More

    ರಾಸುಗಳಿಗೆ ಗರ್ಭಧಾರಣೆ ಸಮಸ್ಯೆ

    – ರವೀಂದ್ರ ಕೋಟ
    ಹೈನುಗಾರಿಕೆ ಇತ್ತೀಚಿನ ದಿನಗಳಲ್ಲಿ ಲಾಭದಾಯಕ ಉದ್ಯಮವಾಗಿದ್ದು, ಗ್ರಾಮೀಣ ಭಾಗದ ಬಹುತೇಕ ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಿವೆ. ಆದರೆ ಗುಣಮಟ್ಟದ ಆಹಾರ, ಕ್ಯಾಲ್ಸಿಯಂ ಕೊರತೆಯಿಂದಾಗಿ ರಾಸುಗಳಿಗೆ ಗರ್ಭಧಾರಣೆ ಸಮಸ್ಯೆ ಹೆಚ್ಚುತ್ತಿರುವುದು ಸವಾಲಾಗಿದೆ. ಹಸುಗಳ ಗರ್ಭಧಾರಣೆಗೆ 12-13 ಬಾರಿ ಇಂಜೆಕ್ಷನ್ ನೀಡಿರುವ ಉದಾಹರಣೆಗಳಿವೆ. ಗರ್ಭಧಾರಣೆ ವಿಳಂಬದಿಂದ ಹಾಲು ಉತ್ಪಾದನೆ ಇರುವುದಿಲ್ಲ. ಅತ್ತ ಹಸುವನ್ನು ಮಾರಾಟ ಮಾಡುವುದೂ ಸಾಧ್ಯವಾಗುವುದಿಲ್ಲ. ಕೊನೆಗೆ ಇಂಜೆಕ್ಷನ್ ನೀಡಿದವರನ್ನು ರೈತರು ಶಪಿಸುವುದೂ ಇದೆ.

    ಏನು ಕಾರಣ?: ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹಾಲನ್ನು ಡೇರಿಗೆ ನೀಡುವ ಉದ್ದೇಶದಿಂದ ಅಂಗಡಿಗಳಲ್ಲಿ ಸಿಗುವ ಪಶು ಆಹಾರ(ಕಡ್ಡಿಹಿಂಡಿ)ಅತ್ಯಧಿಕವಾಗಿ ನೀಡಲಾಗುತ್ತದೆ. ಇದರಿಂದ ಹಾಲು ಉತ್ಪಾದನೆ ಹೆಚ್ಚಿದಂತೆ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಹಿಂದೆ ಹಸುವಿಗೆ ಹಸಿಹುಲ್ಲು ನೀಡಲಾಗುತ್ತಿತ್ತು. ಪಶುಆಹಾರ ಕಡ್ಡಿ ಹಿಂಡಿಯಲ್ಲಿ ಯೂರಿಯಾ ಅಂಶ ಅತಿಯಾಗಿರುವುದರಿಂದ ಗರ್ಭಧಾರಣೆ ಸಮಸ್ಯೆ ಉಂಟಾಗುತ್ತದೆ. ಕೆಲವು ರಾಸುಗಳು 20 ದಿನಕ್ಕೊಮ್ಮೆ, ಇನ್ನು ಕೆಲವು ಎರಡು ತಿಂಗಳಿಗೊಮ್ಮೆ ಬೆದೆಗೆ ಬರುತ್ತವೆ. ಇದನ್ನೂ ಗಮನಿಸಬೇಕು ಎನ್ನುತ್ತಾರೆ ಅನುಭವಿ ಹೈನುಗಾರರು. ಕ್ಯಾಲ್ಸಿಯಂ ಗುಣಗಳನ್ನು ಒಳಗೊಂಡ ಸಮತೋಲನ ಮತ್ತು ಗುಣಮಟ್ಟದ ಪಶು ಆಹಾರ ಕೊರತೆ, ಹಾರ್ಮೋನ್ಸ್ ಏರುಪೇರು, ಸಾಕಾಣಿಕೆ ವಿಧಾನ ಬದಲಾಗಿರುವುದು ರಾಸುಗಳ ಗರ್ಭಧಾರಣೆ ಸಮಸ್ಯೆಗೆ ಪ್ರಮುಖ ಕಾರಣ ಎನ್ನುವುದು ವೈದ್ಯರ ಅಭಿಪ್ರಾಯ. ಕರಾವಳಿ ಮಣ್ಣಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವುದರಿಂದ ಆಹಾರ ಗುಣಮಟ್ಟ ರಾಸುಗಳ ಆರೋಗ್ಯಕ್ಕೆ ಪೂರಕವಾಗಿಲ್ಲ. ಖಾಸಗಿ ಸಂಸ್ಥೆಗಳು ತಯಾರಿಸುವ ಪಶು ಆಹಾರದಲ್ಲಿ ಪೋಷಕಾಂಶಗಳ ಪ್ರಮಾಣ ಹೇಗಿರುತ್ತದೆ ಎಂಬುದು ತಿಳಿಯುವುದಿಲ್ಲ. ಇದನ್ನು ರ‌್ಯಾಂಡಮ್ ಆಗಿ ಪರೀಕ್ಷಿಸುವುದು ಸಾಧ್ಯವಾಗುವುದಿಲ್ಲ. ನಗರೀಕರಣದಿಂದಾಗಿ ಹಸಿ ಹುಲ್ಲು, ಹಸಿರು ಕೊರತೆ ತೀವ್ರ ಕಾಡುತ್ತಿದೆ. ರಾಸುಗಳಲ್ಲಿ ಹಾರ್ಮೋನ್ಸ್ ಏರುಪೇರಾಗಲು ಹವಾಮಾನ ವೈಪರೀತ್ಯ ಕಾರಣ ಎಂದು ವೈದ್ಯರು ವಿವರಿಸುತ್ತಾರೆ.
    ಕೆಎಂಎಫ್ ವರದಿ ಪ್ರಕಾರ ಉಡುಪಿ ತಾಲೂಕು ಒಂದರಲ್ಲೇ ಕಳೆದ ವರ್ಷಕ್ಕೆ ಹೋಲಿಸಿದರೆ 5 ಸಾವಿರ ಲೀಟರ್ ಹಾಲು ಕಡಿಮೆಯಾಗಿದೆ.

    ಪಶು ಇಲಾಖೆ ಖಾಲಿ ಖಾಲಿ:
    ಹೈನುಗಾರಿಕೆ ಪ್ರೋತ್ಸಾಹ ಮತ್ತು ರಾಸುಗಳ ಗರ್ಭಧಾರಣೆ ಮೊದಲಾದ ವೈದ್ಯಕೀಯ ಸೇವೆ ಸಂಬಂಧಿಸಿ ಪಶು ಇಲಾಖೆ ಜವಾಬ್ದಾರಿ ಹೆಚ್ಚಿದೆ. ಆದರೆ ಉಡುಪಿ ಪಶು ಇಲಾಖೆಯಲ್ಲಿ ಶೇ.72ರಷ್ಟು ಹುದ್ದೆ ಖಾಲಿ ಇದೆ. ಶೇ.28ರಲ್ಲಿ ವೈದ್ಯರು, ತಜ್ಞ ವೈದ್ಯರು, ಅಟೆಂಡರ್, ನಿರೀಕ್ಷಕರು, ಕ್ಲರ್ಕ್ ಹುದ್ದೆ ಒಳಗೊಂಡಿದೆ. ಜಿಲ್ಲೆಯಲ್ಲಿ 97 ಪಶು ಇಲಾಖೆಯ ಆಸ್ಪತ್ರೆಗಳಿದ್ದು, 21 ಪಶು ವೈದ್ಯರ ಅಗತ್ಯತೆ ಇದೆ. ಒಬ್ಬೊಬ್ಬ ಪಶು ವೈದ್ಯರಿಗೆ ಮೂರ್ನಾಲ್ಕು ಆಸ್ಪತ್ರೆ ಜವಾಬ್ದಾರಿ ವಹಿಸಿರುವುದು ತೀವ್ರ ಹೊರೆಯಾಗಿ ಪರಿಣಮಿಸಿದೆ ಎಂದು ಅಧಿಕಾರಿ ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಲಿಂಗ ನಿರ್ಧರಿತ ವೀರ್ಯ ನಳಿಕೆ:
    ಗಂಡು ಕರುಗಳೇ ಹುಟ್ಟುವುದರಿಂದ ಹೈನುಗಾರರಿಗೆ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ಪಶು ವೈದ್ಯಕೀಯ ಇಲಾಖೆ ‘ಲಿಂಗ ನಿರ್ಧರಿತ ವೀರ್ಯ ನಳಿಕೆ’ ಪರಿಹಾರ ಕಂಡುಕೊಂಡಿತು. ಇಂಜೆಕ್ಷನ್ ಬಳಸಿ ಗಂಡು ಕರುವಿನ ಬದಲು ಹೆಣ್ಣು ಕರು ಹುಟ್ಟುವಂತೆ ಮಾಡಲಾಗುತಿತ್ತು. ಇದರ ಸ್ಟಾಕ್ ತೀರಾ ಕಡಿಮೆ ಇರುವುದರಿಂದ ಸರ್ಕಾರ ಹೆಚ್ಚು ಪ್ರಚಾರ ನಡೆಸಿಲ್ಲ. ಹಾಗಾಗಿ ಜನಪ್ರಿಯಗೊಂಡಿಲ್ಲ. ಜಿಲ್ಲೆಯಲ್ಲಿ ಶೇ.98ರಷ್ಟು ಈ ಪರಿಹಾರ ಯಶಸ್ವಿಯಾಗಿದೆ. ಒಂದು ಇಂಜೆಕ್ಷನ್‌ಗೆ 900 ರೂ. ದರವಿದ್ದು, 450 ರೂ. ಸರ್ಕಾರ ಸಬ್ಸಿಡಿ ನೀಡುತ್ತದೆ. ಮೊದಲಿಗೆ ಬಂದ ಒಂದು ಹಂತದ ಸ್ಟಾಕ್ ಮುಗಿಯುತ್ತ ಬಂದಿದೆ. ಹೈನುಗಾರರು ಹೆಚ್ಚು ನೀಡುವಂತೆ ಆಗ್ರಹಿಸುತ್ತಿದ್ದಾರೆ.

    ರಾಸುಗಳ ಗರ್ಭಧಾರಣೆ ಸಮಸ್ಯೆಗೆ ಒಂದು ನಿರ್ದಿಷ್ಟ ಕಾರಣವಿಲ್ಲ. ಕ್ಯಾಲ್ಸಿಯಂ ಒಳಗೊಂಡ ಸಮತೋಲನ ಮತ್ತು ಗುಣಮಟ್ಟದ ಪಶು ಆಹಾರ ಕೊರತೆ, ಹಾರ್ಮೋನ್ಸ್ ಏರುಪೇರು, ಸಾಕಾಣಿಕೆ ವಿಧಾನ ಬದಲಾಗಿರುವುದು ಪ್ರಮುಖವಾದುವು.
    – ಡಾ.ಹರೀಶ್ ಸಾಮನ್ಕರ್, ಪಶು ವೈದ್ಯಕೀಯ ಉಪ ನಿರ್ದೇಶಕ, ಉಡುಪಿ

    ಗರ್ಭಧಾರಣೆ ಸಮಸ್ಯೆಗೆ ಹಲವು ಕಾರಣಗಳಿವೆ. ಹಸಿರು ಸೊಪ್ಪಿನ ಆಹಾರದಲ್ಲಿ ಖನಿಜಾಂಶ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯ, ಅತಿಯಾದ ಉಷ್ಣತೆ, ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ ವಸ್ತುಗಳ ತರಂಗಾಂತರ ಪರಿಣಾಮ ಬೀರುತ್ತಿದೆ. ದವಸ ಧಾನ್ಯ ನೀಡುವುದು ಕಡಿಮೆಯಾಗಿವುದು, ಆಹಾರ ಪದ್ಧತಿ ಬದಲಾವಣೆಯೂ ಕಾರಣ.
    – ಡಾ.ಅರುಣ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕ, ಕೋಟ ಪಶು ಆಸ್ಪತ್ರೆ

    ಹಸುವಿಗೆ ಸಂದರ್ಭ ನೋಡಿ ಗರ್ಭಧಾರಣೆ ಮಾಡಿಸಬೇಕು. ಸೊಪ್ಪಿನ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ನೀಡಬೇಕು. ಇಂದು ನಾವು ನೀಡುವ ಆಹಾರ ಪದ್ಧತಿಗಳಲ್ಲಿ ವ್ಯತ್ಯಾಸವಾಗಿದೆ. ಸಮಸ್ಯೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು.
    – ಜಿ.ತಿಮ್ಮ ಪೂಜಾರಿ, ಹೈನುಗಾರ, ಗಿಳಿಯಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts