More

    ಬೈಂದೂರಿನಲ್ಲಿ ಕಿರು ವಿಮಾನ ನಿಲ್ದಾಣ, ಉಡಾನ್ ಮೂಲಕ ಬಹುನಿರೀಕ್ಷಿತ ಯೋಜನೆ ಸಾಕಾರ ನಿರೀಕ್ಷೆ

    ನರಸಿಂಹ ನಾಯಕ್, ಬೈಂದೂರು

    ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಅನೇಕ ವರ್ಷಗಳ ಕನಸು ನನಸಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕೊಲ್ಲೂರಿಗೆ ಸನಿಹದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.

    2004ರಲ್ಲಿ ಬಿ.ಎಂ.ಸುಕುಮಾರ ಶೆಟ್ಟಿ (ಹಾಲಿ ಶಾಸಕರು) ಕೊಲ್ಲೂರು ದೇವಸ್ಥಾನದ ಟ್ರಸ್ಟಿಯಾಗಿದ್ದಾಗ ಉದ್ಯಮಿ ದಿ.ಆರ್.ಎನ್. ಶೆಟ್ಟಿ ಸಂಸ್ಥೆ ಸಹಭಾಗಿತ್ವದಲ್ಲಿ ವತ್ತಿನೆಣೆಯಲ್ಲಿ ಏರ್‌ಸ್ಕ್ರಿಪ್ಟ್ ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಮತ್ತು ಸಮ್ಮತಿ ದೊರೆಯದ ಕಾರಣ ಯೋಜನೆ ಮೂಲೆಗುಂಪಾಗಿತ್ತು. ಬಳಿಕ ವಿವಿಧ ಸಂಘಟನೆಗಳು ಸರ್ಕಾರಕ್ಕೆ ನಿರಂತರ ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ.
    ಈ ಬಾರಿ ಸಂಸದ ಬಿ.ವೈ.ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿ ಉಡಾನ್ ಯೋಜನೆಯಲ್ಲಿ ಬೈಂದೂರಿಗೆ ಕಿರು ವಿಮಾನ ನಿಲ್ದಾಣ ಆರಂಭಿಸಲು ಜಾಗ ಕಾದಿರಿಸಿ ವರದಿ ನೀಡುವ ಕುರಿತು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮತ್ತು ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಸ್ಪಂದಿಸಿದ ಕೆಎಸ್‌ಎಲ್‌ಎಲ್‌ಡಿಸಿ, ಕಿರು ವಿಮಾನ ನಿಲ್ದಾಣಕ್ಕೆ ಲಭ್ಯ ಸರ್ಕಾರಿ ಭೂಮಿ, ಹವಾಮಾನ ದಾಖಲೆ, ನಕ್ಷೆ, ಭೂ ದಾಖಲೆ ವರದಿ ಕೇಳಿದೆ.
    ಪ್ರಸ್ತುತ ಬೈಂದೂರು ವತ್ತಿನೆಣೆ ಮತ್ತು ಗೋಳಿಹೊಳೆ ಗ್ರಾಮದ ಅರೆಶಿರೂರು ಎಂಬಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಸ್ಥಳ ಗುರುತಿಸಲಾಗಿದೆ. ಅರೆಶಿರೂರಿನಲ್ಲಿ ಸ.ನಂ 60ರಲ್ಲಿ 182.01 ಎಕರೆ ಸರ್ಕಾರಿ ಸ್ಥಳ ಇದೆ. ಅರಣ್ಯ ಇಲಾಖೆ ಸಮಸ್ಯೆ ಈ ಬಾರಿ ಎದುರಾಗುವ ಸಾಧ್ಯತೆಯಿಲ್ಲ. ಏಕೆಂದರೆ ಸಂಸದರ ತಂಡ ಅರಣ್ಯ ಇಲಾಖೆಗೆ ಪರ್ಯಾಯ ಜಾಗವಾಗಿ ಐನೂರು ಎಕರೆ ಸ್ಥಳವನ್ನು ಗುರುತಿಸಿದೆ. ಹೀಗಾಗಿ ಇಲಾಖೆ ಸಮ್ಮತಿಸಿ ತಾಂತ್ರಿಕ ಅಂಶಗಳು ಕೂಡಿಬಂದರೆ ಬೈಂದೂರಿನ ಕಿರು ವಿಮಾನ ನಿಲ್ದಾಣ ನಿರ್ಮಾಣ ಆರಂಭಗೊಳ್ಳಲಿದೆ.

    ಸಂಸದರು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ನೀಡಿ ಕ್ಷಿಪ್ರ ಕಾಮಗಾರಿ ನಡೆಸುವ ಸಿದ್ಧತೆ ನಡೆಸುತ್ತಿದ್ದಾರೆ. 2024ರೊಳಗೆ ಪ್ರಧಾನಿ ಮೋದಿಯವರನ್ನು ಬೈಂದೂರು ಕ್ಷೇತ್ರಕ್ಕೆ ಕರೆತರುವ ಕನಸನ್ನು ಸಂಸದರು ಹೊಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಧಾನಿಯವರಿಂದಲೇ ನಿಲ್ದಾಣಕ್ಕೆ ಗುದ್ದಲಿಪೂಜೆ ನಡೆಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಬಹುನಿರೀಕ್ಷಿತ ಕನಸು ಸಾಕಾರಗೊಳ್ಳುವ ಹಂತದಲ್ಲಿ ಜನಪ್ರತಿನಿಧಿಗಳು, ಇಲಾಖೆ ಹಾಗೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕಾಗಿದೆ.

    ಪ್ರವಾಸಿ ಸ್ಥಳಗಳಿಗೆ ಹೆಚ್ಚಲಿದೆ ಬೇಡಿಕೆ
    ಸಾಮಾನ್ಯ ನಾಗರಿಕನೂ ವಿಮಾನಯಾನದ ಅವಕಾಶವನ್ನು ಅನುಭವಿಸಬೇಕು ಎನ್ನುವ ಉದ್ದೇಶದಿಂದ ಪ್ರತೀ 100ರಿಂದ 150 ಕಿ.ಮೀ.ಅಂತರದಲ್ಲಿ ದೇಶದಲ್ಲಿ 150ಕ್ಕೂ ಹೆಚ್ಚು ಉಡಾನ್ ಕಿರು ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿವೆ. ಇದರಲ್ಲಿ ಎಟಿಆರ್-72 ಸೀಟ್‌ಗಳ ಸಾಮರ್ಥ್ಯದ ವಿಮಾನಗಳು ಮಾತ್ರ ಇಳಿಯಬಲ್ಲವು. ಪ್ರಯಾಣ ಅವಧಿ ಒಂದುವರೆ ಗಂಟೆ ಮಾತ್ರ. ಎರಡುವರೆ ಸಾವಿರಕ್ಕೂ ಹೆಚ್ಚು ದರ ನಿಗದಿಪಡಿಸುವಂತಿಲ್ಲ. ಬೈಂದೂರಿನಲ್ಲಿ ಆರಂಭವಾದರೆ ತಮಿಳುನಾಡು ಮತ್ತು ಕೇರಳದಿಂದ ಕೊಲ್ಲೂರಿನಿಂದ ಬರುವ ಯಾತ್ರಿಕರಿಗೆ ಅನುಕೂಲ. ಮುಂಬೈ, ಬೆಂಗಳೂರು, ಚೆನ್ನೈಗೆ ತೆರಳುವ ಪ್ರಯಾಣಿಕರು ಇದರ ಲಾಭ ಪಡೆಯಬಹುದು. ಶಿರೂರು, ಭಟ್ಕಳ, ಮುರ್ಡೇಶ್ವರ, ಮರವಂತೆ ಮುಂತಾದ ಪ್ರವಾಸಿ ಸ್ಥಳ ಹಾಗೂ ವಿದೇಶಕ್ಕೂ ಸಂಪರ್ಕ ಬೆಳೆಸಲು ಈ ನಿಲ್ದಾಣ ಕೊಂಡಿಯಾಗಲಿದೆ. ನಿಲ್ದಾಣದ ಕಾಮಗಾರಿ ಗರಿಷ್ಠ 20 ಕೋಟಿಯಿಂದ 30 ಕೋಟಿ ರೂ.ಅನುದಾನ ಅಗತ್ಯ. ಯೋಜನೆ ಸಾಕಾರಗೊಂಡರೆ ಬೈಂದೂರು ಕ್ಷೇತ್ರ ಮತ್ತು ಇಲ್ಲಿನ ಪ್ರವಾಸಿ ಸ್ಥಳಗಳಿಗೆ ಬಹಳಷ್ಟು ಬೇಡಿಕೆ ಬರಲಿದೆ.

    ಪರಿಸ್ಥಿತಿ ಬದಲಾಗುತ್ತಿದೆ
    ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಬೈಂದೂರಿನಲ್ಲಿ ನಾಗರಿಕ ಕಿರು ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಇತ್ತೀಚೆಗೆ ಹೇಳಿದ್ದರು. ಉತ್ತಮ ಸಂಪರ್ಕ ವ್ಯವಸ್ಥೆಗಳಿಲ್ಲದಿದ್ದರೆ ಉದ್ಯಮ ಕ್ಷೇತ್ರ ಬೆಳೆಯದು. ಕಲ್ಯಾಣ ಕರ್ನಾಟಕಕ್ಕೆ ಹಿಂದೆ ವಿಮಾನ ಸಂಪರ್ಕ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗುತ್ತಿದೆ ಎಂದವರು ಅಭಿಪ್ರಾಯಪಟ್ಟಿದ್ದರು.

    ಬೈಂದೂರಿನಲ್ಲಿ ವಿಮಾನ ನಿಲ್ದಾಣವಾದರೆ, ಬ್ರಹ್ಮಾವರದಿಂದ ಹೊನ್ನಾವರವರೆಗಿನ ಜನರಿಗೆ ಉಪಕಾರವಾಗಲಿದೆ. ಕೊಲ್ಲೂರು ಮತ್ತು ಮುರ್ಡೇಶ್ವರ ಕ್ಷೇತ್ರವೂ ಈ ವ್ಯಾಪ್ತಿಯಲ್ಲಿ ಇರುವುದರಿಂದ ಯಾತ್ರಿಕರಿಗೂ ಅನುಕೂಲ. ಈ ಭಾಗದವರಾಗಿದ್ದು ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಹಲವರಿಗೂ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಪ್ರಸ್ತುತ ಎಲ್ಲರೂ ವಿಮಾನ ಯಾನಕ್ಕೆ 140 ಕಿ.ಮೀ. ದೂರದ ಮಂಗಳೂರನ್ನೇ ಆಶ್ರಯಿಸಬೇಕಾಗಿದೆ.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts