More

    ಮೂರು ವರ್ಷ ಬಳಿಕ ಜೀವತಳೆದ ಗೇರು ಸಂಶೋಧನಾ ಕೇಂದ್ರ

    ಅನ್ಸಾರ್ ಇನೋಳಿ ಉಳ್ಳಾಲ

    ಮೂರು ವರ್ಷಗಳಿಂದ ನಾಮ್‌ಕೇವಾಸ್ತೆ ಇದ್ದ ಉಳ್ಳಾಲದ ಗೇರು ಕೃಷಿ ಸಂಶೋಧನಾ ಕೇಂದ್ರ ಈ ವರ್ಷ ಮತ್ತೆ ಜೀವ ತಳೆದಿದ್ದು, ಗೇರು ಕೃಷಿಕರಲ್ಲಿ ಒಂದಷ್ಟು ನೆಮ್ಮದಿ ಮೂಡಿಸಿದೆ.

    14 ಹೆಕ್ಟೇರ್ ಪ್ರದೇಶ ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿಗಳ ಸಹಿತ 25 ಸಿಬ್ಬಂದಿ, ಕೂಲಿ ಕಾರ್ಮಿಕರ ದೊಡ್ಡ ದಂಡೇ ಇದೆ. ಕೇಂದ್ರದ ಆವರಣ ಬಹುಪಾಲು ಗೇರು ಮರಗಳನ್ನೇ ಹೊಂದಿದ್ದು, ಅಂತರ್‌ಬೆಳೆಯಾಗಿ ಪೊದೆ ಕರಿಮೆಣಸು, ಕರಿಮೆಣಸು, ಮಾವು, ನುಗ್ಗೆ ಗಿಡಗಳ ಸಹಿತ ಇನ್ನೂ ಹಲವು ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿವಿಧ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಗೇರು ಸಂಶೋಧನೆಗೆ ಪ್ರಥಮ ಆದ್ಯತೆ ನೀಡಿ ಗೇರು ಬೆಳೆಗಾರರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಉಳ್ಳಾಲ 1-5 ಐದು ತಳಿಯ ಗೇರು ಬೆಳೆ ಇದ್ದು, ಪ್ರಿಯಾಂಕಾ ಮತ್ತು ಎನ್‌ಡಿಆರ್-2-1 ಸ್ಥಳೀಯ ಬೆಳೆ ಎನ್ನುವ ನೆಲೆಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಪ್ರತಿವರ್ಷ ಇಲ್ಲಿ ಗೇರು ಕೃಷಿ ಮೇಳ ನಡೆಸುತ್ತಾ ಬರಲಾಗುತ್ತಿದ್ದು, 2017ರ ಬಳಿಕ ಈ ವರ್ಷ ಮೇಳ ನಡೆದಿದೆ.

    2018 ಮತ್ತು 19ರಲ್ಲಿ ಗೇರು ಬೆಳೆಯೇ ಬಾರದ ಕಾರಣ ಕೃಷಿಕರು, ಅಧಿಕಾರಿಗಳ ಮುಂದೆ ತಲೆತಗ್ಗಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರದ ಆಗಿನ ಮುಖ್ಯಸ್ಥರು ಎರಡು ವರ್ಷ ಮೇಳ ನಡೆಸಿರಲಿಲ್ಲ. ಕಳೆದ ವರ್ಷ ಕರೊನಾ ನೆಪವೂ ಸಿಕ್ಕಿತು. ಬಳಿಕ ಹಿಂದಿನ ಮುಖ್ಯಸ್ಥರ ವರ್ಗಾವಣೆಯೂ ಆಯಿತು.

    ಗೇರು ಮೇಳಕ್ಕೆ ತರಕಾರಿ ಮೆರುಗು!: ಈ ವರ್ಷ ಹೊಸ ಮುಖ್ಯಸ್ಥರ ನೇತೃತ್ವದಲ್ಲಿ ಗೇರು ಮೇಳ ನಡೆಯಿತು. ಮೇಳಕ್ಕೆ ಬಂದವರನ್ನು ತರಕಾರಿ ಬೆಳೆ ಆಕರ್ಷಿಸಿದ್ದು ವಿಶೇಷ. ಗೇರಿನ ಜತೆ ಕೇಂದ್ರದ ಆವರಣದಲ್ಲೇ ತರಕಾರಿ ಬೆಳೆಗೆ ಆದ್ಯತೆ ನೀಡಲಾಗಿತ್ತು. ಅದರಲ್ಲೂ ಅಸ್ಸಾಂ ಸೋರೆಕಾಯಿ ಬೀಜ ನಾಟಿ ಮಾಡಿ ಬೆಳೆ ತೆಗೆದಿದ್ದೂ ಸಾಹಸ ಎನಿಸಿದೆ. ಜತೆಗೆ ಊರಿನ ಹೀರೆಕಾಯಿ, ಟೊಮ್ಯಾಟೋ, ಮೂಲಂಗಿ, ಮುಳ್ಳು ಸೌತೆ, ಬದನೇಕಾಯಿ, ಬೆಂಡೆಕಾಯಿ ಸಹಿತ ಇತರ ತರಕಾರಿಗಳನ್ನು ಕೇಂದ್ರದ ಆವರಣದಲ್ಲೇ ಬೆಳೆದು ಕೇಂದ್ರ ಕೇವಲ ಗೇರಿಗೆ ಸೀಮಿತವಲ್ಲ ಎನ್ನುವ ಸಂದೇಶ ನೀಡಿದೆ.

    ನಮ್ಮದು ಗೇರಿಗೆ ಪ್ರಥಮ ಆದ್ಯತೆ ನೀಡಬೇಕಾದ ಸಂಸ್ಥೆಯಾದರೂ ಅಂತರ್‌ಬೆಳೆಗೂ ಆದ್ಯತೆ ನೀಡಿದ್ದೇವೆ. ಮಂಗಳೂರು ಅಭಿವೃದ್ಧಿಯ ನಾಗಾಲೋಟದಲ್ಲಿದ್ದು, ಹಸಿರು ಅಳಿಯುತ್ತಿದೆ. ನಮ್ಮ ಮನೆಯಂಗಳದಲ್ಲೇ ತರಕಾರಿ, ಹಣ್ಣು, ಔಷಧೀಯ ಗಿಡಗಳನ್ನು ಬೆಳೆಯಲು ಸಾಧ್ಯ ಎಂದು ತೋರಿಸಲು ಈ ಬಾರಿ ಕೇಂದ್ರದ ಆವರಣದಲ್ಲಿ ತರಕಾರಿ ಕೈತೋಟ ಮಾಡಲಾಗಿದೆ.

    ಡಾ.ರವಿರಾಜ್ ಶೆಟ್ಟಿ

    ಮುಖ್ಯಸ್ಥ, ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ

    ಗ್ರಾಮೀಣ ಭಾಗದಲ್ಲಿ ಗುಡ್ಡಗಾಡಿನಲ್ಲೂ, ಮನೆಯಂಗಳದಲ್ಲೂ ಬೆಳವಣಿಗೆಗೊಂಡು ಯಾರಿಗೂ ಬೇಡವಾಗಿದ್ದರಿಂದ ಗೇರು ಗಿಡಗಳು ಬಹುತೇಕ ನಿರ್ನಾಮಗೊಂಡಿದೆ. ಪ್ರಸ್ತುತ ಗೇರು ಕೃಷಿಗೆ ಇಂದು ಬೇಡಿಕೆ ಬಂದಿದೆಯಾದರೂ, ಗಿಡಗಳೇ ಅಪರೂಪವಾಗಿದ್ದು, ಹಣ ಕೊಟ್ಟರೂ ಸಿಗದಂತಾಗಿದೆ. ಇದು ಸಂಪೂರ್ಣ ಅಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಕೃಷಿ ವಿಜ್ಞಾನಿಗಳದ್ದಾಗಿದೆ.

    ರಮೇಶ್ ಎಂ., ನರ್ಸರಿ ನಿರ್ವಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts