More

    ಮತ್ತೆ ಬೋರಲು ಬಿದ್ದ ಬದುಕು ; ಬೀದಿಗೆ ಬಂದ ವ್ಯಾಪಾರಿಗಳು ; ಕರೊನಾ 2ನೇ ಅಲೆಗೆ ಜಾತ್ರೆ ರದ್ದು

    ಮಧುಗಿರಿ ; ಕರೊನಾ 2ನೇ ಅಲೆಯ ಹೊಡೆತಕ್ಕೆ ಸಣ್ಣ ವ್ಯಾಪಾರಿಗಳ ಬದುಕು ಮತ್ತೆ ಬೋರಲು ಬಿದ್ದಿದೆ. ಕಳೆದ ವರ್ಷದ ನಷ್ಟ ಬಿಟ್ಟು ಈ ವರ್ಷವಾದರೂ ನಾಲ್ಕು ಕಾಸು ಮಾಡಿಕೊಳ್ಳೋಣ ಎಂದು ಆಸೆಗಣ್ಣಿನಿಂದ ದಂಡಿ ಮಾರಮ್ಮ ಜಾತ್ರೆಗೆ ಬಂದಿದ್ದ ಸಣ್ಣ ವ್ಯಾಪಾರಿಗಳಿಗೆ ಮತ್ತೆ ಮಹಾಮಾರಿ ಆಘಾತ ನೀಡಿದ್ದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

    ಮಾರ್ಚ್‌ನಲ್ಲಿ ಆರಂಭವಾಗುವ ಮಧುಗಿರಿ ದಂಡಿನ ಮಾರಮ್ಮನ ಜಾತ್ರೆ ತಾಲೂಕಿನಲ್ಲೇ ಬಹುದೊಡ್ಡ ಹಬ್ಬ. ಕಳೆದ ವರ್ಷ ಜಾತ್ರೆ ಆರಂಭವಾದ ಮೂರೇ ದಿನಗಳಿಗೆ ಕರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಯಿತು. ಇದರಿಂದಾಗಿ ಜಾತ್ರೆಗೆ ಅಂಗಡಿಗಳನ್ನು ತೆರೆದಿದ್ದ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು.

    ಈ ಬಾರಿಯಾದರೂ ಒಂದಷ್ಟು ಸಂಪಾದನೆ ಮಾಡುವ ಆಸೆಯಿಂದ ಬಂದಿರುವ ವ್ಯಾಪಾರಿಗಳನ್ನು 2ನೇ ಅಲೆ ಸಂಕಷ್ಟಕ್ಕೆ ದೂಡಿದೆ. ಈ ವರ್ಷವೂ ಸರ್ಕಾರ ಜಾತ್ರೆ ಸೇರಿ ಇನ್ನಿತರ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧ ವಿಧಿಸಿರುವುದರಿಂದ ಜನಸಂದಣಿ ಕ್ಷೀಣವಾಗಿದ್ದು ಅಂಗಡಿಗಳನ್ನು ತೆರೆದಿರುವ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ದಿಕ್ಕು ತೋಚದಂತಾಗಿದೆ.

    11.54 ಲಕ್ಷ ರೂಗೆ ಹರಾಜು ಕೂಗಿ ಸುಂಕ ಕಟ್ಟಿದ್ದೇನೆ, ಇಲ್ಲಿನ ಜಾತ್ರೆಯಲ್ಲಿ ಅಂಗಡಿ ತೆರೆದಿರುವ ಬಹಳಷ್ಟು ವ್ಯಾಪಾರಿಗಳು ಕೂಲಿ ಮಾಡುವವರು, ಸಾಲ ಮಾಡಿ ಅಂಗಡಿಗಳನ್ನು ತೆರೆದಿದ್ದಾರೆ, ಆದರೆ ಕರೊನಾದಿಂದಾಗಿ ಜನರು ಬಾರದೆ ವ್ಯಾಪಾರವೂ ಅಷ್ಟಕಷ್ಟೇ ಎನ್ನುವಂತಾಗಿದೆ ಎನ್ನುತ್ತಾರೆ ಬಸವರಾಜು.

    ದೂರದೂರುಗಳಿಂದ ಬಂದು ಲಕ್ಷಾಂತರ ರೂ. ಬಂಡವಾಳ ಹಾಕಿ ಅಂಗಡಿಗಳನ್ನಿಟ್ಟು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಸಿಹಿ ತಿಂಡಿ, ಆಟಿಕೆ ಸಾಮಗ್ರಿಗಳು, ಮನೋರಂಜನಾ ಆಟಗಳ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ, ಹಾಕಿರುವ ಬಂಡವಾಳವೂ ಕೈ ಸೇರದ ಆತಂಕ ಕಾಡುತ್ತಿದ್ದು, ದಂಡಿನ ಮಾರಮ್ಮನೇ ಕಾಪಾಡಬೇಕಿದೆ!

    ರಾಟೆ ಆಡಿಸುವವರ ಬದುಕು ಗಿರಗಿಟ್ಲೆ: ಜಾತ್ರೆಯಲ್ಲಿ ರಾಟೆಯೇ ಬಹು ದೊಡ್ಡ ಮನೋರಂಜನೆ. ಕಳೆದ ವರ್ಷ ರಾಟೆ ಆಡಿಸುವವರ ಬದುಕನ್ನು ಕರೊನಾ ನುಂಗಿತ್ತು. ಈಗ ಮತ್ತದೇ ಹೊಡೆತ ಬಿದ್ದಿದೆ. ರಾಟೆ ಸಾಮಗ್ರಿಗಳನ್ನು ಅಳವಡಿಸಲು ಸಾಗಣೆ ಮತ್ತು ಕೂಲಿ ಕಾರ್ಮಿಕರ ವೆಚ್ಚ ಸೇರಿ ಈಗಾಗಲೇ ಕಡಿಮೆಯೆಂದರೂ 4 ಲಕ್ಷ ರೂ. ಖರ್ಚಾಗಿದೆ, ಆದರೆ ಜಾತ್ರೆ ಮತ್ತೆ ರದ್ದಾಗಿದೆ. ರಾಟೆ ಆಡಿಸಲು ಅವಕಾಶ ನೀಡದಿದ್ದಲ್ಲಿ ವಿಷ ಕುಡಿಯುವುದೊಂದೇ ದಾರಿ, ಲಾಭ ಬೇಡ, ಬಾಡಿಗೆ ಬಂದರೆ ಸಾಕು ಎನ್ನುತ್ತಾರೆ ಜಾತ್ರೆಯಲ್ಲಿ ರಾಟೆ ಹಾಕಿರುವ ಧರ್ಮೇಂದ್ರ.

    ಸರ್ಕಾರದ ಆದೇಶದಂತೆ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನಲ್ಲಿ ನಡೆಯುವ ಎಲ್ಲ ಜಾತ್ರೆಗಳನ್ನು ರದ್ದು ಗೊಳಿಸಲಾಗಿದ್ದು, ಅದರಂತೆ ದಂಡಿನ ಮಾರಮ್ಮನ ಜಾತ್ರೆ ರದ್ದುಗೊಳಿಸಲಾಗಿದೆ. ಪರಸ್ಪರ ಅಂತರ ಮತ್ತು ಮಾಸ್ಕ್ ಧರಿಸಿ ದೇವರ ದರ್ಶನಕ್ಕೆ ಅವಕಾಶವಿದೆ.
    ಸೋಮಪ್ಪ ಕಡಕೋಳ, ಉಪವಿಭಾಗಾಧಿಕಾರಿ ಮಧುಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts