More

    ಬಿಳಿಗುಂಡ್ಲು ಜಲಮಾಪನದ ಅಂಕಿ ಅಂಶ ಬಿಡುಗಡೆಗೊಳಿಸಿ: ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ರೈತ ಹಿತರಕ್ಷಣಾ ಸಮಿತಿ ಸವಾಲು

    ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿ ಸೋಮವಾರದ ಚಳವಳಿ ಏಳನೇ ವಾರವೂ ಮುಂದುವರೆಯಿತು.
    ನಗರದ ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಸಮಿತಿ ಸದಸ್ಯರು, ಕಾವೇರಿ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿಲ್ಲ. ಹೋರಾಟಗಾರರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂದು ಹೇಳಿರುವ ಪಿ.ಎಂ.ನರೇಂದ್ರಸ್ವಾಮಿ ನಿಜವಾಗಲೂ ಜನಪ್ರತಿನಿಧಿಯಾಗಿದ್ದರೆ ಬಿಳಿಗುಂಡ್ಲು ಜಲಮಾಪನದ ಅಂಕಿ ಅಂಶದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ ನೀರು ಬಿಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲಿ ಸವಾಲು ಹಾಕಿದರು.
    ಗ್ಯಾರಂಟಿ ಸಮಾವೇಶದಲ್ಲಿ ಶಾಸಕ ನರೇಂದ್ರಸ್ವಾಮಿ, ಜನರ ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ. ನೀರು ಮಳವಳ್ಳಿ ದಾಟಿಲ್ಲ. ಕಾವೇರಿ ಹೋರಾಟಗಾರರು ಪ್ರಚಾರಕ್ಕಾಗಿ ಚಳವಳಿ ಮಾಡುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಕಾವೇರಿ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ತಮಿಳುನಾಡಿಗೆ 6,000 ಕ್ಯೂಸೆಕ್ ನೀರು ಹರಿದಿದೆ. ಕಬಿನಿ ಜಲಾಶಯದಿಂದ ನದಿಗೆ 2000 ಕ್ಯೂಸೆಕ್ ನೀರು ಬಿಡಲಾಗಿದೆ. ಆ ದಿನಗಳಲ್ಲಿ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ ಎಂಬುದನ್ನು ಬಿಳಿಗುಂಡ್ಲು ಜಲಮಾಪನ ಕೇಂದ್ರದಿಂದ ಮಾಹಿತಿ ಪಡೆಯಲಿ. ಆಡಳಿತರೂಢ ಪಕ್ಷದ ಶಾಸಕ ನರೇಂದ್ರಸ್ವಾಮಿ ಈ ಬಗ್ಗೆ ಅಧಿಕೃತ ದಾಖಲಾತಿ ಪ್ರಕಟಿಸಲಿ ಎಂದು ಹೇಳಿದರು.
    ಕಾವೇರಿ ಹೋರಾಟಗಾರರ ಬಗ್ಗೆ ಮಾತನಾಡುವಾಗ ನಾಲಗೆ ಬಿಗಿ ಹಿಡಿದು ಶಾಸಕರು ಮಾತನಾಡಬೇಕು. ಜನರ ಮೆಚ್ಚಿಸಲು ಬಾಯಿ ಹರಿಯ ಬಿಡಬಾರದು. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸಲಿ. ಬೆಳೆದು ನಿಂತಿರುವ ಬೆಳೆ ರಕ್ಷಣೆ ಮತ್ತು ರೈತರ ಹಿತ ಕಾಪಾಡುವುದು ನಮ್ಮ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಹೋದರು. ಆದರೆ ಈಗ ಪರಿಸ್ಥಿತಿ ಏನಾಗಿದೆ. ನಾಲೆ ಮತ್ತು ಕೆರೆಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ, ಬೆಳೆ ರಣ ಬಿಸಿಲಿನಲ್ಲಿ ಒಣಗುತ್ತಿದೆ. ಜನ ಜಾನುವಾರಗಳು ನೀರಿಲ್ಲದೆ ದಾಹ ಇಂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ತಕ್ಷಣ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
    ರಾಜ್ಯಸರ್ಕಾರ ಒಳ್ಳೆಯದನ್ನು ಮಾಡಿದ್ದೇವೆ ಎಂದು ತಮಗೆ ತಾವೇ ಹೊಗಳಿಕೊಳ್ಳುತ್ತಿದ್ದಾರೆ. ಆದರೆ ಇವರು ಏನು ಒಳ್ಳೆಯ ಕೆಲಸ ಮಾಡಿದ್ದಾರೆ. ವಿನಾಕಾರಣ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ನಮಗೆ ಯಾವುದೇ ಗ್ಯಾರಂಟಿಗಿಂತ ನೀರು ಮುಖ್ಯ, ಆ ಕೆಲಸವನ್ನು ಸರ್ಕಾರ ಮಾಡಲಿ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಜಲ ಸಂಕಷ್ಟವನ್ನು ಪರಿಹರಿಸಲು ನಿರ್ಲಕ್ಷೃ ತೋರಿದೆ. ಕಾನೂನಿನ ಚೌಕಟ್ಟು ಮುಂದಿಟ್ಟುಕೊಂಡು ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
    ಪ್ರತಿಭಟನೆಯಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ, ಮುದ್ದೇಗೌಡ, ಜವರಯ್ಯ, ಸುಜಾತಾ ಸಿದ್ದಯ್ಯ, ಮಲ್ಲೇಶ್, ಪಣಕನಹಳ್ಳಿ ನಾಗೇಂದ್ರ, ತಮ್ಮಣ್ಣ ಗೌಡ, ಇಂಡುವಾಳು ಬಸವರಾಜ್ ಇತರರಿದ್ದರು.

    ಬಿಳಿಗುಂಡ್ಲು ಜಲಮಾಪನದ ಅಂಕಿ ಅಂಶ ಬಿಡುಗಡೆಗೊಳಿಸಿ: ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ರೈತ ಹಿತರಕ್ಷಣಾ ಸಮಿತಿ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts