More

    ಅಕ್ಷರ ಸಂತ ಹಾಜಬ್ಬನಂತೆ ಇಲ್ಲೊಬ್ಬ ಆರೋಗ್ಯ ಸಂತ: ತಂಗಿಯ ನೆನಪಲ್ಲಿ ಕಟ್ಟಿದ ಆಸ್ಪತ್ರೆಯನ್ನು ಕ್ವಾರಂಟೈನ್​ ಬಳಕೆಗೆ ನೀಡಿದ ಕ್ಯಾಬ್​ ಡ್ರೈವರ್​

    ಕೋಲ್ಕತ್ತ: ದಕ್ಷಿಣಕನ್ನಡದ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಜೀವನವನ್ನೇ ಹೋಲುವ ಕತೆಯಿದು. ಇಲ್ಲಿ ಹಾಜಬ್ಬ ಕಿತ್ತಳೆ ಹಣ್ಣು ಮಾರಿ ಮಕ್ಕಳಿಗಾಗಿ ಶಾಲೆ ಕಟ್ಟಿಸಿದರೆ, ಅಲ್ಲಿ ಕೋಲ್ಕತ್ತ ಸಮೀಪ ಮಡಿದ ತಂಗಿಯ ನೆನಪಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನೇ ಕಟ್ಟಿಸಿದ್ದಾರೆ ಮೊಹಮ್ಮದ್​ ಸೈದುಲ್​ ಲಸ್ಕರ್​. ಇದಿಷ್ಟೇ ಅಲ್ಲ, ಪ್ರಸ್ತುತ ಇದನ್ನು ಕೋವಿಡ್​- 19 ರೋಗಿಗಳ ಚಿಕಿತ್ಸೆ ಹಾಗೂ ಕ್ವಾರಂಟೈನ್​ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಮೊಹಮ್ಮದ್​ ಸೈದುಲ್​ ಲಸ್ಕರ್​ ಸಹೋದರಿ ಮರುಫಾ 2004ರಲ್ಲಿ ಮೃತಪಟ್ಟಿದ್ದಾರೆ. ಅವರ ನೆನಪಲ್ಲಿ ಲಸ್ಕರ್​ ಕೆಲ ವರ್ಷಗಳ ಹಿಂದೆ ಕೋಲ್ಕತ್ತದ ದಕ್ಷಿಣ ಭಾಗದಲ್ಲಿರುವ ಪೂರ್ಣಿ ಹಳ್ಳಿಯಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದಾರೆ. ಇದಕ್ಕೆ ಮರುಫಾ ಸ್ಮಾರಕ ಆಸ್ಪತ್ರೆ ಎಂದೇ ಹೆಸರಿಟ್ಟಿದ್ದಾರೆ. ಪ್ರಸ್ತುತ ನಿತ್ಯ 300ಕ್ಕೂ ಅಧಿಕ ಜನರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿಯೂ ಕರೊನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಆಸ್ಪತ್ರೆಯನ್ನು ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಅಥವಾ ಶಂಕಿತರ ಕ್ವಾರಂಟೈನ್​ಗಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅವರ ಪ್ರತಿಕ್ರಿಯೆ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ಆಸ್ಪತ್ರೆ ಕಟ್ಟಿಸಲು ಲಸ್ಕರ್​ ತಮ್ಮಲ್ಲಿದ್ದ ನಾಲ್ಕು ಟ್ಯಾಕ್ಸಿಗಳನ್ನು ಮಾರಿದ್ದಾರೆ. ಜತೆಗೆ, ಹೆಂತಿಯ ಚಿನ್ನಾಭರಣಗಳನ್ನು ಮಾರಿ ಬಂದ ದುಡ್ಡನ್ನು ಇದಕ್ಕೆ ವಿನಿಯೋಗಿಸಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕಾಗಿ ದುಡ್ಡು ಉಳಿಸಲು ನಾನು ಹಾಗೂ ನನ್ನ ಪತ್ನಿ ಕೇವಲ ಮಂಡಕ್ಕಿ ತಿಂದು ಕಳೆದ ದಿನಗಳು ಇವೆ. ಒಂದೊಂದೇ ಇಟ್ಟಿಗೆಯಾಗಿ ಕಟ್ಟಡ ಮೇಲೇಳುವುದನ್ನು ನಾವು ಗಮನಿಸಿದ್ದೇವೆ ಎಂದು ಲಸ್ಕರ್​ ನೆನಪಿಸಿಕೊಳ್ಳುತ್ತಾರೆ.

    ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲು ಬೇಕಾದ ಹಣ ಹೊಂದಿಸುವಲ್ಲಿ ಲಸ್ಕರ್​ ನಿರತರಾಗಿದ್ದಾರೆ. ಆದರೆ, ಸದ್ಯ ಕರೊನಾ ವ್ಯಾಪಿಸುತ್ತಿರುವುದರಿಂದ ಈ ಕಾರ್ಯಕ್ಕೆ ಕೊಂಚ ವಿರಾಮ ನೀಡಿದ್ದಾರೆ.

    ಕರೊನಾ ವಿರುದ್ಧ ಹೋರಾಡಲು ಪಿಎಂ ಕೇರ್ಸ್​ ನಿಧಿಗೆ ಲಸ್ಕರ್​ ಐದು ಸಾವಿರ ರೂ. ದೇಣಿಗೆ ನೀಡಿದ್ದಾರೆ. ಜತೆಗೆ, ಆಸ್ಪತ್ರೆಯಲ್ಲಿರುವ 10 ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕರೊನಾ ಪೀಡಿತರ ಆರೈಕೆಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಶಾಲೆಗಳ ಮರು ಆರಂಭ ಆಗಸ್ಟ್​ಗೆ?: ಎರಡು ತಿಂಗಳು ಮುಂದೂಡಲು ಆಡಳಿತ ಮಂಡಳಿಗಳ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts