More

    ಸಚಿವಾಕಾಂಕ್ಷಿಗಳಿಗೆ ನಿರಾಸೆ: ಅಮಿತ್ ಷಾ ಜತೆಗೆ ಬೆಂಗಳೂರಿನಲ್ಲೇ ಚರ್ಚೆಗೆ ಸಿಎಂ ಒಲವು

    ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಹಸಿರು ನಿಶಾನೆ ಸಿಗಲಿದೆ. ಈ ಬಾರಿ ಅಂತಿಮ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಮರಳಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

    ಅಧಿಕೃತ ಕಾರ್ಯಕ್ರಮ, ಪ್ರಧಾನಿ ಔತಣಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಬೊಮ್ಮಾಯಿ ದೆಹಲಿ ಪ್ರವಾಸ ಸೀಮಿತವಾಗಿದ್ದು, ವರಿಷ್ಠರಿಗೆ ಕಾಲಾವಕಾಶ ಕೇಳಿಲ್ಲ. ಭೇಟಿ ಮಾಡುವುದೂ ಇಲ್ಲವೆಂದು ಸ್ವತಃ ಸಿಎಂ ಹೇಳಿರುವುದು ನಿರಾಸೆಗೆ ಮೊದಲ ಕಾರಣ. ಮಂತ್ರಿ ಮಂಡಲಕ್ಕೆ ಮೇಜರ್ ಸರ್ಜರಿಯಾಗಲಿದೆ ಎಂದು ಪಕ್ಷದ ಒಳಗೆ, ದೆಹಲಿ ನಾಯಕರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ ಸ್ಪಷ್ಟತೆಯಿಲ್ಲ. ವರಿಷ್ಠರ ಮನದಲ್ಲಿ ಏನಿದೆ ಎನ್ನುವುದು ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯ ನಾಯಕರಿಗೆ ಸುಳಿವು ಸಿಗುತ್ತಿಲ್ಲವೆಂಬ ಅನುಮಾನ ಹಲವರನ್ನು ಕಾಡುತ್ತಿದೆ.

    ಹೊಸಪೇಟೆ ಕಾರ್ಯಕಾರಿಣಿ ಸಭೆಗೆ ಬಂದಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಜತೆಗೆ ಔಪಚಾರಿಕವಾಗಿ ರ್ಚಚಿಸಿದ್ದರು. ದೆಹಲಿಗೆ ಹೋದ ನಂತರ ಕರ್ನಾಟಕದ ಬಗ್ಗೆ ಸಭೆ ನಡೆಸಿ ಸಂದೇಶ ಕಳುಹಿಸುವ ಸುಳಿವು ನೀಡಿದ್ದರು ಎನ್ನಲಾಗಿದ್ದು, ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ಇದೇ ಕಾರಣಕ್ಕೆ ಬೊಮ್ಮಾಯಿ ವರಿಷ್ಠರತ್ತ ಬೊಟ್ಟು ತೋರಿಸುತ್ತಿದ್ದು, ಸಚಿವ ಪದವಿಗೆ ತೆರೆಮರೆಯಲ್ಲಿ ಲಾಬಿ ನಡೆಸುತ್ತಿರುವವರು, ಒತ್ತಡ ತರುತ್ತಿರುವವರ ನಿರಾಸೆಗೆ ಒಳಗಾಗಿದ್ದಾರೆ.

    ಅಸಹನೆ ಹೆಚ್ಚಳ: ಸಚಿವ ಸಂಪುಟಕ್ಕೆ ಸರ್ಜರಿ, ನಿಗಮ-ಮಂಡಳಿಗಳ ಪುನಾರಚನೆ ವಿಚಾರದಲ್ಲಿ ವರಿಷ್ಠರ ನಿಲುವು, ರಾಜ್ಯ ನಾಯಕರ ಪ್ರಯತ್ನವೇನು ತಿಳಿಯದ ಮುಖಂಡರಲ್ಲಿ ಅಸಹನೆ ಹೆಚ್ಚುತ್ತಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ಕ್ರಮವಾಗಿ ಬಹಳಷ್ಟು ಬದಲಾವಣೆಗಳಾಗಲಿವೆ ಎಂಬ ಮಾತು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು, ಯಾವಾಗ? ಎಂಬ ಪ್ರಶ್ನೆಗೆ ನಿಖರ ಉತ್ತರವಿಲ್ಲ.

    ಚುನಾವಣೆಗೆ ಒಂದು ವರ್ಷ ಉಳಿದಿದ್ದು, ವರಿಷ್ಠರು ವಿಳಂಬ ಮಾಡಿದಷ್ಟು ಪಕ್ಷಕ್ಕೆ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂಬ ಆತಂಕವನ್ನು ಮೂಲಗಳು ವ್ಯಕ್ತಪಡಿಸಿವೆ. ಅತಂತ್ರ ಮನಸ್ಥಿತಿಯಿಂದ ಅಧಿಕಾರದಲ್ಲಿ ಇರುವವರು ತಮ್ಮ ಸ್ಥಾನಕ್ಕೆ ನ್ಯಾಯ ಸಲ್ಲಿಸಲಾಗದು, ಇತ್ತ ಆಸೆಯಿಟ್ಟುಕೊಂಡವರ ಬೇಗುದಿ ಹೆಚ್ಚಲಿದೆ.

    ನಿಗಮ-ಮಂಡಳಿ ಪುನಾರಚನೆ ಪಟ್ಟಿ ಸಿಎಂ ಕೈಯ್ಯಲ್ಲಿದ್ದರೂ ನಿರ್ಧಾರ ತೆಗೆದುಕೊಳ್ಳಲು ಅವರೇ ಮೀನಮೇಷ ಎಣಿಸುತ್ತಿದ್ದಾರೆ ಎಂದು ತಿಳಿದಿದೆ. ವರಿಷ್ಠರು ಒಪ್ಪಿಗೆ ಕೊಟ್ಟ ನಂತರ ವಿಳಂಬದ ಸಾಹಸಕ್ಕೆ ಬೊಮ್ಮಾಯಿ ಕೈಹಾಕರು. ಬೇರೆ ಏನೂ ಕಾರಣಗಳಿರಬೇಕು ಎಂದು ಮೂಲಗಳು ಸಂಶಯ ವ್ಯಕ್ತಪಡಿಸಿವೆ.

    ಬೇಸರವೇ ಜಾಸ್ತಿ: ಪುನಾರಚನೆ ಒತ್ತಟ್ಟಿಗರಿಲಿ, ಖಾಲಿಯಿರುವ ಐದು ಸ್ಥಾನಗಳನ್ನು ತುಂಬುತ್ತಿಲ್ಲ. ಹೊಸಬರಿಗೆ ಹೊಣೆ ಅರ್ಥ ಮಾಡಿಕೊಳ್ಳಲು ಆರು ತಿಂಗಳು ಬೇಕಾಗಲಿದೆ. ಉಳಿದ ಮೂರು ತಿಂಗಳಲ್ಲಿ ಏನು ಸಾಧಿಸಿ ತೋರಿಸಲಾಗದು. ಹೀಗಾಗಿ ಸಚಿವ ಸ್ಥಾನ ಕೊಟ್ಟರೂ ಅಷ್ಟೇ ಬಿಟ್ಟರೂ ಅಷ್ಟೇ ಎಂದು ಕೆಲ ಶಾಸಕರು ತಮ್ಮ ಆಪ್ತರ ಬಳಿ ನಿಡುಸುಯ್ದಿದ್ದಾರೆ.

    ಕಾದು ನೋಡುವ ತಂತ್ರಕ್ಕೆ ಜೋತು ಬಿದ್ದಿರುವ ವರಿಷ್ಠರ ನಿಗೂಢ ನಡೆ ಕೌತುಕದ ಬದಲಿಗೆ ಬೇಸರ ಮಡುಗಟ್ಟಿದ್ದು, ಚುನಾವಣೆ ಸಮೀಪಿಸುತ್ತಿರುವುದು ಮೂಲ ಕಾರಣ ಎಂದು ಮೂಲಗಳು ಹೇಳಿವೆ.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಬಹುತೇಕವಾಗಿ ಮೇ 3ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಅವಕಾಶ ಪಡೆದು ಸಚಿವ ಸಂಪುಟ ವಿಸ್ತರಣೆ ಕುರಿತು ರ್ಚಚಿಸಲಾಗು ವುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಲಾಗುವುದು.

    | ಬಸವರಾಜ ಬೊಮ್ಮಾಯಿ ಸಿಎಂ

    150 ಕ್ಷೇತ್ರ ಗೆಲ್ಲುವ ಗುರಿ

    ಶಿವಮೊಗ್ಗ: ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಮತ್ತು ಅವರು ರೂಪಿಸಿರುವ ಯೋಜನೆಗಳು ಪ್ರತಿ ಮನೆ ಮತ್ತು ಕುಟುಂಬಗಳಿಗೂ ಸಿಕ್ಕಿವೆ. ಈ ಸಾಧನೆ ಆಧಾರದ ಮೇಲೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದರು.

    ಕೇಂದ್ರ ಸಚಿವ ಅಮಿತ್ ಷಾ ಅವರು ಮೇ 2ರಂದು ಬೆಂಗಳೂರಿಗೆ ಬರುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ರ್ಚಚಿಸುವರು.

    | ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

    ವರಿಷ್ಠರ ಗಮನ ಸೆಳೆದಿರುವೆ: ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ಸಚಿವ ಸಂಪುಟದಲ್ಲಿ ಖಾಲಿಯಿರುವ ಐದು ಸ್ಥಾನಗಳನ್ನು ಭರ್ತಿ ಮಾಡಿ, ಒಂದು ವರ್ಷದಮಟ್ಟಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎನ್ನುವ ಆಕಾಂಕ್ಷಿಗಳು, ಹಲವು ಶಾಸಕರು ಹಾಗೂ ಮುಖಂಡರ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತಂದಿರುವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಖಾಸಗಿ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ಶನಿವಾರ ನಡೆಯಲಿರುವ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಾಧೀಶರ ಸಭೆ, ಅಂದೇ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ಏರ್ಪಡಿಸಿರುವ ಔತಣಕೂಟದಲ್ಲಿ ಭಾಗವಹಿಸಿ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸುವೆ. ಪಕ್ಷದ ವರಿಷ್ಠರ ಅಥವಾ ಕೇಂದ್ರ ಸಚಿವರನ್ನು ಭೇಟಿಯಾಗುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts