More

    ಮೂರು ರಾಜಧಾನಿ ನಿರ್ಧಾರ ರಾಜ್ಯಕ್ಕೆ ಬಿಟ್ಟ ವಿಚಾರ: ಮಧ್ಯ ಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರ

    ನವದೆಹಲಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರ ಮಹತ್ವದ ಮೂರು ರಾಜಧಾನಿ ಯೋಜನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಖಡಾಖಂಡಿತವಾಗಿ ತಿರಸ್ಕರಿಸಿದೆ.

    ಯೋಜನೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಿಳಿಸಿದೆಯೇ ಮತ್ತು ಮಧ್ಯಸ್ಥಿಕೆ ವಹಿಸಲು ಕೇಂದ್ರ ಯಾವುದಾದರೂ ಯೋಜನೆ ರೂಪಿಸಿದೆಯೇ ಎಂಬುದನ್ನು ತಿಳಿದುಕೊಳ್ಳಲು ತೆಲುಗು ದೇಶಂ ಪಕ್ಷದ ಸಂಸದ ಜಯದೇವ್​ ಗಾಲಾ ಅವರು ಕೇಂದ್ರ ಸರ್ಕಾರದ ಮುಂದೆ ಪ್ರಶ್ನೆ ಎತ್ತಿದ್ದರು.

    ಇದಕ್ಕೆ ಸಂಸತ್ತಿನಲ್ಲಿ ಉತ್ತರ ನೀಡಿರುವ ರಾಜ್ಯ ವ್ಯವಹಾರಗಳ ಕೇಂದ್ರ ಸಚಿವ ನಿತ್ಯಾನಂದ ರೈ, ಪ್ರತಿಯೊಂದು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ರಾಜಧಾನಿ ರಚಿಸಿಕೊಳ್ಳುವ ಪರಮಾಧಿಕಾರವಿದೆ ಎಂದು ಹೇಳಿದ್ದಾರೆ, ಈ ಮೂಲಕ ಮೂರು ರಾಜಧಾನಿಗಳು ಸಿಎಂ ಜಗನ್​ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

    ಈ ಹಿಂದೆ ಆಂಧ್ರ ಸರ್ಕಾರದ ಸಿಎಂ ಆಗಿದ್ದ ಟಿಡಿಪಿ ನೇತೃತ್ವದ ಚಂದ್ರಬಾಬ್​ ನಾಯ್ಡು ಅವರು 2014ರಲ್ಲಿ ರಾಜ್ಯವು ತೆಲಂಗಾಣ ಮತ್ತು ಆಂಧ್ರ ಎಂದು ಎರಡು ರಾಜ್ಯಗಳಾಗಿ ವಿಭಾಗವಾದ ಬಳಿಕ ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದರು. 2015ರಲ್ಲಿ ಅಮರಾವತಿ ಆಂಧ್ರದ ರಾಜಧಾನಿ ನೋಟಿಫಿಕೇಶನ್​ ಕೂಡ ಹೊರಡಿಸಿತ್ತು.

    ಕಳೆದ ವರ್ಷ ನಡೆದ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷವು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಸಿಎಂ ಅಧಿಕಾರ ಸ್ವೀಕರಿಸಿದ ಜಗನ್​, ಅಮರಾವತಿ ರಾಜಧಾನಿ ಅಭಿವೃದ್ಧಿ ಕೆಲಸಗಳಿಗೆ ತಡೆ ನೀಡಿದ್ದರು. ಇತ್ತೀಚೆಗಷ್ಟೇ ಮೂರು ರಾಜಧಾನಿ ಮಸೂದೆಯನ್ನು ಜಾರಿಗೊಳಿಸಿದೆ. ಇದೇ ವಿಚಾರಕ್ಕೆ ಆಂಧ್ರದ ವಿಧಾನ ಪರಿಷತ್ತನ್ನು ಕೂಡ ಸಿಎಂ ಜಗನ್​​ ಸಂಪುಟ ರದ್ದುಗೊಳಿಸಿದೆ.

    ಸಿಎಂ ಜಗನ್​ ಯೋಜನೆ ಪ್ರಕಾರ ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿಯಾಗಿದ್ದರೆ, ಅಮರಾವತಿ ಶಾಸಕಾಂಗ ರಾಜಧಾನಿಯಾಗಿರುತ್ತದೆ. ಇನ್ನೊಂದು ಕರ್ನೂಲ್​ ನ್ಯಾಯಾಂಗ ರಾಜಧಾನಿಯಾಗಿರುತ್ತದೆ. ಈ ಯೋಜನೆಗೆ ಸಾಕಷ್ಟು ವಿರೋಧ ಕೇಳಿ ಬಂದಿದ್ದರೂ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಹೇಳುವ ಮೂಲಕ ಜಗನ್​ ನಿರ್ಧಾರವನ್ನು ಬೆಂಬಲಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts