More

    ಅಂತರ್ಜಾತಿ ವಿವಾಹದಿಂದ ಜಾತಿ ವ್ಯವಸ್ಥೆ ದೂರ

    ಗುಂಡ್ಲುಪೇಟೆ: ಅಂತರ್ಜಾತಿ ವಿವಾಹಗಳನ್ನು ಮಾಡುವ ಮೂಲಕ ಜಾತಿ ವ್ಯವಸ್ಥೆಯನ್ನು ಅಳಿಸಬೇಕಾಗಿದೆ ಎಂದು ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

    ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಪರಮೇಶ್ವರ ಅಭಿಮಾನಿ ಬಳಗದಿಂದ ಭಾನುವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ತಂದೆ ಗಂಗಾಧರಯ್ಯ ಬುದ್ಧ ಹಾಗೂ ಅಂಬೇಡ್ಕರ್ ಅವರ ಪ್ರಭಾವಕ್ಕೆ ಒಳಗಾಗಿ ದೀನದಲಿತರ ಬದಲಾವಣೆಗೆ ಶಿಕ್ಷಣ ನೀಡುವುದರಿಂದ ಮಾತ್ರವೇ ಸಾಧ್ಯ ಎಂದು ಭಾವಿಸಿದ್ದರು. ಪರಿಣಾಮ ರಾಜ್ಯದ 82 ಕಡೆಗಳಲ್ಲಿ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದರು ಎಂದು ಸ್ಮರಿಸಿದರು.

    ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರು ವ ಮಕ್ಕಳು ಬಹುತೇಕರು ದಲಿತರಾಗಿದ್ದಾರೆ. ಎಲ್ಲರಲ್ಲಿಯೂ ಸಮಾನತೆ ತರಲು ಹಾಗೂ ಜಾತಿ ಪದ್ಧತಿ ನಿವಾರಿಸಲು ಅಂತರ್ಜಾತಿ ವಿವಾಹಗಳಿಂದ ಮಾತ್ರ ಸಾಧ್ಯ. ಅಲ್ಲದೆ ಹೆಚ್ಚು ಮಕ್ಕಳನ್ನು ಪಡೆಯುವ ಬದಲು ಎರಡೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಉತ್ತಮ ಎಂದರು.

    ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ ಮಾತನಾಡಿ, ನಾವು ಸಮಾಜಕ್ಕೆ ಕೊಡುವ ಕೊಡುಗೆಗಳು ನಮ್ಮ ಖಾತೆಗೆ ಜಮೆಯಾಗುತ್ತವೆ. ಬುದ್ಧನ ತತ್ವ ಅನುಸರಿಸುವ ಚೀನಾ ಹಾಗೂ ಜಪಾನ್ ಜೆಡಿಪಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಜಾತೀಯತೆಯಿಂದ ಕೂಡಿದ ನಮ್ಮ ದೇಶದಲ್ಲಿ ಇಳಿಕೆಯಾಗುತ್ತಿದೆ. ಆದ್ದರಿಂದ ಯುವಜನಾಂಗ ದುಶ್ಚಟಗಳನ್ನು ಬಿಟ್ಟು ಜಾತೀಯತೆ ತೊಲಗಿಸಲು ಮುಂದಾಗಬೇಕು ಎಂದರು.

    ಶಾಸಕ ನಿರಂಜನಕುಮಾರ್ ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿ ಆಡಂಬರದ ಮದುವೆಗಳಿಂದ ಜನರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಆದ್ದರಿಂದ ಸರಳ ವಿವಾಹಗಳನ್ನು ಆಯೋಜಿಸುವ ಮೂಲಕ ಪರಮೇಶ್ವರ್ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

    ಸಾಮೂಹಿಕ ವಿವಾಹದಲ್ಲಿ 101 ಜೋಡಿಗೆ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ದಾಖಲಾತಿಗಳಲ್ಲಿ ವಯೋಮಿತಿ ಕಾರಣದಿಂದ ಸುಮಾರು 70ಕ್ಕೂ ಹೆಚ್ಚು ಜೋಡಿಗೆ ಕಂಕಣ ಭಾಗ್ಯ ದೊರಕಲಿಲ್ಲ. ಇದರಿಂದ ಕೇವಲ 25 ಜೋಡಿ ಮಾತ್ರ ಹಸೆಮಣೆ ಏರುವಂತಾಯಿತು. ಈ ಪೈಕಿ11 ಅಂತರ್ಜಾತಿ ವಿವಾಹವಾಗಿದ್ದರೆ, ಒಂದು ಅಂಗವಿಕಲ ಜೋಡಿಯೂ ಸೇರಿತ್ತು.

    ನವ ದಂಪತಿಗಳಿಗೆ ಚಿನ್ನದ ಮಾಂಗಲ್ಯ, ಸೀರೆ, ಕುಪ್ಪಸ, ಪಂಚೆ, ಶಲ್ಯವನ್ನು ಸ್ವತಃ ಪರಮೇಶ್ವರ್ ಹಾಗೂ ಪತ್ನಿ ಡಾ.ಕನ್ನಿಕಾ ಪರಮೇಶ್ವರ್ ವಿತರಿಸಿದರು. ಮಧ್ಯಾಹ್ನ ಭೋಜನಕ್ಕೆ ಕಡಲೆಹುಳಿ, ಪಾಯಸ, ಬೂಂದಿ, ಅನ್ನ-ಸಾಂಬಾರ್ ಹಾಗೂ ಪಲ್ಯ ಮಾಡಲಾಗಿತ್ತು.

    ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಂಡ್ಯ ರಮೇಶ್, ಚಿಂತಕ ಚೇತನ್, ವಿಕಾಸ್‌ಜನ್ನಿ, ಸಂಶೋಧಕ ಲಕ್ಷ್ಮಿಪತಿ, ಕೋಲಾರದ ಮಹದೇವಭರಣಿ, ರವಿ ಸೋಮಹಳ್ಳಿ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts