More

    ಸಿಜಿಡಿ ಪೈಪ್‌ಲೈನ್ ಕೆಲಸ ಚುರುಕು

    ಭರತ್ ಶೆಟ್ಟಿಗಾರ್ ಮಂಗಳೂರು

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಳಿಗೆ ಅನಿಲ(ಸಿಜಿಡಿ) ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗಿದೆ. ನಗರದ ಪ್ರಮುಖ ರಸ್ತೆಗಳಡಿ ಪೈಪ್ ಅವಳಡಿಸುವ ಕೆಲಸ ನಡೆಯುತ್ತಿದೆ. ಮೇ ಅಂತ್ಯದೊಳಗೆ ಕೆಲವು ಪ್ರದೇಶದಲ್ಲಾದರೂ ಮನೆಗಳಿಗೆ ಅನಿಲ ವಿತರಣೆ ಮಾಡಬೇಕು ಎಂಬ ಉದ್ದೇಶ ಗೈಲ್ ಸಂಸ್ಥೆಯದು.

    ನಗರದ ಎಂಜಿ ರಸ್ತೆಯ ಒಂದು ಬದಿ ಕೆಲವು ಮೀಟರ್‌ಗಳ ಅಂತರದಲ್ಲಿ ಕಾಂಕ್ರೀಟ್ ರಸ್ತೆ ಕತ್ತರಿಸಿ ಗುಂಡಿ ನಿರ್ಮಿಸಿ, ಅಡ್ಡಲಾಗಿ ಪೈಪ್ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಹೊರಿಝಾಂಟಲ್ ಡೈರೆಕ್ಷನ್ ಡ್ರಿಲ್ಲಿಂಗ್(ಎಚ್‌ಡಿಡಿ) ಯಂತ್ರ ಉಪಯೋಗಿಸಲಾಗುತ್ತಿದೆ. ರಸ್ತೆಯನ್ನು ಉದ್ದವಾಗಿ ಅಗೆದು ಎಂಡಿಪಿಇ(ಮೀಡಿಯಂ ಡೆನ್ಸಿಟಿ ಪಾಲಿಥಿಲೀನ್) ಪೈಪ್ ಅಳವಡಿಸುವ ಬದಲು ಒಂದು ಗುಂಡಿ ಮಾಡಿ ನೆಲದ ಅಡಿಯಿಂದಲೇ ನಿರ್ದಿಷ್ಟ ದೂರದವರೆಗೆ ಡ್ರಿಲ್ ಮಾಡಿ ಪೈಪನ್ನು ದೂಡಲಾಗುತ್ತದೆ.
    ಪೈಪ್ ಮಣ್ಣಿನೊಳಗಿನ ಅಡೆತಡೆ ನಿವಾರಿಸಿ, ಯಾವುದೇ ತೊಂದರೆಯಾಗದೆ ಈ ಎಚ್‌ಡಿಡಿ ಯಂತ್ರ ಪೈಪ್ ಅಳವಡಿಸುತ್ತದೆ. ಇಂಟರ್‌ನೆಟ್ ಸಂಪರ್ಕದ ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಇದೇ ಮಾದರಿಯಲ್ಲಿ ಅಳವಡಿಸುವ ಕೆಲಸ ನಡೆಯುತ್ತದೆ. ನಗರದ ಕೆಲವೊಂದು ಪ್ರದೇಶಗಳು ಈ ಮೊದಲು ಗದ್ದೆ, ಬಯಲಾಗಿದ್ದು, ಅಲ್ಲಿ ಈಗಲೂ ಮೇಲ್ಮಟ್ಟದಲ್ಲೇ ನೀರಿನ ಒರತೆ ಇದೆ. ಪೈಪ್ ಡ್ರಿಲ್ಲಿಂಗ್ ವೇಳೆ ಕೊಡಿಯಾಲ್‌ಬೈಲ್ ಮೊದಲಾದ ತಗ್ಗು ಪ್ರದೇಶಗಳಲ್ಲಿ ನೀರಿನ ಒಸರು ಡ್ರಿಲ್ಲಿಂಗ್‌ಗೆ ಸಮಸ್ಯೆಯಾಗುತ್ತಿದೆ.

    ಸಂಚಾರಕ್ಕೆ ಅನನುಕೂಲ: ಎಂಜಿ ರಸ್ತೆ ಅತಿಹೆಚ್ಚು ವಾಹನ ಸಂಚಾರವಿರುವ ಮಂಗಳೂರಿನ ಪ್ರಮುಖ ರಸ್ತೆಯಾಗಿದ್ದು, ಪೈಪ್ ಅಳವಡಿಕೆ ಕೆಲಸದಿಂದ ವಾಹನ ಸಂಚಾರ, ಜನರ ಓಡಾಟಕ್ಕೂ ಅಡ್ಡಿಯಾಗಿದೆ. ಇತ್ತೀಚೆಗಷ್ಟೇ ನಿರ್ಮಿಸಲಾದ ಫುಟ್‌ಪಾತ್, ಕಾಂಕ್ರೀಟ್ ರಸ್ತೆಯನ್ನೂ ಅಗೆದು, ನಗರದ ಸೌಂದರ್ಯ ಹಾಳು ಮಾಡಲಾಗುತ್ತಿದೆ ಎಂಬ ದೂರುಗಳೂ ಕೇಳಿ ಬಂದಿವೆ. ಅಭಿವೃದ್ಧಿ ಕಾರ್ಯಗಳು ನಡೆಯುವ ಸಂದರ್ಭ ಅನನುಕೂಲಗಳಾಗುವುದು ಸಹಜ. ಕೆಲವು ದಿನಗಳ ಮಟ್ಟಿಗೆ ಸಹಿಸಿಕೊಳ್ಳುವ ಅಗತ್ಯವಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆ, ಫುಟ್‌ಪಾತ್ ಸಹಜ ಸ್ಥಿತಿಗೆ ತರುವುದು ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಜವಾಬ್ದಾರಿ ಎನ್ನುತ್ತಾರೆ ಅಧಿಕಾರಿಗಳು.

    57 ಸಾವಿರ ನೋಂದಣಿ: 3.5 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ನಗರದ ಒಟ್ಟು 12 ವಾರ್ಡ್‌ಗಳಲ್ಲಿ ಪ್ರಸ್ತುತ ಪೈಪ್ ಅಳವಡಿಸಲು ಉದ್ದೇಶಿಸಲಾಗಿದೆ. ದೇರೆಬೈಲ್ ದಕ್ಷಿಣ, ದೇರೆಬೈಲ್ ಪಶ್ಚಿಮ, ದೇರೆಬೈಲ್ ನೈಋತ್ಯ, ಬೋಳೂರು, ಮಣ್ಣಗುಡ್ಡ, ಕಂಬ್ಳ, ಕೊಡಿಯಾಲ್‌ಬೈಲ್, ಬಿಜೈ, ಕದ್ರಿ ದಕ್ಷಿಣ, ಬೆಂದೂರು, ಕೋರ್ಟ್, ಡೊಂಗರಕೇರಿ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಕೆ ಕೆಲಸ ನಡೆಯಲಿದೆ. ಪ್ರಸ್ತುತ ಎಲ್ಲ ವಾರ್ಡ್‌ಗಳಲ್ಲಿ ಸೇರಿ 57 ಸಾವಿರ ವೈಯಕ್ತಿಕ ಮನೆಗಳಿಗೆ ಗ್ಯಾಸ್ ಸಂಪರ್ಕಕ್ಕಾಗಿ ನೋಂದಣಿ ಮಾಡಲಾಗಿದೆ, 6,500 ಮನೆಗಳಿಗೆ ಪೈಪ್ ಸಂಪರ್ಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೆದ್ದಾರಿಯಲ್ಲೂ ಬಿರುಸಿನ ಕೆಲಸ: ಮಂಗಳೂರು ನಗರಕ್ಕೆ ಹೊರವಲಯದ ಅರ್ಕುಳದಲ್ಲಿರುವ ಕೊಚ್ಚಿ ಮಂಗಳೂರು ನಡುವಿನ ರಿಗ್ಯಾಸಿಫೈಡ್ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಆರ್‌ಎಲ್‌ಎನ್‌ಜಿ) ಪೈಪ್‌ಲೈನ್‌ನ ಟರ್ಮಿನಲ್‌ನಿಂದ ಮಂಗಳೂರು ನಗರಕ್ಕೆ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್ ) ಪೂರೈಕೆಯಾಗಲಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸ್ಟೀಲ್ ಪೈಪ್ ಅಳವಡಿಕೆ ಕೆಲಸ ಭರದಿಂದ ಸಾಗಿದೆ. ಅರ್ಕುಳದಿಂದ ಮಂಗಳೂರು ಮೂಲಕ ಸುರತ್ಕಲ್‌ವರೆಗೆ ಒಟ್ಟು 27 ಕಿ.ಮೀ. ಪೈಪ್‌ಲೈನ್ ವ್ಯಾಪ್ತಿಯಲ್ಲಿ ಅಳವಡಿಕೆ ನಡೆಯಲಿದ್ದು, ಇದರಲ್ಲಿ 10 ಕಿ.ಮೀ.ಗೆ ಅನುಮತಿ ಸಿಕ್ಕಿದೆ.

    ಮಂಗಳೂರು ನಗರಕ್ಕೆ ಶೀಘ್ರ ಪೈಪ್ ಅನಿಲ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಭರದಿಂದ ನಡೆಯುತ್ತಿದೆ. ನಗರದ ಮುಖ್ಯರಸ್ತೆ ಮತ್ತು ಒಳ ರಸ್ತೆಗಳು ಸೇರಿ ಪ್ರಸ್ತುತ ಆರು ವಾರ್ಡ್‌ಗಳಲ್ಲಿ 13 ಕಿ.ಮೀ.ನಷ್ಟು ಪೈಪ್ ಅಳವಡಿಸಲಾಗಿದೆ.
    ವಿಲೀನ್ ಝುಂಕೆ ಗೈಲ್ ಗ್ಯಾಸ್ ಡಿಜಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts