More

    ಕಣ್ಣಿದ್ದೂ ಕುರುಡಾದ ಸಿಸಿಟಿವಿ ಕ್ಯಾಮರಾ!

    ಹುಬ್ಬಳ್ಳಿ: ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಪತ್ತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಸಿಸಿಟಿವಿ ಕ್ಯಾಮರಾಗಳ ನಿರ್ವಹಣೆ ಕೊರತೆಯಿಂದ ಹು-ಧಾ ಅವಳಿ ನಗರದ ಬಹುತೇಕ ಸಿಸಿಟಿವಿ ಕ್ಯಾಮರಾಗಳು ಕಣ್ಣಿದ್ದೂ ಕುರುಡಾಗಿವೆ.

    ಇಲ್ಲಿಯ ಸಿಸಿಟಿವಿ ಕ್ಯಾಮರಾ ಜಾಲ ಸಣ್ಣದೇನೂ ಅಲ್ಲ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 494 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ 188 ಕ್ಯಾಮರಾಗಳು ಸುಸ್ಥಿತಿಯಲ್ಲಿವೆ. ಉಳಿದ 306 ಕ್ಯಾಮರಾಗಳು ದುರಸ್ತಿಗೆ ಬಂದಿವೆ. ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ 74 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, 72 ಸುಸ್ಥಿತಿಯಲ್ಲಿವೆ.

    ಕಮಿಷನರೇಟ್ ತಾನು ಅಳವಡಿಸಿಕೊಂಡಿರುವ ಕ್ಯಾಮರಾಗಳನ್ನು ಸ್ವತಃ ನಿರ್ವಹಿಸುತ್ತಿದೆ. ಆಯುಕ್ತರ ಕಚೇರಿ ಹಾಗೂ ಉಪನಗರ ಠಾಣೆ ಕಟ್ಟಡದ ಸಂಚಾರ ನಿರ್ವಹಣೆ ಕೇಂದ್ರ(ಟಿಎಂಸಿ)ದಲ್ಲಿ ಆ ಕ್ಯಾಮರಾಗಳ ನಿರ್ವಹಣೆ ಮಾಡಲಾಗುತ್ತಿದೆ. ಪಾಲಿಕೆ ಅಳವಡಿಸಿರುವ 404 ಕ್ಯಾಮರಾಗಳನ್ನು ಆಯಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ವಹಿಸಲಾಗಿದೆ.

    ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಕ್ಯಾಮರಾಗಳು ಉತ್ತಮವಾಗಿವೆ. ಆದರೆ, ಪಾಲಿಕೆ ವತಿಯಿಂದ ಅಳವಡಿಸಿರುವ 300ಕ್ಕೂ ಹೆಚ್ಚು ಕ್ಯಾಮರಾಗಳು ಹಾಳಾಗಿವೆ. ಲೆನ್ಸ್ ಇತ್ಯಾದಿ ಕೆಟ್ಟುಹೋಗುವುದು, ಮಳೆ- ಗಾಳಿಗೆ ವೈರ್ ತುಂಡಾಗುವುದು, ವಿದ್ಯುತ್ ಸಂಪರ್ಕ ಕಡಿತ… ಹೀಗೆ ವಿವಿಧ ಕಾರಣದಿಂದ ಕ್ಯಾಮರಾ ಇದ್ದೂ ಇಲ್ಲದಂತಾಗಿವೆ.

    ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿರುವ ಮತ್ತು ವೇಗವಾಗಿ ಬೆಳೆಯುತ್ತಿರುವ ಹು-ಧಾ ಮಹಾನಗರದಲ್ಲಿ ಸಿಸಿಟಿವಿ ಕ್ಯಾಮರಾಗಳ ಸೂಕ್ತ ನಿರ್ವಹಣೆ ಅತ್ಯಗತ್ಯವಾಗಿದೆ. ಇದು ಪಾಲಿಕೆಯವರಿಗೂ ಪೊಲೀಸರಿಗೂ ಚೆನ್ನಾಗಿ ಗೊತ್ತಿರುವ ಸಂಗತಿ. ಆದಾಗ್ಯೂ ಸರಿಯಾದ ಸಮನ್ವಯತೆ ಇಲ್ಲದ್ದರಿಂದ ವ್ಯವಸ್ಥಿತ ಯೋಜನೆ ಹಾಕಿಕೊಂಡಿರಲಿಲ್ಲ.

    ಅಪರಾಧಿಗಳಿಗೆ ಗೊತ್ತಾಗಿದೆ

    ಅವಳಿ ನಗರದಲ್ಲಿ ಸಿಸಿಟಿವಿ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಅಪರಾಧಿಗಳಿಗೆ ಗೊತ್ತಾಗಿದೆ. ಆ ಕಾರಣಕ್ಕೆ ಇತ್ತೀಚೆಗೆ ಅಪರಾಧ ಕೃತ್ಯಗಳು, ಗೂಂಡಾಗಿರಿ, ಮನೆಗಳ್ಳತನ, ಸರಗಳ್ಳತನ ಹೆಚ್ಚಳವಾಗುತ್ತಿವೆ. ಮುಂಬೈ, ದೆಹಲಿ, ಬೆಂಗಳೂರು ಮತ್ತಿತರ ಬೃಹತ್ ನಗರಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಿರುವುದರಿಂದ ಪೊಲೀಸರು ಕಂಟ್ರೋಲ್ ರೂಂನಲ್ಲಿ ಕುಳಿತುಕೊಂಡೇ ಪ್ರಕರಣ ದಾಖಲಿಸುತ್ತಾರೆ. ಸಂಚಾರ ಸಮಸ್ಯೆ ನಿಯಂತ್ರಿಸುತ್ತಾರೆ. ಅಂತಹ ವ್ಯವಸ್ಥೆ ಜಾರಿಗೆ ಪಾಲಿಕೆ ಆಸಕ್ತಿ ತೋರಬೇಕಿದೆ.

    ಭ್ರಷ್ಟಾಚಾರ ಆರೋಪ

    ಮಹಾನಗರ ಪಾಲಿಕೆ ಕೋಟ್ಯಂತರ ರೂ. ಖರ್ಚು ಮಾಡಿ ಕ್ಯಾಮರಾ ಅಳವಡಿಸಿ ಕೈತೊಳೆದುಕೊಂಡರೆ ಸಾಲದು. ಅವುಗಳ ನಿರ್ವಹಣೆ ಮಾಡುವುದು ಬಹುಮುಖ್ಯ. ಸಿಸಿಟಿವಿ ಅಳವಡಿಕೆಗೆ ಸ್ಮಾರ್ಟ್ ಸಿಟಿ ಮತ್ತಿತರ ಯೋಜನೆ ಅಡಿ ಕೋಟ್ಯಂತರ ರೂ. ವ್ಯಯಿಸಿದೆ. ಆದರೆ, ನಿರ್ವಹಣೆ ಕುರಿತು ಸ್ಪಷ್ಟತೆ ಇಲ್ಲದಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

    ಅಪರಾಧಿಗಳ ಪತ್ತೆಗೆ ಸಹಕಾರಿ

    ರಸ್ತೆ ಅಪಘಾತ, ಕೊಲೆ, ಸುಲಿಗೆ, ಸರಗಳ್ಳತನ, ಮನೆಗಳ್ಳತನ ಸೇರಿದಂತೆ ಮತ್ತಿತರ ಅಪರಾಧ ಪ್ರಕರಣಗಳ ಪತ್ತೆಗೆ ಸಿಸಿಟಿವಿ ಕ್ಯಾಮರಾಗಳ ಕೊಡುಗೆ ಅಪಾರ. ಸಿಸಿಟಿವಿ ಕ್ಯಾಮರಾ ಸರಿಯಾಗಿ ನಿರ್ವಹಣೆ ಮಾಡಿದರೆ ಎಲ್ಲ ರೀತಿಯ ಕುಕೃತ್ಯಕ್ಕೂ ಕಡಿವಾಣ ಹಾಕಬಹುದು ಎಂಬುದು ತಜ್ಞರ ಅಭಿಪ್ರಾಯ.

    35 ಫ್ಲ್ಯಾಶ್ ಕ್ಯಾಮರಾ

    ಪಾಂಡುರಂಗ ರಾಣೆ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಹು-ಧಾ ಅವಳಿ ನಗರದ ಹೊರ ವಲಯಗಳಲ್ಲಿ 35 ಅತ್ಯಾಧುನಿಕ ಫ್ಲ್ಯಾಶ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಗಬ್ಬೂರು, ನರೇಂದ್ರ, ಕುಸುಗಲ್, ಗದಗ ರಸ್ತೆ, ಧಾರವಾಡ, ಬೆಳಗಾವಿ ರಸ್ತೆ ಸೇರಿ ವಿವಿಧೆಡೆ ಅಳವಡಿಸಲಾಗಿದೆ. ಕಾರವಾರ ರಸ್ತೆಯಲ್ಲಿ ರಸ್ತೆ ವಿಸ್ತರಣೆಗಾಗಿ 1 ಕ್ಯಾಮರಾ ತೆರವುಗೊಳಿಸಲಾಗಿದೆ. ಫ್ಲ್ಯಾಶ್ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಇಡಲಾಗುತ್ತದೆ. ಇನ್ಸ್​ಪೆಕ್ಟರ್​ಗಳ ಅನುಮತಿ ಮೇರೆಗೆ ತನಿಖೆ ವೇಳೆ ಫೂಟೇಜ್ ನೀಡಲಾಗುತ್ತದೆ. ಈ ಕ್ಯಾಮರಾಗಳ ನೆರವಿನಿಂದ ಈವರೆಗೆ 35ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ ಎನ್ನುತ್ತಾರೆ ನಿರ್ವಹಣೆ ಹೊಣೆ ಹೊತ್ತಿರುವ ಟ್ರಿನಿಟಿ ಟೆಕ್ನಾಲಜಿಯ ರಜನೀಶ ಗಂಜ್ಯಾಳ.

    ಪಾಲಿಕೆ ವತಿಯಿಂದ ಸಿಸಿಟಿವಿ ಕ್ಯಾಮರಾಗಳ ನಿರ್ವಹಣೆ ಮಾಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಈ ಕುರಿತು ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

    ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ 74 ಕ್ಯಾಮರಾ ಅಳವಡಿಸಲಾಗಿದ್ದು, 72 ಕ್ಯಾಮರಾಗಳು ಸುಸ್ಥಿತಿಯಲ್ಲಿವೆ. ಪಾಲಿಕೆ ವತಿಯಿಂದ ಅಳವಡಿಸಿರುವ ಕ್ಯಾಮರಾಗಳ ನಿರ್ವಹಣೆಗಾಗಿ ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿದೆ.

    | ಲಾಬು ರಾಮ್ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts