More

    ಇಂದಿನಿಂದ ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆ

    ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ಭಾರಿ ದನಗಳ ಜಾತ್ರೆ ಮಾ.8 ರಿಂದ 16 ರವರೆಗೆ ನಡೆಯಲಿದ್ದು, ವಿವಿಧ ಇಲಾಖೆಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

    ಬೇಬಿ ಬೆಟ್ಟದ ಜಾತ್ರಾ ಮಾಳದಲ್ಲಿ ಜಾತ್ರೆ ನಡೆಯಲಿದೆ. ಮೊದಲನೇ ದಿನ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ತೋಟಗಾರಿಕೆ, ಕೃಷಿ, ಪಶು ಸಂಗೋಪನಾ ಮತ್ತು ವೈದ್ಯಕೀಯ, ಶಿಕ್ಷಣ, ಸೆಸ್ಕ್ ಸೇರಿದಂತೆ ವಿವಿಧ ಇಲಾಖೆಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಸಲಿದ್ದಾರೆ. ಮಾ.9 ರಂದು ಮಹಿಳಾ ಸಾಂಸ್ಕೃತಿಕ ಉತ್ಸವ, ಮಹಿಳಾ ಕ್ರೀಡಾಕೂಟ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    10ರಂದು ಪುರುಷರ ವಾಲಿಬಾಲ್, 11ರಂದು ಕಬಡ್ಡಿ ಪಂದ್ಯಾವಳಿ, 12ರಂದು ನಾಡ ಕುಸ್ತಿ, 13ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಅಂದು ಬೆಳಗ್ಗೆ 9.10 ರಿಂದ 9.40 ರವರೆಗೆ ಸಲ್ಲುವ ಮೇಷ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ 25 ಜೋಡಿಗಳಿಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಉಚಿತವಾಗಿ ಚಿನ್ನದ ತಾಳಿ, ಸೀರೆ ಹಾಗೂ ವರನಿಗೆ ಪಂಚೆ, ಶರ್ಟ್ ಹಾಗೂ ವಾಚ್ ವಿತರಿಸಲಿದ್ದಾರೆ. ಮಾ.14 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ, 15 ರಂದು ಬೇಬಿ ಬೆಟ್ಟ ಕ್ಷೇತ್ರ ದೈವ ಸಿದ್ದೇಶ್ವರ ಮತ್ತು ಮಹದೇಶ್ವರರ ರಥೋತ್ಸವ ಹಾಗೂ ಉತ್ತಮ ರಾಸುಗಳ ಆಯ್ಕೆ ಮಾಡಲಾಗುವುದು. ಅಂತಿಮ ದಿನವಾದ 16 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

    15ರಂದು ಪಶು ವೈದ್ಯರು ಉತ್ತಮ ರಾಸುಗಳನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ ಉತ್ತಮ ರಾಸುಗಳ ಮಾಲೀಕರಿಗೆ ಚಿನ್ನದ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ನಟ ದರ್ಶನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದ ಜಾತ್ರೆಗೆ ನಿತ್ಯ ಸಾವಿರಾರು ರೈತರು ಆಗಮಿಸುತ್ತಾರೆ. ಎಲ್ಲರಿಗೂ ಮಠದ ವತಿಯಿಂದ ದಾಸೋಹ ಏರ್ಪಡಿಸಲಾಗಿದೆ. ಸಾಮೂಹಿಕ ಸರಳ ವಿವಾಹದ ದಿನ ಶಾಸಕ ದರ್ಶನ್ ಪುಟ್ಟಣ್ಣಯ್ಯ 10 ಸಾವಿರ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ. ಮಹದೇಶ್ವರ, ಸಿದ್ದೇಶ್ವರ ರಥೋತ್ಸವ ಮತ್ತು ತೆಪ್ಪೋತ್ಸವದ ಜತೆಗೆ ರಾಗಿಮುದ್ದನಹಳ್ಳಿ ಗ್ರಾಮಸ್ಥರು ಮಹದೇಶ್ವರನಿಗೆ ಎಣ್ಣೆ ಮಜ್ಜನ ನೆರವೇರಿಸಲಿದ್ದಾರೆ ಎಂದರು.

    ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಮಹದೇವು, ರಾಘವೇಂದ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts