More

    ಶೀಘ್ರದಲ್ಲಿ ಇಲ್ಲವಾಗುವ ಸಿಡಿಸಿ

    ಸುಭಾಸ ಧೂಪದಹೊಂಡ ಕಾರವಾರ

    ವಿವಾದ, ನಷ್ಟದಲ್ಲಿ ಬೆಂದ ಗೇರು ಅಭಿವೃದ್ಧಿ ನಿಗಮವು(ಸಿಡಿಸಿ) ಶೀಘ್ರದಲ್ಲೇ ಅಸ್ತಿತ್ವ ಕಳೆದುಕೊಳ್ಳಲಿದೆ. ಜಿಲ್ಲೆಯ ಕರಾವಳಿಯಲ್ಲಿ 4300 ಹೆಕ್ಟೇರ್​ಗೂ ಅಧಿಕ ಗೇರು ತೋಟ ಹೊಂದಿದ್ದ ಗೇರು ಅಭಿವೃದ್ಧಿ ನಿಗಮವನ್ನು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ (ಎಫ್​ಡಿಸಿ) ಜತೆ ವಿಲೀನ ಮಾಡಲು ಜ. 27 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ.

    ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಗೇರು ಅಭಿವೃದ್ಧಿ ನಿಗಮವು ಕುಮಟಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಿಭಾಗೀಯ ಕಚೇರಿ ಹೊಂದಿತ್ತು. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 25,655 ಹೆಕ್ಟೇರ್ ಗೇರು ನೆಡುತೋಪುಗಳನ್ನು ಹೊಂದಿತ್ತು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಐದು ತಾಲೂಕುಗಳಲ್ಲಿ ಸುಮಾರು 4388 ಹೆಕ್ಟೇರ್ ಗೇರು ತೋಟ ಅರಣ್ಯ ಇಲಾಖೆ ಲೀಸ್ ಭೂಮಿಯಲ್ಲಿತ್ತು.

    ಎಂಡೊಸಲ್ಪಾನ್ ವಿವಾದ: ಗೇರು ಬೆಳೆಗೆ ಕರಾವಳಿಯ ವಾತಾವರಣ ಸೂಕ್ತವಾಗಿದ್ದು, ಇಲ್ಲಿರುವ ಬೋಳು ಲ್ಯಾಟರೈಟ್ ಗುಡ್ಡಗಳಲ್ಲಿ ಅರಣ್ಯೀಕರಣದ ಜತೆ ಆದಾಯ ಗಳಿಸಿದಂತಾಗಲಿದೆ. ಅಲ್ಲದೆ, ಸ್ಥಳೀಯವಾಗಿ ಗೇರು ಉದ್ಯಮಗಳು ಸೃಷ್ಟಿಯಾಗಲಿವೆ ಎಂಬ ಕಾರಣಕ್ಕೆ 1978 ರಲ್ಲಿ ಗೇರು ಅಭಿವೃದ್ಧಿ ನಿಗಮ ಪ್ರಾರಂಭಿಸಲಾಯಿತು. ಆದರೆ, ನಿಗಮವು ಸರ್ಕಾರದ ಆಶಯವನ್ನು ಈಡೇರಿಸುವ ಬದಲು ಮತ್ತಷ್ಟು ಅವಾಂತರ ಸೃಷ್ಟಿಸಿಬಿಟ್ಟಿತು.

    ಸರ್ಕಾರ ಪ್ರಾರಂಭದಲ್ಲಿ ಸುಮಾರು 12,917 ಹೆಕ್ಟೇರ್ ಅರಣ್ಯ ಭೂಮಿಯನ್ನು ಇಕ್ವಿಟಿ ರೂಪದಲ್ಲಿ ಇನ್ನೂ 12,738 ಹೆಕ್ಟೇರ್ ಭೂಮಿಯನ್ನು ಲೀಸ್ ರೂಪದಲ್ಲಿ ನಿಗಮಕ್ಕೆ ನೀಡಿತ್ತು. ಗೇರು ಮರಗಳನ್ನು ಬೆಳೆಸಿದ ನಿಗಮವು 1985 ರಿಂದ 1999 ರವರೆಗೆ ಹೆಲಿಕ್ಯಾಪ್ಟರ್ ಮೂಲಕ ಎಂಡೊಸಲ್ಪಾನ್ ಕೀಟನಾಶಕ ಸಿಂಪಡಿಸಿತ್ತು. ಪರಿಣಾಮ ಮೂರು ಜಿಲ್ಲೆಗಳ ಸಾವಿರಾರು ಕುಟುಂಬಗಳು ಇಂದಿಗೂ ಅಂಗವೈಕಲ್ಯದ ನರಕ ಅನುಭವಿಸುತ್ತಿವೆ.

    ಷ್ಟದ ಹಾದಿ: ನೆಟ್ಟ ಗೇರು ನಿಗಮವು ಮರಗಳನ್ನು ಸರಿಯಾಗಿ ಆರೈಕೆ, ನಿರ್ವಹಣೆ ಮಾಡದೆ, ಕೇವಲ ಬರುವ ಬೆಳೆಯನ್ನು ಟೆಂಡರ್ ನೀಡಲು ಮಾತ್ರ ಸೀಮಿತವಾಯಿತು. ಕಾರಣ ಮರಗಳು ನರಳಿದವು. ನಿಗಮವು ರಾಜ್ಯದ ಗೇರು ಉದ್ಯಮಗಳಿಗೆ ಬೇಕಾದ ಗೋಡಂಬಿ ಪೂರೈಸುವಲ್ಲಿಯೂ ವಿಫಲವಾಗಿದೆ. ನಿಗಮದ ಆದಾಯ ಕುಂಠಿತವಾಗಿ ಒಂದು ಹಂತದಲ್ಲಿ ಭಾರಿ ಸಾಲದೊಂದಿಗೆ ನಡೆಯುವುದೆ ಕಷ್ಟ ಎಂಬ ಹಂತ ತಲುಪಿತ್ತು. ರಾಜಕೀಯ ನಿರಾಶ್ರಿತರಿಗೆ, ಅಧ್ಯಕ್ಷ ಪಟ್ಟ ಒದಗಿಸಿಕೊಡುವ, ಅರಣ್ಯ ಇಲಾಖೆಯಲ್ಲಿ ಜಾಗ ಸಿಗದ ಅಧಿಕಾರಿಗಳ ತಂಗುದಾಣ ಎಂಬ ಕೆಟ್ಟ ಹೆಸರು ನಿಗಮಕ್ಕೆ ಬಿದ್ದಿತ್ತು. 2019-20 ರಲ್ಲಿ 1.21 ಕೋಟಿ ರೂ. ನಷ್ಟದಲ್ಲಿದ್ದ ನಿಗಮವು 2021 ರಲ್ಲಿ 27.87 ಲಕ್ಷ ರೂ. ಲಾಭ ಗಳಿಸಿದೆ. ಪ್ರತಿ ಶೇರುಗಳು 37 ರೂ. ಪ್ರತಿ ಶೇರುಗಳು 37 ರೂ.ಲಾಭ ಗಳಿಸಿದ್ದವು. ಆದರೆ, ನಿಗಮ ಈಗ ಅರಣ್ಯ ನಿಗಮದ ಜತೆ ಸೇರ್ಪಡೆಯಾಗಿ ಅಸ್ತಿತ್ವ ಕಳೆದುಕೊಳ್ಳಲಿದೆ.

    ಜಿಲ್ಲೆಯ ಅಧ್ಯಕ್ಷರು: ಗೇರು ಅಭಿವೃದ್ಧಿ ನಿಗಮಕ್ಕೆ ಮಂಗಳೂರು, ಉಡುಪಿ ಭಾಗದವರೇ ಅಧ್ಯಕ್ಷರಾಗಿದ್ದು ಹೆಚ್ಚು. ಒಮ್ಮೆ ಸಿದ್ದಾಪುರದ ಗೋಪಾಲ ಕಾನಡೆ, ಕುಮಟಾದ ವಿನೋದ ಪ್ರಭು ಹಾಗೂ ಹೊನ್ನಾವರದ ಗಣಪಯ್ಯ ಗೌಡ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಡಿಎಫ್​ಒ ಹಂತದ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಲಾಗುತ್ತಿತ್ತು. ನಿಗಮಕ್ಕೆ ಕಾಯಂ ಅಧಿಕಾರಿಗಳಿಗಿಂತ ಪ್ರಭಾರಿಗಳೇ ಹೆಚ್ಚು ಕಾರ್ಯನಿರ್ವಹಿಸಿದ್ದರು.

    ಗೇರು ಅಭಿವೃದ್ಧಿ ನಿಗಮವನ್ನು ಬೇರೆ ನಿಗಮದ ಜತೆ ವಿಲೀನ ಮಾಡಿದ್ದು ಒಳ್ಳೆಯದೇ ಆಯಿತು. ನಿಗಮಕ್ಕೆ ಸರ್ಕಾರ ಅನುದಾನ ನೀಡುತ್ತಿರಲಿಲ್ಲ. ಬರುತ್ತಿದ್ದ ಆದಾಯದಲ್ಲಿ ಖರ್ಚು ಸರಿದೂಗಿಸಿಕೊಂಡು ಹೋಗುವುದೇ ಕಷ್ಟವಾಗಿತ್ತು. ಇನ್ನು ಹೊಸ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟವಾಗಿತ್ತು. ಇದರಿಂದ ಪ್ರಾದೇಶಿಕ ಕಚೇರಿಗಳನ್ನು ಬಂದ್ ಮಾಡುವಂತೆ ನಾನು ಅಧ್ಯಕ್ಷನಾಗಿದ್ದಾಗಲೇ ಶಿಫಾರಸು ಮಾಡಿದ್ದೆ.

    | ವಿನೋದ ಪ್ರಭು

    ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ

    ಗೇರು ಅಭಿವೃದ್ಧಿ ನಿಗಮಕ್ಕೆ ಈ ಹಿಂದೆ ಇದ್ದ ಸಾಲವೆಲ್ಲ ತೀರಿದೆ. ಕಳೆದ ಸಾಲಿನಲ್ಲಿ ಲಾಭ ಗಳಿಸಿದೆ. ನಿಗಮವನ್ನು ಬೇರೆ ನಿಗಮದ ಜತೆ ವಿಲೀನ ಮಾಡುವ ಬಗ್ಗೆ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ.

    | ಪ್ರಕಾಶ ನೇತಲ್ಕರ್

    ಎಂಡಿ ಗೇರು ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts