More

    ಲೋಕಾರ್ಪಣೆಗೆ ಸಜ್ಜಾಗಿದೆ ರಾಜ್ಯದ ಏಕೈಕ ಗೇರು ಸಂಗ್ರಹಾಲಯ: ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಿಂದ ನಿರ್ಮಾಣ

    ಪುತ್ತೂರು: ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ರಾಜ್ಯದ ಏಕೈಕ ಹಾಗೂ ದೇಶದ ಅತಿ ದೊಡ್ಡ ಗೇರು ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧವಾಗಿದೆ. ರಾಷ್ಟ್ರಮಟ್ಟದಲ್ಲೇ ಗೇರು ಪ್ರಪಂಚದ ಸಮಗ್ರತೆ ಅನಾವರಣ ಮಾಡುವ ಸರ್ಕಾರಿ ಕ್ಷೇತ್ರದ ಏಕೈಕ ಸಮಗ್ರ ಮ್ಯೂಸಿಯಂ ಎಂಬ ಕೀರ್ತಿಗೆ ಪಾತ್ರವಾಗಿದೆ.

    ಭಾರತೀಯ ಕೃಷಿ ಸಂಶೋಧನಾ ಪರಿಷತ್(ಐಸಿಎಆರ್) ಅಡಿ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶಾನಲಯ(ಡಿಸಿಆರ್)ವಠಾರದಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂಗೆ ಗೇರು ಆರೋಗ್ಯ ಚಿಕಿತ್ಸಾಲಯ-ವಸ್ತು ಸಂಗ್ರಹಾಲಯ(ಕ್ಯಾಶ್ಯೂ ಪ್ಲಾಂಟ್ ಹೆಲ್ತ್ ಕ್ಲಿನಿಕ್ ಆ್ಯಂಡ್ ಮ್ಯೂಸಿಯಂ) ಎಂದು ಹೆಸರಿಡಲಾಗಿದೆ.

    ಪುತ್ತೂರಿನ ಡಿಸಿಆರ್ ಸ್ಥಾಪನೆ, ಅದರ ಸಾಧನೆ, ತಳಿ ಸಂಶೋಧನೆ, ರಾಷ್ಟ್ರಮಟ್ಟದಲ್ಲಿ ಗೇರು ಕೃಷಿಯಲ್ಲಿ ಮಾಡಲಾದ ಸಂಶೋಧನೆ ಗಳು, ತಳಿ ಆವಿಷ್ಕಾರಗಳು, ಅದರ ಸ್ವಭಾವ ಇತ್ಯಾದಿಗಳನ್ನು ದೃಶ್ಯ ಮತ್ತು ಮಾಡೆಲ್‌ಗಳ ಮೂಲಕ ಇಲ್ಲಿ ಪ್ರದರ್ಶಿಸಲಾಗಿದೆ. ದೇಶದ ಯಾವ ಭಾಗಕ್ಕೆ ಯಾವ ತಳಿ ಹೊಂದಿಕೊಳ್ಳುತ್ತದೆ, ಸಸ್ಯಾಭಿವೃದ್ಧಿಯನ್ನು ಮಾಡೆಲ್ ಮೂಲಕ ತೋರಿಸಲಾಗಿದೆ. ಗೇರು ಕೃಷಿ ನಿರ್ವಹಣೆ, ಗೊಬ್ಬರ ವಿಧಾನ, ನೀರಾವರಿ, ಗೇರು ಕೃಷಿಗಿರುವ ರೋಗ ನಿಯಂತ್ರಣದ ಸಾಕ್ಷ್ಯಚಿತ್ರಗಳಿವೆ.

    60 ಲಕ್ಷ ರೂ.ವೆಚ್ಚ: ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನಾ (ಆರ್‌ಕೆವಿವೈ)ಅಡಿ ಕೇಂದ್ರ ಸರ್ಕಾರ ರೈತ ಕಲ್ಯಾಣ ಯೋಜನೆಯಲಿ ಪುತ್ತೂರಿನ ಡಿಸಿಆರ್‌ಗೆ 2 ಕೋಟಿ ರೂ.ಅನುದಾನ ನೀಡಿತ್ತು. ಡಿಸಿಆರ್ ಪ್ರಭಾರ ಆಡಳಿತ ನಿರ್ದೇಶಕರಾಗಿದ್ದ ಡಾ.ಎಂ.ಜಿ.ನಾಯಕ್ ಪುತ್ತೂರಿನಲ್ಲಿ ಗೇರು ಮ್ಯೂಸಿಯಂ ತೆರೆಯುವ ಕನಸು ಕಂಡರು. ಇದರ ಲವಾಗಿ 60 ಲಕ್ಷ ರೂ.ವೆಚ್ಚದಲ್ಲಿ ಸಂಗ್ರಹಾಲಯ ತಲೆ ಎತ್ತಿದೆ. ಗೇರು ಹಣ್ಣಿನಿಂದ ತಯಾರಿಸಲಾಗುವ ಜ್ಯೂಸ್, ಜಾಮ್, ಜೆಲ್ಲಿ, ಉಪ್ಪಿನಕಾಯಿ, ಮಾದಕ ಪೇಯವಾದ ೆನ್ನಿ, ವೈನ್ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ. ಗೇರು ಹಣ್ಣಿನಿಂದ ತಯಾರಿಸುವ ಚ್ಯವನ್‌ಪ್ರಾಶ್, ಬೇಬಿ ಪೌಡರ್‌ನ ಚಿತ್ರಣವಲ್ಲದೆ, ಗೋಡಂಬಿಯಲ್ಲಿರುವ ವಿಟಮಿನ್‌ಗಳು, ಪೋಷಕಾಂಶಗಳು, ಹಣ್ಣಿನಲ್ಲಿರುವ ಅಂಶಗಳ ಅನಾವರಣವೂ ಇಲ್ಲಿದೆ.

    ಪುತ್ತೂರಿನ ಡಿಸಿಆರ್ ಸಾಧನೆ: ಐಸಿಎಆರ್ ಅಡಿ ಗೇರು ಸಂಶೋಧನೆಗೆಂದೇ ರೂಪಿಸಲಾದ ಪುತ್ತೂರಿನ ಡಿಸಿಆರ್ 3 ದಶಕಗಳಿಂದ ಅನೇಕ ಸಾಧನೆಗಳನ್ನು ಮಾಡಿದೆ. ಅವುಗಳ ಸಾಲಿಗೆ ಈ ಮ್ಯೂಸಿಯಂ ಕೂಡ ಸೇರಿದೆ. ಈ ಮಾದರಿಯ ಸಮಗ್ರ ವಸ್ತು ಸಂಗ್ರಹಾಲಯ ಐಸಿಎಆರ್ ಅಡಿಯ ಸಂಸ್ಥೆಗಳಲ್ಲೇ ಇದು ಅದ್ವಿತೀಯವಾದುದು. ದೆಹಲಿಯಲ್ಲಿ ಇಂಥದೇ ಒಂದು ಮ್ಯೂಸಿಯಂ ಇದೆಯಾದರೂ, ಸಮಗ್ರತೆ ದೃಷ್ಟಿಯಿಂದ ಇದು ವಿಶಾಲವಾಗಿದೆ ಎಂದು ಪುತ್ತೂರು ಡಿಸಿಆರ್‌ನ ಮಾಜಿ ಪ್ರಭಾರ ಆಡಳಿತ ನಿರ್ದೇಶಕ ವಿಜ್ಞಾನಿ ಡಾ.ಎಂ.ಜಿ.ನಾಯಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮ್ಯೂಸಿಯಂ ಪ್ರವೇಶಿಸುವ ಹಂತದಲ್ಲಿ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ತೋರಿಸುವ ದೃಶ್ಯಾವಳಿ ತೋರಿಸಲಾಗಿದೆ. ಮ್ಯೂರಲ್ ಪೇಂಟಿಂಗ್ ಮೂಲಕ ಗೇರು ಬೆಳೆ ಇತಿಹಾಸ, ಭಾರತಕ್ಕೆ ಬಂದ ರೀತಿ, ಬೆಳೆದ ರೀತಿ, ವೈಜ್ಞಾನಿಕ ಬೆಳವಣಿಗೆ, ಮಾರುಕಟ್ಟೆ ಅಭಿವೃದ್ಧಿಗಳನ್ನು ತೋರಿಸಲಾಗಿದೆ. ಬಹುತೇಕ ವಿವರಣೆಗಳನ್ನು ಮಾಡೆಲ್ ಸಹಿತ ತೋರಿಸಲಾಗಿದೆ. ಕೃಷಿಕರಿಗೆ ಗೇರು ಬೆಳೆಯ ಸಮಗ್ರತೆ ನಿರೂಪಿಸುವುದೇ ಗೇರು ಮ್ಯುಸಿಯಂನ ಉದ್ದೇಶ.
    -ಡಾ.ಎಂ.ಜಿ.ನಾಯಕ್
    ಹಿರಿಯ ವಿಜ್ಞಾನಿ, ಪುತ್ತೂರು ಡಿಸಿಆರ್‌ನ ಮಾಜಿ ಪ್ರಭಾರ ಆಡಳಿತ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts