More

    ಸಾವಿರಕ್ಕೂ ಹೆಚ್ಚಿನ ಮತದಾರರಿಗೆ ಒಂದೇ ಸ್ಥಾನ

    ತರೀಕೆರೆ: 2011ರ ಜನಗಣತಿಯಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸಾವಿರಕ್ಕೂ ಹೆಚ್ಚು ಮತದಾರರಿರುವ ತಾಲೂಕಿನ ಸಿದ್ದರಹಳ್ಳಿ ಮತಕ್ಷೇತ್ರಕ್ಕೆ ಒಂದೇ ಸ್ಥಾನ ನೀಡಲಾಗಿದೆ. ಹೀಗಾಗಿ ಸ್ಪರ್ಧಾಕಾಂಕ್ಷಿಗಳು ಒಲ್ಲದ ಮನಸ್ಸಿನಿಂದ ಚುನಾವಣಾ ಆಯೋಗ ನಿಗದಿಪಡಿಸಿದ ಒಂದು ಸ್ಥಾನದಲ್ಲೇ ಪೈಪೋಟಿ ನಡೆಸುವಂತಾಗಿದೆ.

    ಸಿದ್ದರಹಳ್ಳಿ ಗ್ರಾಪಂ ಸೀತಾಪುರ ಕಾವಲು ಸೇರಿ ದುಗ್ಲಾಪುರ, ಸಿದ್ದರಹಳ್ಳಿ, ಚಿಕ್ಕಾತ್ತೂರು ಮತ ಕ್ಷೇತ್ರಗಳನ್ನು ಒಳಗೊಂಡಿದೆ. 4 ಮತಕ್ಷೇತ್ರದ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಿದ್ದರಹಳ್ಳಿ ಮತಕ್ಷೇತ್ರಕ್ಕೆ ಕಳೆದ ಚುನಾವಣೆಯಿಂದಲೂ ಅಗತ್ಯ ಮೀಸಲಾತಿ ಮತ್ತು ಹೆಚ್ಚುವರಿ ಸದಸ್ಯ ಸ್ಥಾನದ ಬೇಡಿಕೆ ಇಲ್ಲಿಯವರೆಗೆ ಈಡೇರದಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ.

    2015ರ ಗ್ರಾಪಂ ಸಾರ್ವತ್ರಿಕ ಚುನಾವಣೆಗೂ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳ ಪ್ರಮಾದದಿಂದ ಈ ಹಿಂದೆ ಸಿದ್ದರಹಳ್ಳಿ ಮತಕ್ಷೇತ್ರಕ್ಕೆ ಇದ್ದ 3 ಸ್ಥಾನಗಳ ಪೈಕಿ 2 ಸ್ಥಾನ ಕಡಿತವಾಗಿ ಒಂದು ಸ್ಥಾನ ಮಾತ್ರ ನೀಡಿರುವುದರಿಂದ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಿದ್ದರಹಳ್ಳಿ ಮತ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳು ಒಂದೇ ಸ್ಥಾನಕ್ಕೆ ಪರಸ್ಪರ ಕಾದಾಡುವಂತಾಗಿದೆ.

    ಗ್ರಾಪಂ ಕೇಂದ್ರ ಸ್ಥಾನವಾದ ಸಿದ್ದರಹಳ್ಳಿ ಜನತೆ ಸದಸ್ಯರ ಕೊರತೆ ಜತೆ ಅಗತ್ಯ ಅನುದಾನದಿಂದ ವಂಚಿತರಾಗಿ ಏನೂ ಮಾಡದ ಪರಿಸ್ಥಿತಿಗೆ ಸಿಲುಕಿದ್ದಾರೆ. ಚುನಾವಣಾ ಆಯೋಗ ಗಮನ ಹರಿಸಿ ಇಲ್ಲಿನ ಅವ್ಯವಸ್ಥೆ ಸರಿ ಪಡಿಸಬೇಕು ಎಂದು ಗ್ರಾಮಸ್ಥ ಪ್ರದೀಪ್​ಕುಮಾರ್ ಒತ್ತಾಯಿಸಿದ್ದಾರೆ.

    ಅಧಿಕಾರಿಗಳ ಎಡವಟ್ಟು: 1000 ಮತದಾರರಿಗೂ ಒಂದು ಸ್ಥಾನ 200 ಮತದಾರರಿಗೂ ಒಂದು ಸ್ಥಾನ ಎಂಬ ನಿಲುವು ತೋರಿರುವ ಚುನಾವಣಾ ಆಯೋಗ ಸಾವಿರ ಮತದಾರರಿರುವ ಸಿದ್ದರಹಳ್ಳಿ ಮತಕ್ಷೇತ್ರಕ್ಕೆ 1 ಸದಸ್ಯ ಸ್ಥಾನ ನಿಗದಿಗೊಳಿಸಿ ಎಡವಟ್ಟು ಮಾಡಿದೆ. ಸಿದ್ದರಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರತಿ ಕ್ಷೇತ್ರದಲ್ಲೂ ಇಂತಹ ಪ್ರಮಾದವಾಗಿರುವುದು ಸ್ಪಷ್ಟವಾಗುತ್ತದೆ. ಕೇವಲ 214 ಮತದಾರರಿರುವ ಚಿಕ್ಕಾತ್ತೂರು ಮತಕ್ಷೇತ್ರಕ್ಕೆ 1 ಸದಸ್ಯ ಸ್ಥಾನ ನಿಗದಿಗೊಳಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ.

    ಒಬ್ಬರೇ ನಿಭಾಯಿಸುವುದು ಕಷ್ಟ: ಜನಗಣತಿ ಪ್ರಕಾರ 400 ಮತದಾರರಿಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಸಿದ್ದರಹಳ್ಳಿ ಮತಕ್ಷೇತ್ರಕ್ಕೆ ಆಯ್ಕೆಯಾಗುವ ಒಬ್ಬನೇ ಸದಸ್ಯ 4 ಗ್ರಾಮಗಳ ಹೊರೆ ಹೊರುವಂತಾಗಿದೆ. ಆಯ್ಕೆಯಾಗುವ ಒಬ್ಬನೇ ಸದಸ್ಯ ತನ್ನ ವ್ಯಾಪ್ತಿಗೆ ಬರುವ 4 ಗ್ರಾಮಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಇದರಿಂದ ಜನರಿಗೆ ನ್ಯಾಯಯುತ ಸೌಲಭ್ಯ ಕಲ್ಪಿಸುವುದು ಸವಾಲಾಗಿದೆ.

    ಹೋರಾಟಕ್ಕೆ ಸಿಗದ ನ್ಯಾಯ: ಸಿದ್ದರಹಳ್ಳಿ ಮತಕ್ಷೇತ್ರದ ಸದಸ್ಯ ಸ್ಥಾನ ಕಡಿತಗೊಳಿಸಿರುವ ಚುನಾವಣಾ ಆಯೋಗದ ಕ್ರಮ ಖಂಡಿಸಿ ಗ್ರಾಮಸ್ಥರು ಕಳೆದ ಬಾರಿಯ ಗ್ರಾಪಂ ಚುನಾವಣೆ ಬಹಿಷ್ಕರಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಹೋರಾಟದ ಹೊರತಾಗಿಯೂ ಚುನಾವಣಾ ಆಯೋಗ ಅಂತಿಮ ಹಂತದಲ್ಲಿ ಚುನಾವಣೆ ನಡೆಸಿದೆ. ಈಗಾಗಲೇ ಹೈಕೋರ್ಟ್​ನಲ್ಲಿ ಸೀಟು ಹಂಚಿಕೆಯ ವಿಚಾರಕ್ಕೆ ದಾವೆ ಹೂಡಿ ನ್ಯಾಯ ಕೇಳಲಾಗಿದೆ. ಚುನಾವಣೆ ಘೊಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದರೂ ತೀರ್ಪ ಹೊರ ಬಂದಿಲ್ಲ. ಇದರಿಂದ ಗ್ರಾಮಸ್ಥರು ನಿರಾಸೆ ಅನುಭವಿಸುವಂತಾಗಿದೆ.

    ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ: ನಾಲ್ಕು ಗ್ರಾಮವನ್ನೊಳಗೊಂಡಿರುವ ಸಿದ್ದರಹಳ್ಳಿ ಮತಕ್ಷೇತ್ರಕ್ಕೆ ಒಬ್ಬರೇ ಸದಸ್ಯರನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಸರ್ಕಾರ ಬಿಡುಗಡೆ ಮಾಡುವ ಅನುದಾನ ಇತರೆ ಮತಕ್ಷೇತ್ರದ ಪ್ರತಿ ಸದಸ್ಯರಿಗೂ ಸಮಾನ ಹಂಚಿಕೆಯಾಗಿ ಸಿದ್ದರಹಳ್ಳಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಆಯ್ಕೆಯಾಗುವ ಒಬ್ಬರೇ ಸದಸ್ಯರು ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗದೆ ಪರಿತಪಿಸುವಂತಾಗುತ್ತಿದೆ.

    ಮೀಸಲಾತಿಯಲ್ಲೂ ಅನ್ಯಾಯ: ಲಿಂಗಾಯತ, ಒಕ್ಕಲಿಗ, ಕುರುಬ ಸೇರಿ ಇನ್ನಿತರ ಸಾಮಾನ್ಯ ವರ್ಗದ ಜನರೇ ಹೆಚ್ಚಾಗಿ ನೆಲೆಸಿರುವ ಸಿದ್ದರಹಳ್ಳಿ ಮತಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟಿರುವ ಪರಿಶಿಷ್ಟ ಜನಾಂಗದವರಿಗೆ ಮೀಸಲಾತಿ ನೀಡಲಾಗಿದೆ. ಪರಿಶಿಷ್ಟ ಜನಾಂಗದವರು ಬೆರಳೆಣಿಕೆಯಷ್ಟಿದ್ದರೂ, 2015ರ ಚುನಾವಣೆಯಲ್ಲಿದ್ದ (ಎಸ್​ಸಿ ಸಾಮಾನ್ಯ) ಮೀಸಲಾತಿಯನ್ನು ಈ ಬಾರಿಯೂ ಮುಂದುವರಿಸಲಾಗಿದೆ.

    ಸಿದ್ದರಹಳ್ಳಿ ಗ್ರಾಪಂ ಸ್ಥಿತಿಗತಿ: ಸಿದ್ದರಹಳ್ಳಿ ಗ್ರಾಪಂನಲ್ಲಿ ಸಿದ್ದರಹಳ್ಳಿ, ಸೀತಾಪುರ ಕಾವಲು, ದುಗ್ಲಾಪುರ, ಚಿಕ್ಕಾತ್ತೂರು 4 ಮತ ಕ್ಷೇತ್ರಗಳಿದ್ದು, ಒಟ್ಟು 3,772 ಮತದಾರರಿದ್ದಾರೆ. ಸಿದ್ದರಹಳ್ಳಿ ಮತ ಕ್ಷೇತ್ರದಲ್ಲಿ ಒಟ್ಟು 1,053 ಮತದಾರರಿಗೆ 1 ಸ್ಥಾನ ನೀಡಲಾಗಿದೆ. ಸೀತಾಪುರ ಕಾವಲು ಕ್ಷೇತ್ರದಲ್ಲಿ 1,200 ಮತದಾರರಿಗೆ 4 ಸ್ಥಾನ , ದುಗ್ಲಾಪುರ 1,285 ಮತದಾರರಿಗೆ 5 ಸ್ಥಾನ, ಚಿಕ್ಕಾತ್ತೂರು ಮತ ಕ್ಷೇತ್ರದಲ್ಲಿ 214 ಮತದಾರರಿಗೆ 1 ಸ್ಥಾನ ಮೀಸಲಿಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts