More

    ಕರೊನಾ ಪೀಡಿತರು ಹೊಸ ಕಟ್ಟಡಕ್ಕೆ ಶಿಫ್ಟ್

    ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರ ನಿರ್ವಹಣೆಯಲ್ಲಿ ಆಗಿರುವ ಅವ್ಯವಸ್ಥೆ ಕುರಿತ ಆರೋಪಗಳು ಕೇಳಿಬರುತ್ತಿರುವ ನಡುವೆಯೇ ಅಧಿಕಾರಿಗಳು ಕರೊನಾ ಶಂಕಿತರನ್ನು ಪ್ರತ್ಯೇಕ ಕಟ್ಟಡವಾಗಿರುವ ನೂತನ ಆಯುಷ್ ಆಸ್ಪತ್ರೆಯ ಬ್ಲಾಕ್‌ಗೆ ಸ್ಥಳಾಂತರ ಮಾಡಿದ್ದಾರೆ.

    ಮಂಗಳೂರಿನಲ್ಲಿ ಇದುವರೆಗೆ ಕರೊನಾ ಸೋಂಕು ದೃಢಗೊಂಡಿರುವ ಭಟ್ಕಳ ಮತ್ತು ಕಾಸರಗೋಡು ನಿವಾಸಿಗಳಾದ ನಾಲ್ವರು ರೋಗಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.

    ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲೇ ತುಸು ದೂರದಲ್ಲಿರುವ ನೂತನ ಆಯುಷ್ ಆಸ್ಪತ್ರೆಯಲ್ಲಿ ಕರೊನಾ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ವೆನ್ಲಾಕ್‌ನಲ್ಲಿ ಶಂಕಿತರು ಹಾಗೂ ಪಾಸಿಟಿವ್ ಇರುವವರನ್ನು ಪ್ರತ್ಯೇಕವಾಗಿ ಇರಿಸದೆ ಒಟ್ಟಿಗೆ ಇರಿಸಲಾಗಿದೆ; ಇದರಿಂದಾಗಿ ಹಲವು ಮಂದಿಗೆ ಸೋಂಕು ತಗಲಿರುವ ಸಾಧ್ಯತೆ ಇದೆ ಎಂಬ ಮೊಬೈಲ್ ಸಂಭಾಷಣೆಯ ಆಡಿಯೋ ವೈರಲ್ ಸೋಮವಾರ ಆಗಿತ್ತು. ಸೂಕ್ತ ವ್ಯವಸ್ಥೆ ಇಲ್ಲದಿರುವ ಕುರಿತು ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು.

    ಪ್ರತಿ ರೋಗಿಗೂ ಪ್ರತ್ಯೇಕ ಕೊಠಡಿ: ನೂತನ ಆಯುಷ್ ಕಟ್ಟಡ ಹಾಗೂ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗಳಲ್ಲಿ ಕರೊನಾ ಪೀಡಿತರ ಹಾಗೂ ಶಂಕಿತರ ಚಿಕಿತ್ಸೆಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ವೆನ್ಲಾಕ್‌ಗೆ ಮಂಗಳವಾರ ಭೇಟಿ ನೀಡಿದ ಅವರು, ಆಯುಷ್ ಕಟ್ಟಡದಲ್ಲಿ ಪ್ರತೀ ರೋಗಿಗೂ ಪ್ರತ್ಯೇಕ ಕೊಠಡಿಗಳಿರುವ 18 ಕೊಠಡಿಗಳನ್ನು ಕಾದಿರಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿಯೂ ಪ್ರತ್ಯೇಕವಾಗಿರುವ ಕೊಠಡಿಗಳನ್ನು ಕಾದಿರಿಸಲಾಗಿದೆ. ಶಂಕಿತ ರೋಗಿ ದಾಖಲಾದ ತಕ್ಷಣ, ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ, ಕೌನ್ಸೆಲಿಂಗ್ ಮಾಡಿ, ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, ಸಾಕಷ್ಟು ಮುನ್ನೆಚ್ಚರಿಕೆ ಮಾಹಿತಿ ನೀಡಿ, ಮನೆಯಲ್ಲಿ ನಿಗಾದಲ್ಲಿರಲು ತಿಳಿಸಿ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದರೆ, ಚಿಕಿತ್ಸೆಯನ್ನು ಅದೇ ಕೊಠಡಿಯಲ್ಲಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
    ವೆನ್ಲಾಕ್ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ, ನನ್ನ ಗಮನಕ್ಕೆ ತರಬೇಕು. ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

    2652 ಮಂದಿ ಮನೆಯ ಕ್ವಾರಂಟೈನ್: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 39 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ, ಇದುವರೆಗೆ 2652 ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. 27 ಮಂದಿಯನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಇರಿಸಲಾಗಿದೆ. 14 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳವಾರ ಆಗಮಿಸಿದ 11 ವರದಿಗಳಲ್ಲಿ 7 ನೆಗೆಟಿವ್ ಇದ್ದು 4 ಪಾಸಿಟಿವ್ ಇವೆ. ಐದು ಮಂದಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಡಿಸಿ ಕಚೇರಿ ಬುಲೆಟಿನ್ ತಿಳಿಸಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಪ್ಪು ಮಾಹಿತಿ ಹರಡುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ಇರುವವರನ್ನು ಆಯುಷ್ ಹೊಸ ಆಸ್ಪತ್ರೆಯ ಬ್ಲಾಕ್‌ನಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    – ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ, ದ.ಕ

    ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ: ಕರೊನಾ ಶಂಕಿತರ ಹಾಗೂ ರೋಗಿಗಳ ಎಲ್ಲ ಮಾಹಿತಿ ಸಂಗ್ರಹಿಸಲು ಹಾಗೂ ಸಮನ್ವಯತೆ ಕಾಪಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಸಜ್ಜಿತ ಕಂಟ್ರೋಲ್ ರೂಂ ತೆರೆಯಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನಿರ್ದೇಶನದಂತೆ, ಕೆಎಎಸ್ ಅಧಿಕಾರಿಯಾಗಿರುವ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಟ್ರೋಲ್ ರೂಂನಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿ, ಬೇರೆ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಬಂದವರ ಮಾಹಿತಿ, ಅವರು ಸಂಪರ್ಕ ಹೊಂದಿದ ಪ್ರದೇಶಗಳು, ವ್ಯಕ್ತಿಗಳ ಮಾಹಿತಿಗಳನ್ನು ಈ ಕಂಟ್ರೋಲ್ ರೂಂನಲ್ಲಿ ಸಂಗ್ರಹಿಸಲಾಗುತ್ತಿದೆ.
    ಶಂಕಿತ ರೋಗಿಗಳ ವಿವರ, ವಿಮಾನದಲ್ಲಿ ಅವರೊಂದಿಗೆ ಬಂದ ಪ್ರಯಾಣಿಕರ ವಿವರಗಳನ್ನು ವಿಮಾನ ನಿಲ್ದಾಣದಿಂದ, ಸಂಬಂಧಪಟ್ಟ ವಿಮಾನ ಸಂಸ್ಥೆಗಳಿಂದ ಪಡೆದು ಅವರೊಂದಿಗೆ ನಿರಂತರ ಸಂಪರ್ಕ ಇಡಲಾಗುತ್ತಿದೆ. ವಿದೇಶದಿಂದ ಬಂದು ಗೃಹ ನಿಗಾವಣೆಯಲ್ಲಿ ಇರುವವರೊಂದಿಗೂ ನಿರಂತರ ನಿಗಾ ಇಡಲಾಗುತ್ತಿದೆ.

    ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಬಂದ ಪ್ರಯಾಣಿಕರ ವಿವರಗಳನ್ನು ಜಿಲ್ಲಾವಾರು ವಿಂಗಡಿಸಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಇಲ್ಲಿಂದಲೇ ಮಾಹಿತಿ ಕಳುಹಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರೊಂದಿಗೆ ಮಾತ್ರ ಇಲ್ಲಿಂದಲೇ ಪಡೆಯಲಾಗುತ್ತಿದೆ. ಇದರಿಂದ ಕರೊನಾ ಶಂಕಿತರ ಹಾಗೂ ನಿಗಾದಲ್ಲಿರುವ ಸಮಗ್ರ ವಿವರವನ್ನು ಕೇಂದ್ರೀಕರಿಸಲು ನೆರವಾಗಿದೆ. ವಿಮಾನ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಇಲಾಖೆಗಳ ನಡುವೆ ಮಾಹಿತಿ ಸಮನ್ವಯತೆಗೆ ಇದು ನೆರವಾಗಿದೆ.

    ಅಗತ್ಯವಿದ್ದರೆ ಇತರ ರೋಗಿಗಳ ಸ್ಥಳಾಂತರ:  ಕರೊನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಚಿಕಿತ್ಸೆ ನೀಡುವ ಅವಧಿಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ. ಮಂಗಳವಾರ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಕರೊನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಚಿಕಿತ್ಸೆ ನೀಡುವ ನೂತನ ಆಯುಷ್ ಕಟ್ಟಡಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಕರೊನಾ ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ಇತರ ರೋಗಿಗಳ ಬಗ್ಗೆಯೂ ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಬಿದ್ದಲ್ಲಿ ವೆನ್ಲಾಕ್‌ನಲ್ಲಿರುವ ಇತರೆ ರೋಗಿಗಳನ್ನು ಅಗತ್ಯ ಬಿದ್ದಲ್ಲಿ ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲು ಅವರು ತಿಳಿಸಿದರು.
    ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆ ದೊರಕಿಸಬೇಕು. ಆಯಾ ತಾಲೂಕಿನಲ್ಲಿರುವ ಖಾಸಗಿ ವೈದ್ಯರ ಸೇವೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

    ವೆನ್ಲಾಕ್‌ನಲ್ಲಿ ಕರೊನಾ ಚಿಕಿತ್ಸೆಯಲ್ಲಿ ಯಾವುದೇ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿದಿನ ವೆನ್ಲಾಕ್ ಅಧೀಕ್ಷಕರು ಆಸ್ಪತ್ರೆಯ ಎಲ್ಲ ವಿಭಾಗ ಮುಖ್ಯಸ್ಥರ, ವೈದ್ಯರ ಸಭೆ ನಡೆಸಿ, ಸಮನ್ವಯತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಸರ್ಕಾರದ ಉದ್ದೇಶ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲಾಗದು ಎಂದರು.
    ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಕರೊನಾ ರೋಗಿಗಳ ನಿರ್ವಹಣೆಯ ಮಾಹಿತಿ ನೀಡಿದರು. ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿದೇವಿ, ಡಿಸಿಪಿ ಲಕ್ಷ್ಮೀಗಣೇಶ್ ಮತ್ತಿತರರು ಇದ್ದರು.

    ನಳಿನ್ ಕಚೇರಿಯಲ್ಲಿ ವಾರ್ ರೂಂ: ಕರೊನಾ ಸಂದರ್ಭ ಸಾರ್ವಜನಿಕರಿಗೆ ಸಹಕಾರ ಹಾಗೂ ಅವಶ್ಯ ಸೇವೆ ಒದಗಿಸಲು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಕಚೇರಿಯಲ್ಲಿ ವಾರ್ ರೂಂ ತೆರೆಯಲಾಗಿದೆ. ಅನಿವಾರ್ಯ ಸಂದರ್ಭ ಜನತೆ ಮಾಹಿತಿ, ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರ್ಕಾರಿ ಸೇವೆಗಳಿಗೆ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ವೈದ್ಯಕೀಯ /ಆಂಬುಲೆನ್ಸ್ ಸೇವೆ: 0824-2448888, 94498 47134 (ಗುರುಚರಣ್), ಮಾಹಿತಿ /ಸರ್ಕಾರಿ ಸೇವೆ: 94834 96726 (ಸುಧಾಕರ್, ಸಂಸದರ ಕಾರ್ಯಾಲಯ ಕಾರ್ಯದರ್ಶಿ), ಮಂಗಳೂರು ಮಹಾ ನಗರ ಪಾಲಿಕೆ ಸೇವೆ: 98451 82462 (ದಿವಾಕರ ಪಾಂಡೇಶ್ವರ, ಮೇಯರ್), ಆಹಾರ ಸೇವೆ: 0824-2448888 (ಕದ್ರಿ ಮನೋಹರ ಶೆಟ್ಟಿ, ಕಾರ್ಪೋರೇಟರ್), ಜಿಲ್ಲಾ ಸಂಚಾಲಕರು: 94484 67540 (ನಿತಿನ್ ಕುಮಾರ್), 98440 22213(ಸುಧೀರ್ ಶೆಟ್ಟಿ, ಕಾರ್ಪೋರೇಟರ್), ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ: 1077.

    ವೆನ್ಲಾಕ್ ಆಸ್ಪತ್ರೆ ಅವ್ಯವಸ್ಥೆ ಆರೋಪ ಮಾಹಿತಿ ಪಡೆದ ನ್ಯಾಯಾಧೀಶರು: ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವ್ಯವಸ್ಥೆ ಮತ್ತು ಕ್ವಾರಂಟೈನ್ ಕುರಿತ ಗೊಂದಲಗಳ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಮಾಹಿತಿ ಪಡೆದರು.

    ದೂರವಾಣಿ ಮೂಲಕ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಅವರನ್ನು ಸಂಪರ್ಕಿಸಿದ ನ್ಯಾಯಾಧೀಶರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಐಸೋಲೇಶನ್ ವಾರ್ಡ್ ಮತ್ತು ಪ್ರತ್ಯೇಕ ವ್ಯವಸ್ಥೆ ಬಗ್ಗೆ ರಾಜೇಶ್ವರಿ ದೇವಿ ವಿವರಿಸಿದರು.

    ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೆನ್ಲಾಕ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವ್ಯಕ್ತವಾದ ಆರೋಪ ಹಿನ್ನೆಲೆಯಲ್ಲಿ ವಾಸ್ತವ ಪರಿಶೀಲಿಸಲು ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜತೆ ವೈಯಕ್ತಿಕವಾಗಿ ವೆನ್ಲಾಕ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡುವ ತಯಾರಿ ಮಾಡಿದ್ದರು. ಆದರೆ, ಹೈಕೋರ್ಟ್ ನ್ಯಾಯಾಧೀಶರೊಂದಿಗೆ ವಿಡಿಯೋ ಕಾನ್ಪರೆನ್ಸ್ನಲ್ಲಿ ಭಾಗವಹಿಸಬೇಕಾದ ಕಾರಣ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts