More

    ಹೃದಯ ಜ್ಯೋತಿ ಯೋಜನೆಗೆ ಚ.ರಾ.ಪಟ್ಟಣ ಆಸ್ಪತ್ರೆ ಆಯ್ಕೆ

    ಚನ್ನರಾಯಪಟ್ಟಣ: ಹಠಾತ್ ಹೃದಯಾಘಾತ ತಡೆಯುವ ನಿಟ್ಟಿನಲ್ಲಿ ಪುನೀತ್ ರಾಜ್ಕುಮಾರ್ ಹೆಸರಿನ ‘ಹೃದಯ ಜ್ಯೋತಿ’ ಯೋಜನೆಯ ಅಡಿಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯು ಸ್ಪೋಕ್ ಕೇಂದ್ರವಾಗಿ ಆಯ್ಕೆಯಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಚನ್ನರಾಯಪಟ್ಟಣದ ಲಯನ್ಸ್ ಕ್ಲಬ್ ಸನ್‌ರೈಸ್ ಸಂಸ್ಥೆ ಸಹಯೋಗದಲ್ಲಿ ಉಚಿತ ಇಕೋ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಈ ಹಿಂದೆ ಹೃದಯ ಸಂಬಂಧಿ ಕಾಯಿಲೆಗಳು 50 ವರ್ಷ ದಾಟಿದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು, ಆದರೆ, ಬದಲಾದ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ 20ರಿಂದ 55ರೊಳಗಿನ ಪ್ರಾಯದವರಲ್ಲಿ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದು ತೀವ್ರ ಆತಂಕಕಾರಿ ಬೆಳವಣಿಗೆ. ಹೃದಯಾಘಾತದ ಸನ್ನಿವೇಶದಲ್ಲಿ ಆಸ್ಪತ್ರೆಗೆ ಹೋದಾಗ ಆ ಸಮಯದಲ್ಲಿಯೇ ಚಿಕಿತ್ಸೆ ಸಿಗಬೇಕು. ಜೀವವನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಗೋಲ್ಡನ್ ಅವರ್ ಸಮಯ ಬಹಳ ಮುಖ್ಯವಾಗಿದೆ. ಯಾರಿಗಾದರೂ ಹೃದಯಾಘಾತ ಕಂಡುಬಂದಲ್ಲಿ ಹೃದಯ ಜ್ಯೋತಿ ಯೋಜನೆ ಅಡಿಯ ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ತಕ್ಷಣ ಇಸಿಜಿ ಮಾಡಲಾಗುತ್ತದೆ. ಜತೆಗೆ ಎಐ ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿಯನ್ನು ಐದು ನಿಮಿಷಗಳಲ್ಲಿ ಪತ್ತೆ ಮಾಡಲಾಗುತ್ತದೆ. ಯಾರು ಕ್ರಿಟಿಕಲ್ ಹಂತದಲ್ಲಿರುತ್ತಾರೆಯೋ ಅವರಿಗೆ ಸ್ಪೋಕ್ ಕೇಂದ್ರಗಳಲ್ಲಿ ಉಚಿತವಾಗಿ ಟೆನೆಕ್ಟೆಪ್ಲೇಸ್ ಚುಚ್ಚುಮದ್ದನ್ನು ನೀಡಲಾಗುತ್ತದೆ. ಹಠಾತ್ ಹೃದಯಾಘಾತ ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿದೆ. ಈ ಇಂಜೆಕ್ಷನ್ ಉಚಿತವಾಗಿ ಎಲ್ಲರಿಗೂ ದೊರಕಲಿದೆ ಎಂದು ತಿಳಿಸಿದರು.

    ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆರ್‌ಎಂಒ ಡಾ.ಸೋಮಶೇಖರ್ ಮಾತನಾಡಿ, ಸೂಪರ್ ಸ್ಪೆಷಲಿಸ್ಟ್ ವೈದ್ಯರನ್ನು ಹೊಂದಿರುವ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ವಿಶೇಷ ಹೃದಯ ಸಂಸ್ಥೆಯಾಗಿದೆ. ಇಲ್ಲಿರುವ ನುರಿತ ವೈದ್ಯಕೀಯ ತಂಡವು ಜೀವಗಳನ್ನು ಉಳಿಸುತ್ತಿದೆ ಮತ್ತು ಯಾವುದೇ ತುರ್ತು ಹೃದಯ ಸಮಸ್ಯೆಗಳನ್ನು ನಿಭಾಯಿಸಲು ಸಮರ್ಥವಾಗಿದೆ. ಪರಿಣಿತರು ದಿನದ 24 ಗಂಟೆಯೂ ಲಭ್ಯವಿರುವುದರಿಂದ ಯಾವುದೇ ಗಂಭೀರ ಹೃದಯ ಸಂಬಂಧಿ ಪ್ರಕರಣಗಳಿಗೆ ಯಾವುದೇ ಸಮಯದಲ್ಲಿ ಚಿಕಿತ್ಸೆ ನೀಡಬಹುದು ಎಂದರು.

    ತಾಲೂಕು ಆರೋಗ್ಯ ಅಧಿಕಾರಿ ಎ.ಎನ್.ಕಿಶೋರ್ ಕುಮಾರ್ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಉದಾಸೀನ ಬೇಡ. ಬದಲಾದ ಆಹಾರ ಪದ್ಧತಿ, ಒತ್ತಡದ ಕೆಲಸ ಕಾರ್ಯಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ಯಾವುದೇ ಕಾಯಿಲೆಯನ್ನು ಅಸಡ್ಡೆ ಮಾಡದೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಹೃದಯ ಸಂಬಂಧಿತ ಕಾಯಿಲೆಗಳನ್ನು ಮೊದಲೇ ಗುರುತಿಸುವುದು ಮುಖ್ಯ. ಉದಾಸೀನ ಮಾಡದೆ ಚಿಕಿತ್ಸೆಗೆ ಮುಂದಾಗಬೇಕು. ಕಾಲಹರಣ ಮಾಡಿದಲ್ಲಿ ಅನಾಹುತ ಸಂಭವಿಸುವುದು ಶತಸ್ಸಿದ್ಧ. ಆರೋಗ್ಯದ ಕುರಿತು ಯಾರೂ ಅಸಡ್ಡೆ ಅಥವಾ ನಿರ್ಲಕ್ಷೃ ತೋರಬಾರದು ಎಂದರು.

    ಸಾರ್ವಜನಿಕ ಆಸ್ಪತ್ರೆಯ ಫಿಜಿಶಿಯನ್ ಡಾ.ವಿ.ಚಿದಾನಂದ್, ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪಿಆರ್‌ಒ ಶಿವಕುಮಾರ್, ಧರ್ಮೇಂದ್ರ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಪುಷ್ಪಲತಾ, ಕ್ಷಕಿರಣ ತಂತ್ರಜ್ಞ ಗುರುಮೂರ್ತಿ, ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲ ಅರುಣ್ ಕುಮಾರ್ ಹಾಗೂ ವಿದ್ಯಾರ್ಥಿಗಳು, ಲಯನ್ಸ್ ಖಜಾಂಚಿ ಗೋವಿಂದರಾಜು, ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts