More

    ಪ್ಯಾಕೇಜ್ ಟೆಂಡರ್ ರದ್ದುಗೊಳಿಸಿ – ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ

    ಆಲಮಟ್ಟಿ: ಕೃಷ್ಣಾ ಜಲನಿಗಮದಿಂದ ಕರೆಯಲಾಗುವ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಲಮಟ್ಟಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಅಸ್ಕಿ ಫೌಂಡೇಷನ್ ಅಧ್ಯಕ್ಷ, ಗುತ್ತಿಗೆದಾರ ಸಿ.ಬಿ.ಅಸ್ಕಿ ಮಾತನಾಡಿ, ಆಲಮಟ್ಟಿ ಅಣೆಕಟ್ಟು ವಲಯದಲ್ಲಿ ಟೆಂಡರ್ ನಿಯಮ ಗಾಳಿಗೆ ತೂರಿ, ಸಿಸಿ ರಸ್ತೆ, ವಿತರಣಾ ಕಾಲುವೆ ಮತ್ತು ಅಚ್ಚುಕಟ್ಟು ರಸ್ತೆ ಕಾಮಗಾರಿಗಳನ್ನು ಒಟ್ಟುಗೂಡಿಸಿ ಅಂದಾಜು 30 ರಿಂದ 40 ಕೋಟಿ ರೂ.ಗಳ ಒಂದೇ ಕಾಮಗಾರಿ ಮಾಡಿ ಟೆಂಡರ್ ಕರೆಯಲಾಗಿದೆ. ಇದರಿಂದ ನೂರಾರು ಗುತ್ತಿಗೆದಾರರಿಗೆ ತೊಂದರೆಯಾಗಿದೆ ಎಂದರು.

    ಪ್ಯಾಕೇಜ್ ಜತೆ ಅಲ್ಪಾವಧಿ ಟೆಂಡರ್ ಕೂಡ ಮಾಡಲಾಗಿದೆ. ಅದು ಸಂಪೂರ್ಣ ನಿಯಮ ಬಾಹಿರವಾಗಿದ್ದಲ್ಲದೆ, ಟೆಂಡರ್ ಗುತ್ತಿಗೆ ಹಾಕಲು ಕೇವಲ ಒಂದು ವಾರ ಕಾಲಾವಧಿ ನೀಡಲಾಗಿದೆ ಎಂದು ಆರೋಪಿಸಿದರು.

    ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದಲ್ಲಿ ಕರೆಯಲಾಗಿರುವ ಟೆಂಡರ್‌ಗಳನ್ನು ಹೊಸ ದರಗಳಿಗೆ ಅನ್ವಯಿಸಬೇಕು. ಬೇರೆ ಬೇರೆ ವಿತರಣಾ ಕಾಲುವೆ, ಕಿ.ಮೀ.ಗಳನ್ನು ಒಟ್ಟಾಗಿ ಸೇರಿಸಿ ಪ್ಯಾಕೇಜ್ ಮಾಡಿ ಕರೆಯಲಾದ ಟೆಂಡರ್‌ಗಳನ್ನು ರದ್ದುಪಡಿಸಬೇಕು ಎಂದರು.

    ಗುತ್ತಿಗೆದಾರ ಸಿ.ಜಿ.ವಿಜಯಕರ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ಬದುಕಿಗಾಗಿ ಸಣ್ಣ ಪುಟ್ಟ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮೂಲದ ದೊಡ್ಡ ದೊಡ್ಡ ಗುತ್ತಿಗೆದಾರರು ಯುಕೆಪಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈಗ ಚಿಕ್ಕ ಚಿಕ್ಕ ಕೆಲಸಗಳನ್ನೆಲ್ಲ ಒಟ್ಟು ಮಾಡಿ ಪ್ಯಾಕೇಜ್ ಮಾಡುವುದರ ಹಿಂದಿನ ಅರ್ಥವಾದರೂ ಏನು ಎಂದು ಪ್ರಶ್ನಿಸಿದರು.

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎ.ಮೇಟಿ ಮಾತನಾಡಿ, ಕೂಡಲೇ ಈ ಪ್ಯಾಕೇಜ್ ಟೆಂಡರ್ ರದ್ದುಗೊಳಿಸದಿದ್ದರೆ ಮುಖ್ಯ ಇಂಜಿನಿಯರ್ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

    ಉಪಮುಖ್ಯ ಇಂಜಿನಿಯರ್ ಡಿ.ಸುರೇಶ ಮನವಿ ಸ್ವೀಕರಿಸಿದರು. ರಾಯನಗೌಡ ದಾಸರೆಡ್ಡಿ, ಬಿ.ಪಿ.ರಾಠೋಡ, ಪಿ.ಎಸ್.ಅಜಲಪುರ, ಬಿ.ವೈ.ಮೈಲೇಶ್ವರ, ರುದ್ರಗೌಡ ಅಂಗಡಗೇರಿ, ಬಿ.ಎಸ್.ಬಯ್ಯಪುರ, ಸಂತೋಷ ಲಮಾಣಿ, ವೆಂಕಟೇಶ ನಾಯಕ, ಚನ್ನಪ್ಪ ವಿಜಯಕರ, ವೈ.ವೈ.ಚಲವಾದಿ, ವೈ.ವೈ.ಬಿರಾದಾರ, ಮಹಾಂತೇಶ ಡೆಂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts