More

    ಕಾಲುವೆ ನೀರಿಗೆ ಕಾಯುತ್ತಿರುವ ರೈತ

    ಅಥಣಿ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದರೂ ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದ ತಾಲೂಕಿನ ಪೂರ್ವ ಭಾಗದ ಕರಿಮಸೂತಿ ಏತ ನೀರಾವರಿ ಹಾಗೂ ಸಾವಳಗಿ-ತುಂಗಳ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಬಿಡದಿರುವುದರಿಂದ ರೈತರಲ್ಲಿ ಬೇಸರ ಮೂಡಿದೆ.

    ಪ್ರತಿ ವರ್ಷ ಮುಂಗಾರು ಬೆಳೆಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ಸಾವಿರಾರು ಎಕರೆಯಲ್ಲಿ ರೈತರು ವಿವಿಧ ಬೆಳೆ ಬೆಳೆಯುತ್ತ ಬಂದಿದ್ದಾರೆ. ಈ ಬಾರಿ ನೀರು ಹರಿಸುವುದು ವಿಳಂಬವಾಗುತ್ತಿದೆ. ಇದರಿಂದ ರೈತರಲ್ಲಿ ಚಿಂತೆ ಶುರುವಾಗಿದೆ. ಕಳೆದ ಮೇ ಕೊನೆಯ ವಾರದಲ್ಲಿ ಮಳೆ ಆಗಿದ್ದರಿಂದ ಬಿರುಸಿನಿಂದ ಬಿತ್ತನೆ ಮಾಡಿದ್ದರು. ಆದರೆ, ಜೂನ್‌ನಲ್ಲಿ ಸರಿಯಾಗಿ ಮಳೆಯಾಗದಿರುವುದರಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ಕಾಲುವೆ ನೀರಿನ ಅಗತ್ಯವಿದೆ. ಆದ್ದರಿಂದ ಶೀಘ್ರ ತಾಲೂಕಾಡಳಿತ ಕಾಲುವೆಗೆ ನೀರು ಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

    ಕಾಲುವೆ ನೀರು ಅವಲಂಬಿತ ಗ್ರಾಮಗಳು: ಮಳೆ ಕೈ ಕೊಟ್ಟರೂ ಕಾಲುವೆ ನೀರು ಕೈ ಹಿಡಿಯುತ್ತದೆ ಎಂದು ಹಲವು ಗ್ರಾಮಗಳು ರೈತರು ಪ್ರತಿ ವರ್ಷ ಅಲ್ಪಸ್ವಲ್ಪ ಮಳೆಯಾದರೂ ಮುಂಗಾರು ಹಂಗಾಮಿನಲ್ಲಿ ಹಲವು ಬೆಳೆ ಬೆಳೆಯಲು ಬಿತ್ತನೆ ಮಾಡುತ್ತಾರೆ. ಅದರಂತೆ ಈ ಬಾರಿಯೂ ಶೇಂಗಾ, ಉದ್ದ, ಗೋವಿನ ಜೋಳ, ತೊಗರಿ ಸೇರಿ ಇತರ ಬೆಳೆ ಬೆಳೆಯಲು ಬಿತ್ತನೆ ಮಾಡಿದ್ದಾರೆ. ಇಲ್ಲಿಯವರಗೆ ವಾಡಿಕೆಯಂತೆ ಮಳೆ ಆಗಿಲ್ಲ. ನೀರಿನ ಕೊರತೆ ಆರಂಭವಾಗಿದೆ.

    ಏತ ನೀರಾವರಿ ಕಾಲುವೆ ಮೂಲಕ ನೀರು ಬಿಡಬೇಕು. ಇದರಿಂದ ಕಾಲುವೆ ನೀರನ್ನೇ ನಂಬಿರುವ ಯಲ್ಲಮ್ಮವಾಡಿ, ಐಗಳಿ, ಕೋಹಳ್ಳಿ, ಯಂಕಚಿ, ಬಡಚಿ, ಬಾಡಗಿ, ಅರಟಾಳ, ಕಟಗೇರಿ, ಹಾಲಳ್ಳಿ ಸೇರಿ ಹಲವು ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.

    ಸದ್ಯ ಈ ಗ್ರಾಮಗಳಲ್ಲಿ ರೈತರ ಬೆಳೆಗೆ ನೀರಿನ ಕೊರತೆ ಉಂಟಾಗಿದೆ. ಬಸವೇಶ್ವರ ಏತ ನೀರಾವರಿ ವ್ಯಾಪ್ತಿಗೆ ಒಳಪಡುವ ತಾಲೂಕಿನ ಉತ್ತರ ಭಾಗದ ಸಂಬರಗಿ, ಪಾಂಡೇಗಾಂವ, ಗುಂಡೇವಾಡಿ, ಮಲಾಬಾದ, ಮದಭಾವಿ, ಅನಂತಪುರ, ಖಿಳೇಗಾಂವಿ, ಶಿರೂರ, ಜಂಬಗಿ ಮತ್ತಿತರ ಗ್ರಾಮಗಳ ಜಮೀನುಗಳಿಗೆ ನೀರಿನ ಅಭಾವ ಇದೆ. ಕಾಲುವೆ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.

    ಏತ ನೀರಾವರಿ ಕಾಲುವೆಗಳಿಗೆ ನಾಲ್ಕೈದು ದಿನಗಳಲ್ಲಿ ನೀರು ಹರಿಸುತ್ತೇವೆ. ಕಾಲುವೆಗಳ ಸ್ವಚ್ಛತಾ ಕಾರ್ಯ ನಡೆದಿದೆ. ನೀರಿನ ಮೋಟಾರ್ ದುರಸ್ತಿ ಮಾಡಲಾಗಿದೆ. ಕಾಲುವೆ ಕೊನೆಯ ಭಾಗದವರೆಗೂ ನೀರು ಹರಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ.
    | ಕೆ.ಕೆ. ಜಾಲಿಬೇರಿ ಅಥಣಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತ

    ಕಾಲುವೆ ಗೇಟ್‌ಗಳ ರಿಪೇರಿ ಕಾರ್ಯ ಭರದಿಂದ ಸಾಗಿದೆ. ಮೂರು ತಿಂಗಳಿಂದ ದುರಸ್ತಿ ನಡೆದಿದೆ. ಕೆಲವು ತಾಂತ್ರಿಕ ದೋಷದಿಂದ ನೀರು ಬಿಡಲು ವಿಳಂಬವಾಗಿದೆ. ಇನ್ನೆರೆಡು ದಿನಗಳಲ್ಲಿ ಎಲ್ಲ ಕಾರ್ಯ ಪೂರ್ಣಗೊಳಿಸಿ ನೀರು ಹರಿಸಲಾಗುವುದು.
    |ಮಹೇಶ ಕುಮಠಳ್ಳಿ ಶಾಸಕ

    | ರಾಜು ಎಸ್. ಗಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts