More

    VIDEO| ಕಾರು ಅಪಘಾತದ ರಕ್ಷಣಾ ಕಾರ್ಯಾಚರಣೆಯತ್ತ ನುಗ್ಗಿದ ಟ್ರಕ್​: ರಕ್ಷಣೆಗೆ ಬಂದವರ ಪ್ರಾಣವೂ ಹೋಯ್ತು!

    ಹೈದರಾಬಾದ್​: ತೆಲಂಗಾಣದ ಕರೀಮ್​ನಗರ-ಸಿದ್ದಿಪೇಟ್​ ರಸ್ತೆಯು ಕೆಲವೇ ಸೆಕೆಂಡುಗಳಲ್ಲಿ ಎರಡು ಭೀಕರ ರಸ್ತೆ ಅಪಘಾತಕ್ಕೆ ಶುಕ್ರವಾರ ಸಾಕ್ಷಿಯಾಗಿದೆ.

    ಮಧ್ಯಾಹ್ನ 2ಗಂಟೆ ವೇಳೆ ಕರೀಮ್​ನಗರದಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟರೆ, ಕಾರು ಅಪಘಾತದ ಘಟನಾ ಸ್ಥಳಕ್ಕೆ ದಾರಿಹೋಕರು ಮತ್ತು ಇಬ್ಬರು ಪೊಲೀಸರು ಧಾವಿಸಿ, ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿರುವಾಗ ನೋಡನೋಡುತ್ತಿದ್ದಂತೆ ಬಂದ ಟ್ರಕ್​ ಜನರ ಗುಂಪಿನತ್ತ ನುಗ್ಗಿತು. ಪರಿಣಾಮ ಇನ್ನಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಸಿದ್ದಿಪೇಟ್​ ಇನ್ಸ್​ಪೆಕ್ಟರ್​ ಮತ್ತು ಓರ್ವ ಕಾನ್ಸ್​ಟೇಬಲ್​ ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ರಾಜೀವ್​ ರಹದಾರಿ ಅಥವಾ ರಾಜೀವ್​ ಹೈವೇಯಲ್ಲಿ ಶುಕ್ರವಾರ ಮಧ್ಯಾಹ್ನ 2.35ರ ಸುಮಾರಿಗೆ ಕೆಲವು ಕಾರುಗಳು ಮತ್ತು ದ್ವಿಚಕ್ರ ವಾಹನ ಸವಾರರು ನಿಧಾನವಾಗಿ ಮೊದಲನೇ ಅಪಘಾತದ ದೃಶ್ಯವನ್ನು ನೋಡುತ್ತಾ ಸಾಗುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಜನರ ಗುಂಪು ಸಹ ಇತ್ತು. ಇದೇ ವೇಳೆ ವೇಗವಾಗಿ ಬಂದ ಟ್ರಕ್​ ಇನ್ನೋವಾ ಕಾರನ್ನು ಓವರ್​ಟೇಕ್​ ಮಾಡಿ ಜನರ ಗುಂಪಿನತ್ತ ಸೀದಾ ನುಗ್ಗಿ ಅನೇಕರನ್ನು ನೆಲಕ್ಕುರುಳಿಸಿತು.

    ಇದನ್ನೂ ಓದಿ: ಹೊಸ ಮನೆ ಖರೀದಿಸಿ ಗೃಹಪ್ರವೇಶಿಸಿದ ಮೊದಲ ದಿನವೇ ಮಹಿಳೆಗೆ ಕಾದಿತ್ತು ಶಾಕ್..!​

    ಸುಮಾರು 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಿದ್ದಿಪೇಟ್​ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಸಿದ್ದಿಪೇಟ್​ ಠಾಣೆಯ ಇನ್ಸ್​ಪೆಕ್ಟರ್​ ಪರಮೇಶ್ವರ್​ ಗೌಡ ಮತ್ತು ಕಾನ್ಸ್​ಟೇಬಲ್​ ಸಹ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅಪಘಾತ ಸ್ಥಳಕ್ಕೆ ಸಿದ್ದಿಪೇಟ್​ನ ಪೊಲೀಸ್​ ಕಮಿಷನರ್​ ಡಿ. ಜೋಯೆಲ್​ ಡೇವಿಸ್​ ಮತ್ತು ಅಸಿಸ್ಟೆಂಟ್​ ಕಮಿಷನರ್​ ರಾಮೇಶ್ವರ್​ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

    ಮೊದಲನೇ ಕಾರು ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟರೆ, ಟ್ರಕ್​ ಅಪಘಾತದಲ್ಲಿ ಮತ್ತಿಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದ ಎರಡು ಅಪಘಾತಗಳಿಂದ ಒಟ್ಟು ಐದು ಮಂದಿ ಪ್ರಾಣಬಿಟ್ಟಿದ್ದಾರೆ. ಕಾರು ಅಪಘಾತದಲ್ಲಿ ಮೃತಪಟ್ಟ ಮೂವರು ಕರೀಮ್​ನಗರ ನಿವಾಸಿಗಳಾಗಿದ್ದು, ಟ್ರಕ್​ ಅಪಘಾತದಲ್ಲಿ ಜೀವ ಕಳೆದುಕೊಂಡವರು ಸಿದ್ದಿಪೇಟ್​ ಮೂಲದವರು.

    ಟ್ರಕ್​ ಚಾಲಕ ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts