More

    ಮಾರಿಕಾಂಬೆ ಜಾತ್ರೆಗೆ ವಿಧ್ಯುಕ್ತ ಚಾಲನೆ

    ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬಾ ದೇವಿಯ ಐದು ದಿನಗಳ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆತಿದೆ. ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು.

    ಬೆಳಗ್ಗೆ ಬಿ.ಬಿ. ರಸ್ತೆಯ ನಾಡಿಗರ ಮನೆಯವರು ಪೂಜೆ ಸಲ್ಲಿಸಿದ ಬಳಿಕ ಗಾಂಧಿಬಜಾರ್ ಮುಖ್ಯ ರಸ್ತೆಯಲ್ಲಿ ದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ದೇವಿ ದರ್ಶನಕ್ಕೆ ಬೆಳಗ್ಗೆಯಿಂದಲೇ ಭಕ್ತಸಾಗರವೇ ಹರಿದು ಬಂದಿತ್ತು. ಬೆಳಗ್ಗೆ 4ರಿಂದ ಸರತಿ ಸಾಲಿನಲ್ಲಿ ನಿಂತಿದ್ದರು. ಪೂಜೆ ಅರ್ಧ ತಾಸು ತಡವಾಗಿ ಆರಂಭವಾಗಿದ್ದರಿಂದ ಸರತಿ ಸಾಲು ಮತ್ತಷ್ಟು ಬೆಳೆಯಿತು. ಸುಮಾರು ಐದು ತಾಸು ಬಳಿಕ ಅನೇಕರಿಗೆ ದರ್ಶನ ಸಿಕ್ಕಿತ್ತು. ದೇವಿಗೆ ಉಡಿ ತುಂಬಲು ಸಹಸ್ರಾರು ಸಂಖ್ಯೆಯ ಮಹಿಳೆಯರು ಸರದಿಯಲ್ಲಿ ನಿಂತಿದ್ದರು.
    ದೇವಿಗೆ ಸೀರೆ, ಅರಿಶಿಣ, ಕುಂಕುಮ, ಬಳೆ, ಕಣ ಅರ್ಪಿಸಿ ಹರಕೆ ತೀರಿಸಿದರು. ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಾರು ಒಂದೂವರೆ ಕಿ.ಮೀ.ವರೆಗೂ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಚಿಕ್ಕ ಮಕ್ಕಳನ್ನು ಮಾರಿಕಾಂಬೆಯ ಮಡಿಲಿನಲ್ಲಿ ಕೂರಿಸಿ ಆಶೀರ್ವಾದ ಪಡೆಯಲಾಯಿತು.
    ಬಿಸಿಲು ಹೆಚ್ಚಾದ ನಂತರ ಸರದಿಯಲ್ಲಿ ನಿಂತು ದರ್ಶನ ಪಡೆಯುವುದು ಕಷ್ಟ ಎಂದುಕೊಂಡು ಮುಂಜಾನೆಯೇ ದರ್ಶನಕ್ಕೆ ಬಂದವರ ಸಂಖ್ಯೆ ಹೆಚ್ಚಿತ್ತು. ಒಂದು ಹಂತದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್‌ವರೆಗೂ ಭಕ್ತರ ಸರದಿ ಸಾಲು ಬೆಳೆದಿತ್ತು. ಸಂಜೆ ನಂತರ ಭಕ್ತರ ಸರದಿ ಸಾಲು ಇನ್ನಷ್ಟು ಬೆಳೆದಿತ್ತು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮುಂತಾದವರು ದೇವಿ ದರ್ಶನ ಪಡೆದರು.
    ದೇವಾಲಯ ಸಮಿತಿ ಪ್ರಮುಖರು, ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ನಿರ್ಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಭಕ್ತರು ದೇವಿ ದರ್ಶನ ಪಡೆಯಲು ಅನುಕೂಲವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪೊಲೀಸರು, ಸ್ವಯಂ ಸೇವಕರು, ದೇವಸ್ಥಾನ ಸಮಿತಿಯವರು ಆಗಾಗ ಮೈಕ್‌ಗಳ ಮೂಲಕ ಸೂಚನೆಗಳನ್ನು ನೀಡುತ್ತಿದ್ದರು. ಗಾಂಧಿ ಬಜಾರ್ ಹಾಗೂ ಮಾರಿಕಾಂಬಾ ದೇವಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
    ಮಂಗಳವಾರ ರಾತ್ರಿ 10ರ ಸುಮಾರಿಗೆ ಉಪ್ಪಾರ ಸಮಾಜದವರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಮಾರಿ ಗದ್ದುಗೆವರೆಗೂ ಕರೆತಂದರು. ಈ ವೇಳೆ ಮಂಗಳ ವಾದ್ಯಗಳೊಂದಿಗೆ ದೇವಿಯನ್ನು ಎದುರುಗೊಂಡ ಗಂಗಾಮತಸ್ಥ ಸಮಾಜದವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
    ಸಂಘ ಸಂಸ್ಥೆಗಳಿಂದ ಸೇವೆ: ದೇವಿ ದರ್ಶನಕ್ಕೆ ತಾಸುಗಟ್ಟಲೇ ಸರದಿಯಲ್ಲಿ ನಿಂತ ಭಕ್ತರಿಗೆ ಆಯಾಸವಾಗದಂತೆ ಹಲವೆಡೆಗಳಲ್ಲಿ ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಹಲವು ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ವಿತರಣೆ ಮಾಡುತ್ತಿದ್ದರು. ಪೊಲೀಸ್ ಸಿಬ್ಬಂದಿ ವಾಹನ ಹಾಗೂ ಜನರ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ಗೊಂದಲವಾಗದಂತೆ ಕ್ರಮ ವಹಿಸಿದರು. ಸುರಕ್ಷತೆ ದೃಷ್ಟಿಯಿಂದ ಗಾಂಧಿ ಬಜಾರ್ ಹಾಗೂ ಕೋಟೆ ಮಾರಿಕಾಂಬಾ ದೇವಾಲಯ ಸೇರುವ ಸಂಪರ್ಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts