More

    ಪೆಗಾಸಸ್​ ಪ್ರಕರಣ: ಸುಪ್ರೀಂ ಕೋರ್ಟ್​ ಮುಂದೆ ಹೇಳಿಕೆ ಸಲ್ಲಿಸುವುದಿಲ್ಲ ಎಂದ ಕೇಂದ್ರ ಸರ್ಕಾರ!

    ನವದೆಹಲಿ: ಪೆಗಾಸಸ್​ ಬೇಹುಗಾರಿಕೆ ವಿವಾದದ ಸಂಬಂಧವಾಗಿ ವಿವರವಾದ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಪೆಗಾಸಸ್​ ಸಾಫ್ಟ್​ವೇರ್​ ಬಳಸಿ ವಿಪಕ್ಷ ರಾಜಕಾರಣಿಗಳ ಮತ್ತು ಪತ್ರಕರ್ತರ ಫೋನ್​ಗಳನ್ನು ಹ್ಯಾಕ್​ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಿಬಿಐ ತನಿಖೆ ಕೋರಿರುವ ಸರಣಿ ರಿಟ್​ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರ ಈ ನಿಲುವು ಧರಿಸಿದೆ.

    ಭಯೋತ್ಪಾದನೆಯನ್ನು ಹತ್ತಿಕ್ಕಲು ಸರ್ಕಾರ ಯಾವ ಸಾಫ್ಟ್​ವೇರನ್ನು ಬಳಸುತ್ತಿದೆ ಎಂಬುದು ಭಯೋತ್ಪಾದಕ ಸಂಘಟನೆಗಳಿಗೆ ತಿಳಿಯದಿದ್ದರೆ ಒಳ್ಳೆಯದು. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿರುವುದರಿಂದ ಸವಿವರ ಅಫಿಡೆವಿಟ್​ ಸಲ್ಲಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ, ಅರ್ಜಿದಾರರ ಆರೋಪಗಳನ್ನು ಪರಿಗಣಿಸಲು ವಿಷಯತಜ್ಞರ ಸಮಿತಿಯೊಂದನ್ನು ರಚಿಸಲು ಸರ್ಕಾರ ಸಿದ್ಧವಿದೆ ಎಂದು ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ಹೇಳಿದ್ದಾರೆ.

    ಇದನ್ನೂ ಓದಿ: ಗುಜರಾತ್​ನ 17ನೇ ಸಿಎಂ ಆಗಿ ಭೂಪೇಂದ್ರ ಪಟೇಲ್​​ ಪ್ರಮಾಣ ವಚನ

    “ಒಂದು ನಿರ್ದಿಷ್ಟ ಸಾಫ್ಟ್​ವೇರ್​ಅನ್ನು ಬಳಸಲಾಗಿತ್ತೋ ಇಲ್ಲವೋ ಎಂಬುದು ಒಂದು ಅಫಿಡೆವಿಟ್​ ಅಥವಾ ಸಾರ್ವಜನಿಕ ಭಾಷಣದ ವಿಷಯವಾಗಲು ಸಾಧ್ಯವಿಲ್ಲ. ಟಾರ್ಗೆಟ್​ ಗುಂಪುಗಳು ಮತ್ತು ಭಯೋತ್ಪಾದಕ ಗುಂಪುಗಳಿಗೆ ಸರ್ಕಾರ ಯಾವ ಸಾಫ್ಟ್​ವೇರ್​ ಬಳಸುತ್ತಿದೆ ಎಂಬುದು ತಿಳಿಯಬಾರದು” ಎಂದ ಮೆಹ್ತಾ, “ನಾವು ವಿಷಯತಜ್ಞರ ಸಮಿತಿಯೊಂದನ್ನು ರಚಿಸುತ್ತೇವೆ. ತಮ್ಮ ದೂರವಾಣಿ ಸಂಖ್ಯೆಗಳನ್ನು ಇಂಟರ್​ಸೆಪ್ಷನ್​ಗೆ ಒಳಪಡಿಸಲಾಯಿತು ಎನ್ನುತ್ತಿರುವ ಅರ್ಜಿದಾರರ ಆರೋಪವನ್ನು ಸಮಿತಿ ಪರಿಗಣಿಸುತ್ತದೆ. ಸಮಿತಿಯ ವರದಿಯನ್ನು ನ್ಯಾಯಪೀಠದ ಮುಂದೆ ಇಡಲಾಗುವುದು” ಎಂದರು.

    ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರು, “ನಾವು ನಮ್ಮ ಮಧ್ಯಂತರ ಆದೇಶವನ್ನು ಕಾಯ್ದಿರಿಸುತ್ತೇವೆ. ನಿಮಗೆ 2-3 ದಿನಗಳ ಕಾಲಾವಕಾಶವಿದೆ. ಈ ಬಗ್ಗೆ ಪುನರ್​ಚಿಂತನೆ ನಡೆಸಿದಲ್ಲಿ, ಕೋರ್ಟ್​ನ ಮುಂದೆ ಹೇಳಬಹುದು” ಎಂದರು. (ಏಜೆನ್ಸೀಸ್)

    2 ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಖೋಖೋ ಆಟಗಾರ್ತಿ, ಮಸಣದ ಪಾಲು

    ಆತ್ಮಹತ್ಯೆಗೆ ತಯಾರಾಗಿದ್ದವನ ಪ್ರಾಣ ರಕ್ಷಿಸಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts