More

    ಪಶ್ಚಿಮಬಂಗಾಳದಲ್ಲಿ 18ವರ್ಷದ ಯುವಕನಿಗೆ ಕರೊನಾ ವೈರಸ್​; ಆತನ ಇಡೀ ಕುಟುಂಬದ ವಿರುದ್ಧ ದೀದಿ ಕಿಡಿ

    ಕೋಲ್ಕತ್ತ: ಇಲ್ಲಿನ ಮಹಿಳಾ ಐಎಎಸ್​ ಅಧಿಕಾರಿಯ ಮಗನೋರ್ವನಿಗೆ ಕರೊನಾ ವೈರಸ್​ ತಗುಲಿದೆ. ಈಗ ಆ ಯುವಕ, ಆತನ ತಂದೆ ತಾಯಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಕಿಡಿಕಾರಿದ್ದಾರೆ.

    ಈ ಯುವಕನ ತಾಯಿ ಐಎಸ್​ಎಸ್ ಅಧಿಕಾರಿ. ತಂದೆ ವೈದ್ಯ. ಲಂಡನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಭಾನುವಾರ ವಾಪಸ್​ ಬಂದಿದ್ದ. ವಿದೇಶದಿಂದ ಬಂದವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆದೇಶವಿದ್ದರೂ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲ. ಯುಕೆಯಿಂದ ವಾಪಸ್​ ಬಂದವನೇ ಹಲವರನ್ನು ಭೇಟಿಯಾಗಿದ್ದ. ಅನೇಕ ಸ್ಥಳಕ್ಕೆ ತೆರಳಿದ್ದ. ಮನೆಯಲ್ಲಿ ಆರಾಮಾಗಿ ಇದ್ದ. ಆತನ ತಾಯಿ ಕೂಡ ಸರ್ಕಾರಿ ಕಚೇರಿಗೆ ಬರುತ್ತಿದ್ದರು. ಮುಖ್ಯಮಂತ್ರಿ ಕಚೇರಿ ಇರುವ ಕಟ್ಟಡಕ್ಕೂ ಆಗಮಿಸಿದ್ದರು. ಹಾಗೇ ಹಲವು ಸಭೆಗಳಲ್ಲೂ ಭಾಗವಹಿಸಿದ್ದರು.

    ಈಗ ಆ ಯುವಕನಲ್ಲಿ ಕರೊನಾ ವೈರಸ್​ ಕಾಣಿಸಿಕೊಂಡಿದ್ದು ಇದು ಪಶ್ಚಿಮಬಂಗಾಳದ ಮೊದಲ ಪ್ರಕರಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ವಿಐಪಿ ಸ್ಥಾನಮಾನ ಪಡೆದವರೇ ಬೇಜವಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪಶ್ಚಿಮಬಂಗಾಳಕ್ಕೆ ಯಾರೇ ಬಂದರೂ ಅವರಿಗೆ ಸ್ವಾಗತವಿದೆ. ಆದರೆ ಕಾಯಿಲೆಗಳನ್ನು ಬನ್ನಿ ಎಂದು ಕರೆಯುವುದಿಲ್ಲ. ನೀವು ಒಮ್ಮೆಲೆ ವಿದೇಶದಿಂದ ಬಂದು, ಅಲ್ಲಿಂದ ಶಾಪಿಂಗ್​ ಮಾಲ್​ಗೆ ಹೋಗುವಂತಿಲ್ಲ. ಕಡ್ಡಾಯವಾಗಿ ತಪಾಸಣೆಗೆ ಒಳಗಾಗಲೇಬೇಕು. ವಿಐಪಿ ಕುಟುಂಬ ಎಂಬ ಕಾರಣಕ್ಕೆ ನಿಯಮಗಳನ್ನು ಮೀರುವಂತಿಲ್ಲ ಎಂದು ದೀದಿ ಖಡಕ್​ ಆಗಿ ಎಚ್ಚರಿಕೆ ನೀಡಿದ್ದಾರೆ.

    ಸೋಂಕಿತ ಯುವಕನ ತಾಯಿ ಸೋಮವಾರ ಪಶ್ಚಿಮಬಂಗಾಳ ಗೃಹ ಇಲಾಖೆ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ್ದರು. ಆ ಕಾರಣಕ್ಕೆ ಈಗ ಹಲವು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಶೀಘ್ರವೇ ವರದಿ ಬರಲಿದೆ. 

    ಯುವಕ ಇಂಗ್ಲೆಂಡ್​ನ ಪ್ರಮುಖ ವಿಶ್ವವಿದ್ಯಾಲಯವೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ. ಭಾನುವಾರ ಕೋಲ್ಕತ್ತಕ್ಕೆ ಬಂದಾಗ ಆತನಲ್ಲಿ ಯಾವುದೇ ಕರೊನಾ ಸೋಂಕು ಇರಲಿಲ್ಲ. ಆದರೆ ಅಂದು ಸಂಜೆ ಇಂಗ್ಲೆಂಡ್​ನಿಂದ ಫೋನ್​ ಮಾಡಿದ ಆತನ ಸ್ನೇಹಿತ, ಲಂಡನ್​ನಲ್ಲಿ ನಾವೆಲ್ಲ ಪಾಲ್ಗೊಂಡಿದ್ದ ಪಾರ್ಟಿಯಲ್ಲಿ ಇದ್ದವರಲ್ಲಿ ಮೂರು ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ ಎಂಬುದನ್ನು ತಿಳಿಸಿದ್ದ.

    ಸೋಮವಾರ ಬೆಳಗ್ಗೆ ಆತ ಸರ್ಕಾರಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದ್ದಾನೆ. ಆತನ ರಕ್ತ, ಗಂಟಲಿನ ದ್ರವದ ಮಾದರಿಯ ತಪಾಸಣಾ ವರದಿ ಮಂಗಳವಾರ ಪಾಸಿಟಿವ್​ ಎಂದು ಬಂದಿದೆ. ಅಷ್ಟರಲ್ಲಾಗಲೇ ಆತ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದ. ಆತನೊಂದಿಗೆ ಇದ್ದ ಅವನ ತಾಯಿ ಕೂಡ ಸಭೆ, ಸಮಾರಂಭದಲ್ಲಿ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

    ಕರೊನಾ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ; ನಾಲ್ಕು ಟಾಸ್ಕ್​ ಫೋರ್ಸ್​ಗಳ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts