More

    ಚಿಹ್ನೆ ಆಯ್ಕೆಗೆ ಅಭ್ಯರ್ಥಿಗಳ ಕಸರತ್ತು

    ಹಾವೇರಿ: ದ್ರಾಕ್ಷಿ ಇರ್ಲೋ ಹಸಿರು ಮೆಣಸಿನಕಾಯಿ ಇರ್ಲೋ? ಕೇಕ್ ಬೇಕೋ ಬ್ರೆಡ್ ಬೇಕೋ? ಆಟೋ ರಿಕ್ಷಾ ಇರ್ಲಿ, ಬ್ರೀಫ್​ಕೇಸ್ ಅಡ್ಡಿಯಿಲ್ಲ, ಚಪ್ಪಲಿ ಬೇಡಾ ಮಾರಾಯಾ..!

    ಸದ್ಯ ಇವು ಯಾವುದೋ ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಮಾತುಗಳಲ್ಲ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳು ಕಳೆದ ನಾಲ್ಕೈದು ದಿನಗಳಿಂದ ಮಾತನಾಡಿಕೊಳ್ಳುತ್ತಿರುವ ವಿಷಯಗಳಾಗಿವೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ಚಿಹ್ನೆಗಾಗಿ ಮಾಡುತ್ತಿರುವ ಚರ್ಚೆ.

    ಹೌದು, ರಾಜ್ಯದಲ್ಲಿನ ಗ್ರಾಪಂಗಳಿಗೆ ಮೊದಲ ಹಂತದ ಚುನಾವಣೆ ನಡೆಯುವ ಕಡೆಗಳಲ್ಲಿ ಚುನಾವಣೆ ಆಯೋಗ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಡಿ. 7ರಿಂದ ಆರಂಭಗೊಂಡಿದೆ. ಅಭ್ಯರ್ಥಿಗಳು ಚುನಾವಣೆ ಎದುರಿಸಲು ಆಯೋಗವು ಒಟ್ಟು 194 ಚಿಹ್ನೆಗಳನ್ನು ಗುರುತಿಸಿದ್ದು, ಇದರಲ್ಲಿ ತಮಗಿಷ್ಟವಾದ ಚಿಹ್ನೆಗಳನ್ನು ಪಡೆಯಲು ಅಭ್ಯರ್ಥಿಗಳು ಗ್ರಾಪಂ ಕಚೇರಿ ಎದುರು ಆಪ್ತರೆದುರು ಚರ್ಚೆ ನಡೆಸಿದ್ದಾರೆ. ಗ್ರಾಮೀಣ ಪ್ರದೇಶದವರಿಗೆ ಹೆಚ್ಚಾಗಿ ಪರಿಚಿತವಿರುವ ಚಿಹ್ನೆಗಳಿಗೆ ಭಾರಿ ಬೇಡಿಕೆ ಬಂದಿದ್ದು, ಅಂತಹ ಚಿಹ್ನೆಗಳಿಗಾಗಿ ಅಭ್ಯರ್ಥಿಗಳು ಹುಡುಕಾಡುತ್ತಿದ್ದಾರೆ.

    ಚುನಾವಣೆ ಆಯೋಗ ಆಯ್ಕೆಗಾಗಿ ಇಟ್ಟಿರುವ ಚಿಹ್ನೆಗಳು ಆಕರ್ಷಕ ಹಾಗೂ ಕುತೂಹಲಕಾರಿಯಾಗಿವೆ. ಹಲವರು ಚಿಹ್ನೆಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡು ನಾಮಪತ್ರ ಸಲ್ಲಿಕೆಗೆ ಗಂಟೆಗಟ್ಟಲೆ ವಿಳಂಬ ಮಾಡುತ್ತಿದ್ದಾರೆ. ಆಯೋಗ ನೀಡಿರುವ ಚಿಹ್ನೆಗಳಲ್ಲಿ ಏನುಂಟು ಏನಿಲ್ಲ ಎಂದು ಹುಡುಕಾಡಿ ಆಯ್ಕೆ ಮಾಡುವುದೇ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿದೆ. ದಿನಬಳಕೆಯ ವಸ್ತುಗಳು, ವಿದ್ಯುನ್ಮಾನ ಗೃಹೋಪಯೋಗಿ ವಸ್ತುಗಳು, ಹಣ್ಣು, ತರಕಾರಿಗಳು ಮತದಾರರಿಗೆ ಸುಲಭವಾಗಿ ತಿಳಿಯುವ, ನೆನಪಿಡುವ ಹಾಗೂ ಗುರುತಿಸುವ ದೃಷ್ಟಿಯಿಂದ ಅನುಕೂಲವಾಗಿದ್ದು, ಅವುಗಳಿಗೆ ಅಭ್ಯರ್ಥಿಗಳು ಹೆಚ್ಚಿನ ಗಮನಹರಿಸುತ್ತಿದ್ದಾರೆ.

    ಕೆಲವು ಆಭಾಸಕರ

    ಚಪ್ಪಲಿ ಚಿಹ್ನೆ ಪಡೆದರೆ ಮತದಾರರು ತಮ್ಮ ಬಗ್ಗೆ ಯಾವ ಅರ್ಥ ಕಲ್ಪಿಸುವರೊ ಏನೋ? ಟೋಪಿ, ಹವಾ ಹಾಕುವ ಪಂಪ್ ಆಯ್ದುಕೊಂಡರೆ ಮತದಾರರು ತಮ್ಮ ಬಗ್ಗೆ ತಪ್ಪು ತಿಳಿದುಕೊಂಡಾರು… ಎಂಬ ಆಲೋಚನೆಯಲ್ಲಿ ಮುಳುಗಿದ್ದಾರೆ ಅಭ್ಯರ್ಥಿಗಳು. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ರೀತಿಯ ಚಿಹ್ನೆ ಆಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳು ತಡಕಾಡುತ್ತಿದ್ದಾರೆ. ಅಭ್ಯರ್ಥಿ ತನ್ನ ನಾಮಪತ್ರದಲ್ಲಿ ಮೂರು ಚಿಹ್ನೆಗಳನ್ನು ಸೂಚಿಸಬಹುದಾಗಿದ್ದು, ಅವುಗಳಲ್ಲಿ ಒಂದಕ್ಕೆ ಚುನಾವಣಾಧಿಕಾರಿ ಅನುಮತಿ ನೀಡುತ್ತಾರೆ.

    ಹೆಚ್ಚಿನ ಬೇಡಿಕೆ

    ಆಯೋಗವು ಅಭ್ಯರ್ಥಿಗಳ ಆಯ್ಕೆಗಾಗಿ ನೀಡಿರುವ 194 ಚಿಹ್ನೆಗಳಲ್ಲಿ ಉಂಗುರ, ಆಟೋರಿಕ್ಷಾ, ಟೆಂಗಿನಕಾಯಿ, ಹೊಲಿಗೆ ಯಂತ್ರ, ಟ್ರ್ಯಾಕ್ಟರ್, ಬ್ಯಾಟ್ಸ್​ಮನ್, ಕ್ಯಾಮರಾ, ಟೆಲಿಫೋನ್, ತೆಂಗಿನಮರ, ಮಿಕ್ಸಿ, ವಿದ್ಯುತ್ ಕಂಬಗಳ ಚಿಹ್ನೆಗಳಿಗೆ ಹೆಚ್ಚು ಬೇಡಿಕೆ ಇದೆ. ಬಹುತೇಕ ಅಭ್ಯರ್ಥಿಗಳು ಈ ಚಿಹ್ನೆಗಳನ್ನೇ ಮೊದಲ ಆದ್ಯತೆ ಮೇಲೆ ತಮ್ಮ ನಾಮಪತ್ರದಲ್ಲಿ ನಮೂದಿಸುತ್ತಿದ್ದಾರೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನದ ಬಳಿಕ ಚುನಾವಣಾಧಿಕಾರಿಗಳು ಪರಿಶೀಲಿಸಿ ನೀಡುವ ಚಿಹ್ನೆ ಅಂತಿಮವಾಗಲಿದೆ. ಒಂದೊಮ್ಮೆ ಇಬ್ಬರು ಹಾಗೂ ಇಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಒಂದೇ ಚಿಹ್ನೆಗೆ ಬೇಡಿಕೆ ಸಲ್ಲಿಸಿದ್ದರೆ ಡ್ರಾ ಮೂಲಕ ಚಿಹ್ನೆ ವಿತರಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts