More

    ಬೈಂದೂರಿಗೆ ಬೇಕು ತಾಲೂಕು ಆಸ್ಪತ್ರೆ

    ನರಸಿಂಹ ನಾಯಕ್ ಬೈಂದೂರು
    ಬೈಂದೂರು ತಾಲೂಕು ಘೋಷಣೆಯಾದ ಬಳಿಕ ಹಂತಹಂತವಾಗಿ ಒಂದೊಂದೇ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಇದರ ನಡುವೆ ಬೈಂದೂರಿನ ಜನರಿಗೆ ಬಹು ಅವಶ್ಯವಾದ ತಾಲೂಕು ಆಸ್ಪತ್ರೆಗೆ ಶೀಘ್ರ ಮಂಜೂರಾತಿ ದೊರೆಯಬೇಕಿದೆ.
    ಬೈಂದೂರು ತಾಲೂಕು ಗ್ರಾಮೀಣ ಭಾಗವಾದ ಮಲೆನಾಡು ಹಾಗೂ ಕರಾವಳಿ ಪ್ರದೇಶವನ್ನು ಒಳಗೊಂಡಿದ್ದು, ಪ್ರತಿದಿನ ಸರಾಸರಿ 200ಕ್ಕೂ ಅಧಿಕ ಜನ ಹೊರರೋಗಿಗಳಾಗಿ ಚಿಕಿತ್ಸೆಗೆ ಬೈಂದೂರು ಸಮುದಾಯ ಆಸ್ಪತ್ರೆಗೆ ಬರುತ್ತಾರೆ. ಅಪಘಾತ, ಆಕಸ್ಮಿಕ ಘಟನೆಯಾದಾಗ ಈ ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದ ಚಿಕಿತ್ಸೆ ಕೊಡಲು ಸಾಧ್ಯವಿಲ್ಲದಿರುವುದರಿಂದ 40 ಕಿ.ಮೀ. ದೂರದ ಕುಂದಾಪುರಕ್ಕೆ ತೆರಳಬೇಕು. ಬೈಂದೂರು ಸಾಮಾನ್ಯ ಜ್ವರ, ತಲೆನೋವಿಗಷ್ಟೆ ಚಿಕಿತ್ಸೆ ಕೊಡಲು ಮೀಸಲಾಗಿದೆ. ಈಗಿರುವ ಆಸ್ಪತ್ರೆಯಲ್ಲಿ 30 ಹಾಸಿಗೆಯ ಒಳರೋಗಿ ವಿಭಾಗ ಇದೆ. ಆರೋಗ್ಯ ಕೇಂದ್ರದಲ್ಲಿ ಓರ್ವ ಮಹಿಳಾ ತಜ್ಞರು, ಹೆರಿಗೆ ವಿಭಾಗ, ಮಕ್ಕಳ ತಜ್ಞರು ಸೇರಿದಂತೆ 15ಕ್ಕೂ ಹೆಚ್ಚು ವೈದ್ಯರ ಅವಶ್ಯಕತೆಯಿದೆ. ತಜ್ಞ ವೈದ್ಯರು, ಗ್ರೂಪ್ ಡಿ ನೌಕರರು, ಅಸಾಂಕ್ರಾಮಿಕ ರೋಗ ತಪಾಸಣೆ, ಹಿರಿಯ ಆರೋಗ್ಯ ಸಹಾಯಕರು ಮುಂತಾದ ಹುದ್ದೆಗಳು ಇನ್ನೂ ಖಾಲಿ ಇವೆ.

    24 ಗಂಟೆ ಸೇವೆಗಾಗಿ ಅಗತ್ಯ: ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಮುಖ್ಯವಾಗಿ ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ವಿಭಾಗದ ತಜ್ಞ ವೈದ್ಯರು, ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಎ.ಆರ್.ಟಿ ಸೆಂಟರ್, ಎನ್.ಸಿ.ಡಿ ವಿಭಾಗ, ತೀವ್ರತರ ತೂಕ ಕಡಿಮೆ ಇರುವ ಮಕ್ಕಳ ಚಿಕಿತ್ಸಾ ಕೇಂದ್ರ, ನೇತ್ರತಜ್ಞ, ಶಸ್ತ್ರಚಿಕಿತ್ಸಾ ಕೊಠಡಿ (ಒಟಿ), ಇಎನ್‌ಟಿ ವೈದ್ಯರು, ಅಂಗವಿಕಲರಿಗೆ ಸರ್ಟಿಫಿಕೆಟ್ ನೀಡುವ ಮೆಡಿಕಲ್ ಬೋರ್ಡ್, ಸ್ಕ್ಯಾನಿಂಗ್, ಹೈಟೆಕ್ ಲ್ಯಾಬ್‌ಗಳು, ದಿನದ 24 ಗಂಟೆ ದೊರೆಯುವ ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ದೊರೆಯುತ್ತವೆ.
    ಬೈಂದೂರು ವ್ಯಾಪ್ತಿಯ ಹಳ್ಳಿಹೊಳೆ, ಆಲೂರು, ಶಿರೂರು, ನಾಡ, ಕಿರಿಮಂಜೇಶ್ವರ, ಮರವಂತೆ, ಖಂಬದಕೋಣೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಬಹುತೇಕ ಕೇಂದ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಿದೆ. ವೈದ್ಯರು, ಸಿಬ್ಬಂದಿ ಹಾಗೂ ಔಷಧಗಳ ಮತ್ತು ಸೇವೆಯ ಕೊರತೆ ಎದ್ದು ಕಾಣುತ್ತಿದೆ. ಶಿರೂರಿನಂಥ ದೊಡ್ಡ ಗ್ರಾಮದಲ್ಲಿ ವಾರಕ್ಕೊಮ್ಮೆ ಮಾತ್ರ ರಕ್ತ ಪರೀಕ್ಷೆಗೆ ಬೈಂದೂರಿನಿಂದ ಸಿಬ್ಬಂದಿ ಬರಬೇಕಾಗಿದೆ. ವಾರದ ಉಳಿದ ದಿನಗಳಲ್ಲಿ ಗರ್ಭಿಣಿಯರು ರಕ್ತ ತಪಾಸಣೆ ಮಾಡಬೇಕಾದರೆ ಖಾಸಗಿ ಕೇಂದ್ರಗಳಿಗೆ ತೆರಳಬೇಕಿದೆ. ಇರುವ ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಮತ್ತು ಕಟ್ಟಡ ಸಮಸ್ಯೆಗಳಿವೆ. ಹೀಗಾಗಿ ಬೈಂದೂರು ತಾಲೂಕು ಆಸ್ಪತ್ರೆಯಾಗುವುದು ಅನಿವಾರ್ಯ ಹಾಗೂ ಅತ್ಯವಶ್ಯಕ. ತಾಲೂಕು ಆಸ್ಪತ್ರೆ ಶೀಘ್ರ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಲು ಶಾಸಕರು ಹಾಗೂ ಸಂಸದರು ಪ್ರಯತ್ನಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

    ಬೈಂದೂರು ತಾಲೂಕು ಆಸ್ಪತ್ರೆಗೆ ಎರಡೂವರೆ ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ನೀಡಿದ್ದು, ಇಲಾಖೆಯಿಂದ ಬೇಕಿರುವ ಎಲ್ಲ ವರದಿಗಳನ್ನು ಕಳುಹಿಸಲಾಗಿದೆ. ಮಂಜೂರಾತಿ ಮಾತ್ರ ಬಾಕಿ ಇದೆ. ತಾಲೂಕು ಆಸ್ಪತ್ರೆಯಾದಾಗ ಇನ್ನಷ್ಟು ಸೇವೆ ಸಾರ್ವಜನಿಕರಿಗೆ ದೊರಕಿಸಿಕೊಡಲು ಸಾಧ್ಯವಾಗುತ್ತದೆ.
    -ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ ಕುಂದಾಪುರ

    ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮಿನಿ ವಿಧಾನಸೌಧ, ಅಗ್ನಿಶಾಮಕ ದಳ ಸೇರಿದಂತೆ ಬಹುತೇಕ ಅವಶ್ಯಕ ಯೋಜನೆಗಳು ಮಂಜೂರಾಗಿವೆ. ತಾಲೂಕು ಆಸ್ಪತ್ರೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಅಂತಿಮ ಹಂತದಲ್ಲಿದೆ. ಸಂಸದರ ಪ್ರಯತ್ನ ಹಾಗೂ ಮುಖ್ಯಮಂತ್ರಿ ಸಹಕಾರದಿಂದ ಆದಷ್ಟು ಶೀಘ್ರ ತಾಲೂಕು ಆಸ್ಪತ್ರೆ ಅಧೀಕೃತ ಮಂಜೂರಾತಿ ದೊರೆಯಲಿದೆ.
    -ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು

    ಬೈಂದೂರು ಆಸ್ಪತ್ರೆಯಲ್ಲಿ ಪ್ರತಿದಿನ 200ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸಮುದಾಯ ಆರೋಗ್ಯ ಕೇಂದ್ರದ ವ್ಯವಸ್ಥೆಯಲ್ಲಿ ಸಮರ್ಪಕ ಸೇವೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಇನ್ನಷ್ಟು ಸೇವೆ ಇಲ್ಲಿನ ಜನರಿಗೆ ದೊರೆಯಲಿದೆ.
    -ಡಾ.ಪ್ರೇಮಾನಂದ, ತಾಲೂಕು ಆಡಳಿತ ವೈದ್ಯಾಧಿಕಾರಿ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts