ಬೆಳ್ವೆ: ಬೈಂದೂರು -ವಿರಾಜಪೇಟೆ ರಾಜ್ಯ ಹೆದ್ದಾರಿಯ ಬೆಳ್ವೆಯಲ್ಲಿ ಕೆಲವು ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಎರಡೂ ಕಡೆ ಭಾರಿ ಪ್ರಮಾಣದಲ್ಲಿ ದೂಳು ಮಣ್ಣು ಹರಡಿದೆ. ಈ ನಡುವೆ ಡಾಂಬರು, ಜಲ್ಲಿ, ಚೆಲ್ಲ್ಲಾಪಿಲ್ಲಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಡಾಂಬರು ರಸ್ತೆ ಅಗೆದು ಎರಡೂ ಕಡೆ ಮಣ್ಣು ರಾಶಿ ಹಾಕಲಾಗಿದೆ. ಇದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ಶೃಂಗೇರಿ, ಧರ್ಮಸ್ಥಳ, ಶಬರಿಮಲೆ ಮೊದಲಾದ ಕಡೆ ತೆರಳುವ ಭಕ್ತರ ವಾಹನಗಳು ಈ ರಸ್ತೆಯಲ್ಲೇ ನಿತ್ಯ ಸಂಚರಿಸುತ್ತವೆ. ರಸ್ತೆ ಸಮಸ್ಯೆಯಿಂದ ವಾಹನ ಅಪಘಾತಗಳೂ ಸಂಭವಿಸಿವೆ. ಕೆಲವು ದಿನಗಳಿಂದ ಪರಿಸರದಲ್ಲಿ ಧೂಳು ಹಬ್ಬಿ ಜನ ಬೇಸತ್ತಿದ್ದಾರೆ. ಕೆಲವರಿಗೆ ಆರೋಗ್ಯ ಸಮಸ್ಯೆಯೂ ಕಾಡಲಾರಂಭಿಸಿದೆ. ಗುತ್ತಿಗೆದಾರರು ಇಲ್ಲಿನ ರಸ್ತೆ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವಂತೆ ಇಲ್ಲಿನ ಜನತೆ ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿ ಬೆಳ್ವೆಯಲ್ಲಿ ರಸ್ತೆ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಗುತ್ತಿಗೆದಾರರಿಗೆ ಮಾಹಿತಿ ನೀಡುತ್ತೇನೆ. ಇಲ್ಲಿನ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಲಾಗುವುದು.
ಹರ್ಷವರ್ಧನ, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ