More

    ಸರ್ವರಿಗೂ ಒಪ್ಪಿತವಾಗುವ ರೀತಿ ಜಯಂತಿಗಳ ಆಚರಣೆ: ಸರ್ವಜ್ಞ ಜಯಂತಿಯಲ್ಲಿ ಸಚಿವ ಸಿ.ಟಿ. ರವಿ ಭರವಸೆ

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಿರ್ದಿಷ್ಟವಾದ ಜಾತಿಗೆ ಸೀಮಿತವಾಗದೆ, ಸರ್ವರೂ ಒಪು್ಪವಂತೆ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಏಪ್ರಿಲ್ ಒಳಗೆ ಸರ್ವಪಕ್ಷಗಳ ಮುಖಂಡರ ಸಭೆ ಕರೆದು, ಈ ಬಗ್ಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಜಾತಿ ಆಧಾರಿತವಾಗಿ ಜಯಂತಿಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಅದನ್ನು ಬದಲಿಸಬೇಕಿದೆ. ಹಾಗಾಗಿ ಜಯಂತಿ ಆಚರಣೆಗಳ ಕುರಿತು ಎಲ್ಲ ವರ್ಗದ, ಸಮಾಜದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಂತರ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ರ್ಚಚಿಸಿ ಜಯಂತಿ ಆಚರಣೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಸರ್ವಜ್ಞರ ವ್ಯಕ್ತಿತ್ವ ಜಾತಿ, ಭಾಷೆ, ಲಿಂಗ ಹಾಗೂ ಗಡಿಯನ್ನು ಮೀರಿದ್ದಾಗಿದೆ. ಹಾಗಾಗಿ ಅವರು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶವರೆಗೂ ಅವರ ಖ್ಯಾತಿ ಹಬ್ಬಿದೆ. ಅವರೊಬ್ಬ ದಾರ್ಶನಿಕ, ತತ್ವಜ್ಞಾನಿ ಹಾಗೂ ಅವಧೂತರಾಗಿದ್ದರು. ಅವರ ಪ್ರತಿಮೆಯನ್ನು ತಮಿಳುನಾಡಿನ ಚೆನ್ನೈನಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

    ತೆಲಸಂಗಿ ಕುಂಬಾರ ಗುರುಪೀಠದ ಶರಣು ಕುಂಬಾರ ಗುಂಡಯ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಕುಂಬಾರರ ಸಂಘದ ಬೆಂಗಳೂರಿನ ಅಧ್ಯಕ್ಷ ಕೆ. ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

    ಸರ್ವಜ್ಞ ಪ್ರಾಧಿಕಾರ ರಚಿಸಿ: ರೆವರೆಂಡ್ ಉತ್ತಂಗಿ ಚನ್ನಪ್ಪ ಅವರ ಸಂಶೋಧನೆ ಫಲವಾಗಿ ಹಾವೇರಿ ಜಿಲ್ಲೆಯ ಮಾಸೂರು ಸರ್ವಜ್ಞ ಅವರ ಜನ್ಮಸ್ಥಳ ಎಂಬುದು ಸಾಕ್ಷ್ಯಾಧಾರ ಸಮೇತ ಸಾಬೀತಾಗಿದೆ. ಹಾಗಾಗಿ ಮಾಸೂರನ್ನು ಅಭಿವೃದ್ಧಿ ಮಾಡಬೇಕು. ಸರ್ವಜ್ಞ ಪ್ರಾಧಿಕಾರ ರಚಿಸಿ ಅವರ ವಚನಗಳನ್ನು ಜಗತ್ತಿಗೆ ಸಾರುವ ಕೆಲಸವಾಗಬೇಕು ಎಂದು ಉಪನ್ಯಾಸಕ ಮಲ್ಲೇಶಪ್ಪ ಗುತ್ತೆಣ್ಣನವರ ಆಗ್ರಹಿಸಿದರು.

    ಸರ್ವಜ್ಞರು ಯಾವುದೇ ಗುರುಗಳು ಹಾಗೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡದೆ ಸರ್ವರಿಂದಲೂ ಒಂದೊಂದನ್ನು ಕಲಿತು ದೊಡ್ಡ ಜ್ಞಾನಿಯಾಗಿದ್ದಾರೆ. ಅವರು ಸಮಾಜದ ಡೊಂಕು ತಿದ್ದಲು ಅನುಸರಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು.

    | ಸಿ.ಟಿ. ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ

    ಸರ್ವಜ್ಞರ ವಚನಗಳನ್ನು ಹೋಲುವಂತೆ ಕೆಲವರು ನಕಲಿ ವಚನಗಳನ್ನು ರಚಿಸುತ್ತಿದ್ದಾರೆ. ಜನರು ಅವನ್ನು ಸ್ವೀಕರಿಸಬಾರದು. ಅಂದಾಜು 2,100ಕ್ಕೂ ಹೆಚ್ಚು ಸರ್ವಜ್ಞರ ವಚನಗಳನ್ನು ಪತ್ತೆ ಮಾಡಲಾಗಿದೆ. ಸರ್ಕಾರ ಅವುಗಳನ್ನು ಪ್ರಕಟಿಸಿ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡಬೇಕು.

    | ಮಲ್ಲೇಶಪ್ಪ ಗುತ್ತೆಣ್ಣನವರ

    ಉಪನ್ಯಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts