More

    ಮೂರು ದಿನ ಯಥಾಸ್ಥಿತಿ: ಲಾಕ್​ಡೌನ್ ಸಡಿಲ ಇಲ್ಲ |ಸಂಪುಟ ಸಭೆಯಲ್ಲಿ ಒಮ್ಮತ ನಿರ್ಧಾರ

    ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ವಿಚಾರದಲ್ಲಿ ಕೆಲವು ಗೊಂದಲ ಮಾಡಿಕೊಂಡಿದ್ದ ರಾಜ್ಯ ಸರ್ಕಾರ ಇದೀಗ ತನ್ನ ನಿಲುವನ್ನು ಸ್ಪಷ್ಟಮಾಡಿಕೊಂಡಿದ್ದು, ಮುಂದಿನ ಮೂರು ದಿನ ಯಾವುದೇ ರೀತಿಯ ವಿನಾಯಿತಿ ಕೊಡದಿರಲು ನಿರ್ಧರಿಸಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಲಾಕ್​ಡೌನ್ ಕುರಿತಂತೆಯೇ ಚರ್ಚೆ ನಡೆಯಿತು.

    ಹಲವು ಸಚಿವರು ಅನಿಸಿಕೆ ವ್ಯಕ್ತಪಡಿಸಿ, ಮುಂದಿನ ತೀರ್ವನವನ್ನು ಸಿಎಂ ವಿವೇಚನೆಗೆ ಬಿಟ್ಟರು. ಅಂತಿಮವಾಗಿ ಕೋವಿಡ್-19 ವ್ಯಾಪಿಸುವುದನ್ನು ತಡೆಗಟ್ಟಲು ಲಾಕ್​ಡೌನ್ ಅವಧಿಯನ್ನು ಮೇ 3ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಸುವುದು, ಕೇಂದ್ರ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಇನ್ನೆರೆಡು ದಿನದಲ್ಲಿ ಬರುವ ನಿರೀಕ್ಷೆ ಇದ್ದು ಬಳಿಕ ಸಿಎಂ ನೇತೃತ್ವದಲ್ಲಿ ಪ್ರಮುಖ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿತು.

    ಸಭೆ ಬಳಿಕ ಮಾಧ್ಯಮಗಳಿಗೆ ವಿವರಣೆ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಲಾಕ್​ಡೌನ್ ಅನುಷ್ಠಾನದಲ್ಲಿ ತಕ್ಷಣಕ್ಕೆ ಯಾವುದೇ ಸಡಿಲಿಕೆ ಇಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಏನಾದರೂ ಬಂದಲ್ಲಿ ಅದರಲ್ಲಿ ಹೇಳಿರುವ ವಿನಾಯಿತಿಗಳನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆ, ಐಟಿ ಸೇರಿ ಯಾವುದೇ ಕ್ಷೇತ್ರಕ್ಕೂ ಇನ್ನು ಮೂರು ದಿನ ವಿನಾಯಿತಿಗಳಿರಲ್ಲ ಎಂದರು.

    ಕಾಫಿ, ಮೆಣಸು ಬೆಳೆಗಾರರ ಆತಂಕ: ಲಾಕ್​ಡೌನ್​ನಿಂದಾಗಿ ಕಾಫಿ, ಸಾಂಬಾರು ಪದಾರ್ಥಗಳ ಬೆಳೆಗಾರರು ಕಂಗಾಲಾಗಿದ್ದು, ತಕ್ಷಣವೇ ಮಧ್ಯ ಪ್ರವೇಶಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿಷಯ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಕೇಂದ್ರ ವಾಣಿಜ್ಯ ಸಚಿವರ ಗಮನಕ್ಕೆ ತರಲು ನಿರ್ಧರಿಸಲಾಯಿತು.

    152 ಪ್ರಕರಣ ಹಿಂದಕ್ಕೆ

    ರೈತರ ಹೋರಾಟ, ಟಿಪ್ಪು ಜಯಂತಿ ಗಲಭೆ, ಗಣಪತಿ ಗಲಾಟೆಗಳು, ನದಿ ನೀರು ಹಂಚಿಕೆ ಸಂಬಂಧ ಪ್ರತಿಭಟನೆ ಸಂದರ್ಭ ಹೂಡಲಾಗಿದ್ದ ಪ್ರಕರಣಗಳ ಪೈಕಿ 152 ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆ. ಈ ಹಿಂದೆ ಹಿಂಪಡೆದಿದ್ದ 46 ಪ್ರಕರಣಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ವಿಷಯಗಳಲ್ಲಿ ದಾಖಲಾದ 152 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.

    ಲಕ್ಷ ಕುಟುಂಬಕ್ಕೆ ಸಿಲಿಂಡರ್ ಉಚಿತ

    ಸಿಎಂ ಅನಿಲ ಭಾಗ್ಯ ಮತ್ತು ಅರಣ್ಯ ಇಲಾಖೆಯ ಗ್ಯಾಸ್ ಸಂಪರ್ಕ ಪಡೆದುಕೊಂಡ ಒಟ್ಟು ಒಂದು ಲಕ್ಷ ಫಲಾನುಭವಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಂದಿನ ಮೂರು ತಿಂಗಳು ಉಚಿತ ಸಿಲಿಂಡರ್ ವಿತರಿಸಲು ಸಂಪುಟ ಸಭೆ ತೀರ್ವನಿಸಿದೆ. ಇದಕ್ಕಾಗಿ 27.52 ಕೋಟಿ ರೂ. ವೆಚ್ಚ ಭರಿಸಲು ಅನುಮೋದನೆ ನೀಡಲಾಗಿದೆ.

    ನಿಗಮ-ಮಂಡಳಿ ಸಿಬ್ಬಂದಿ ಸರ್ಕಾರಿ ನೌಕರರಲ್ಲ

    ಇನ್ನುಮುಂದೆ ನಿಗಮ-ಮಂಡಳಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗುವುದಿಲ್ಲ. ಈ ಸಂಬಂಧ ಸುಗ್ರೀವಾಜ್ಞೆ ತರಲು ಸಮ್ಮತಿಸಲಾಗಿದೆ. ನಿಗಮ-ಮಂಡಳಿಗಳ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮೇರೆಗೆ ಇಲಾಖೆಗಳಿಗೆ ತೆರಳಿ, ಬಳಿಕ ತಾವು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ನಿಯಮಾವಳಿಗೆ ತಿದ್ದುಪಡಿ ತರಲಾಗುತ್ತಿದೆ.

    ಸನ್ನಡತೆ ಬಿಡುಗಡೆಗೆ ಹೊಸ ನಿಯಮ

    ಜೀವಾವಧಿ ಶಿಕ್ಷೆಗೊಳಗಾಗಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಅಥವಾ 10 ವರ್ಷ ಶಿಕ್ಷೆ ಅನುಭವಿಸಿದ ಕೈದಿಗಳಿಗೆ ಸನ್ನಡತೆ ಆಧಾರದ ಮೇರೆಗೆ ಅವಧಿಪೂರ್ವ ಬಿಡುಗಡೆಗೆ ನಿಯಮಗಳ ಕರಡನ್ನು ಸಂಪುಟ ಅನುಮೋದಿ ಸಿದೆ. ಈ ಮುನ್ನ, ರಾಜ್ಯಪಾಲರಿಗೆ ಕಳುಹಿಸಿ ಬಿಡುಗಡೆಗೆ ಶಿಫಾರಸು ಮಾಡಲಾಗುತ್ತಿತ್ತು. ಇದೀಗ ಸನ್ನಡತೆ ಆಧಾರದ ಮೇರೆಗೆ ಸೂಕ್ತ ನಿಯಮ ರೂಪಿಸಲು ಒಪ್ಪಿಗೆ ನೀಡಿದೆ.

    ರಸ್ತೆಗೆ 2729 ಕೋಟಿ ರೂ.

    ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೆಯ ಹಂತದಲ್ಲಿ ರಸ್ತೆ ಅಭಿವೃದ್ಧಿಗೆ ಕೇಂದ್ರದ ಪಾಲು 1274 ಕೋಟಿ ರೂ. ಒಳಗೊಂಡಂತೆ 2729.66 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಮ್ಮತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದಾರೋಜಿ ಗ್ರಾಮಕ್ಕೆ 23.40 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಲಾಗಿದೆ. ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಗೆ ಸರ್ಕಾರ ತನ್ನ ಪಾಲಿನ ವಿಮಾ ಮೊತ್ತ 18.59 ಕೋಟಿ ರೂ. ಭರಿಸಲು ಒಪ್ಪಿಗೆ ನೀಡಲಾಗಿದೆ.

    ಪ್ರಮುಖ ನಿರ್ಧಾರಗಳು

    ವೈದ್ಯ ಶಿಕ್ಷಣ ಸಿಬ್ಬಂದಿಗೆ ಗುಡ್​ನ್ಯೂಸ್

    ಏಳನೇ ವೇತನ ಆಯೋಗದ ಶಿಫಾರಸಿನಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಿಸ್ತರಿಸಲಾಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 137 ಕೋಟಿ ರೂ. ಹೊರೆಯಾಗಲಿದೆ. ಅಲ್ಲದೆ, ಇದರ ಲಾಭ 2800 ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ದೊರೆಯಲಿದೆ. ಮೈಸೂರು ಮಿನರಲ್ಸ್ ಲಿಮಿಟೆಡ್​ಗೆ ಸೇರಿದ ಜಾಗವು ಕಂದಾಯ ಇಲಾಖೆಗೆ ಸೇರಿದ್ದೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂಬ ಬಗ್ಗೆ ವ್ಯಾಜ್ಯ ಬಗೆಹರಿದಿದ್ದು, ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದೆಂಬ ನ್ಯಾಯಾಲಯದ ಆದೇಶ ಒಪ್ಪಲಾಗಿದೆ.

    ಚಿಕ್ಕಮಗಳೂರು ಕಾಲೇಜಿಗೆ 438 ಕೋಟಿ ರೂ.

    ಕೇಂದ್ರ ಪುರಸ್ಕೃತ ಯೋಜನೆಯಡಿ ಕೇಂದ್ರದ ಪಾಲು ಹಾಗೂ ರಾಜ್ಯದ ಪಾಲೂ ಎರಡೂ ಸೇರಿ 438.75 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಚಿವ ಸಂಪುಟ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಇದರಲ್ಲಿ ಕಟ್ಟಡ ಕಾಮಗಾರಿಗಳಿಗೆ 325 ಕೋಟಿ ರೂ. ಹಾಗೂ ಉಪಕರಣ ಮತ್ತು ಪೀಠೋಪಕರಣ ಖರೀದಿಗಾಗಿ 71 ಕೋಟಿ ರೂ. ಒಳಗೊಂಡಿದೆ. ಅಂತೆಯೇ, ಈ ಮಹಾ ವಿದ್ಯಾಲಯಕ್ಕೆ ಎಂಬಿಬಿಸ್ ಪ್ರವೇಶಕ್ಕೆ 150 ಇನ್​ಟೇಕ್ ನಿಗದಿಪಡಿಸಲಾಗಿದೆ.

    ತಾಯಿಯ ಹಸಿವು ನೀಗಿಸಲು ಕಳ್ಳತನ ಮಾಡಿದ ಹುಡುಗನಿಗೆ ನ್ಯಾಯಾಧೀಶರಿಂದ ಅನಿರೀಕ್ಷಿತ ‘ಶಿಕ್ಷೆ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts