೆ ಅತ್ತ ಆಕೆಯ ಇಟಲಿಯ ಹೊಸಸರ್ಕಾರ 5 ಲಕ್ಷ ಅಕ್ರಮ ನುಸುಳುಕೋರರನ್ನು ಹೊರದಬ್ಬುವ ಯೋಜನೆಯನ್ನು ರೂಪಿಸಿದೆ. ಕಳೆದ ವರ್ಷವಷ್ಟೇ ಅಧಿಕಾರಕ್ಕೆ ಬಂದಿದ್ದ ಅಲ್ಲಿನ ಬಲಪಂಥೀಯ ಲೇಗಾಪಕ್ಷ ಸ್ಥಳೀಯರಿಗೆ ಈ ಕುರಿತಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಲವಾದ ಹೆಜ್ಜೆ ಇಟ್ಟಿದೆ. ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಒಳಬಂದಿರುವ ಈ ನುಸುಳುಕೋರರನ್ನು ಮುಲಾಜಿಲ್ಲದೆ ಹೊರಹಾಕುತ್ತೇವೆ ಎಂದು ಹೇಳಿರುವ ಹೊಸ ಪ್ರಧಾನಿ ಒಳಬರುವ ಸಂಖ್ಯೆ ಕಡಿಮೆ ಮಾಡಿದರೆ ಸಾಲದು ಹೊರದಬ್ಬುವುದನ್ನು ಹೆಚ್ಚಿಸಬೇಕು ಎಂದು ಸ್ಪಷ್ಟವಾದ ದನಿಯಲ್ಲಿ ಹೇಳಿದ್ದಾರೆ.

    ಜಗತ್ತೆಲ್ಲ ಈ ಅಕ್ರಮ ನುಸುಳಕೋರರ ಸಮಸ್ಯೆಯಿಂದಾಗಿ ಪರಿತಪಿಸುತ್ತಿದೆ. ಹೀಗೆ ಬಂದವರು ಆಯಾ ರಾಷ್ಟ್ರದ ಸಂಸ್ಕೃತಿ- ಸಭ್ಯತೆಗೆ ಹೊಂದಿಕೊಂಡು ನಡೆದರೆ ಪರವಾಗಿಲ್ಲ. ಇಲ್ಲವಾದರೆ ಬಲುಕಷ್ಟ. ಅದೂ ಸರಿಯೇ ಬಿಡಿ ಸ್ವಾತಂತ್ರ್ಯ ಬಂದ ಲಾಗಾಯ್ತು ಭಾರತದಲ್ಲಿರುವ ಕೆಲವರು ಇಲ್ಲಿಯ ಸಂಸ್ಕೃತಿ-ಸಭ್ಯತೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದ ಮೇಲೆ ನಡುವೆ ಬಂದ ನುಸುಳುಕೋರರು ಗೌರವಿಸುತ್ತಾರೆನ್ನುವುದನ್ನು ಊಹಿಸುವುದೂ ಅಪರಾಧವಾದೀತು.

    ಮೋದಿ-ಷಾ ಯಾವ ಬೆಳವಣಿಗೆಗಳಿಂದಲೂ ಜಗ್ಗಿದಂತೆ ಕಾಣುತ್ತಿಲ್ಲ. ಪ್ರತಿಭಟನೆಯ ನೆಪ ಹಿಡಿದುಕೊಂಡು ಸ್ಲೀಪರ್​ಸೆಲ್​ಗಳಾಗಿ ಕೆಲಸ ಮಾಡುತ್ತಿದ್ದ ಭಯೋತ್ಪಾದಕರೆಲ್ಲ ಹೊರ ಬಂದಿರುವುದನ್ನು ಗುರುತಿಸಿದ್ದಲ್ಲದೆ ಅವರ ಹಿಂದೆ ಬಿದ್ದು ಒಬ್ಬೊಬ್ಬರನ್ನೇ ಬಂಧಿಸುತ್ತಿದ್ದಾರೆ. ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಎಲ್ಲ ಮಂತ್ರಿಗಳು ಹೋಗಿ ತಮ್ಮ ಖಾತೆಯ ಅಭಿವೃದ್ಧಿಯ ಕಾರ್ಯಗಳನ್ನು ಘೊಷಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕೆಂಬ ಕೆಲಸವೂ ಆರಂಭವಾಗಿಬಿಟ್ಟಿದೆ. ಪಿಡಿಪಿಯಿಂದ ಮಂತ್ರಿಯಾಗಿದ್ದವರೇ-‘ಆರ್ಟಿಕಲ್ 370ನ್ನು ತೆಗೆದ ನಂತರವೂ ಕಾಶ್ಮೀರ ಶಾಂತವಾಗಿರುವುದಕ್ಕೆ ಮೋದಿಯನ್ನು ಅಭಿನಂದಿಸಲೇಬೇಕು’ ಎಂದು ಹೇಳಿದ್ದು ಇದಕ್ಕೊಂದು ಕೈಗನ್ನಡಿಯಷ್ಟೇ.

    ಮೊದಲೆಲ್ಲ ಮೋದಿಯ ಅಲೆ ಎದ್ದೆದ್ದು ಕಾಣುತ್ತಿತ್ತು. ಸಿಎಎ ವಿರುದ್ಧ ಇವರೆಲ್ಲ ಒಟ್ಟಾಗಿರುವುದರಿಂದಾಗಿ ಮೋದಿ ಪ್ರೇಮ ವ್ಯಾಪಕವಾದ ಅಂತರ್​ಗಂಗೆಯಂತೆ ಪ್ರವಹಿಸುತ್ತಿದೆ. ‘ಇಂಡಿಯಾ ಟುಡೇ’ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿಯ ಆಯ್ಕೆಯ ವಿಚಾರದಲ್ಲಿ ಮೋದಿಗೆ ಶೇ.53 ಮತಗಳು ಬಿದ್ದಿದ್ದರೆ ರಾಹುಲ್​ಗೆ ದಕ್ಕಿದ್ದು ಶೇ.13 ಮಾತ್ರ. ಅರ್ಥ ಬಲು ಸ್ಪಷ್ಟ. ಕಾಂಗ್ರೆಸ್ಸು ಸಿಎಎ ವಿರೋಧದ ನೆಪದಲ್ಲಿ ಕೆಂಡದ ಗುಂಡಿಗೆ ಕೈಹಾಕಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts