More

    ಗೈರಾದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ?

    ಬ್ಯಾಡಗಿ: ತಾಪಂ ಸಾಮಾನ್ಯ ಸಭೆಗಳಿಗೆ ಅಧಿಕಾರಿಗಳ ಗೈರು, ತಡವಾಗಿ ಬರುವುದು, ಅನುಪಾಲನಾ ವರದಿ ನೀಡದಿರುವ ಕುರಿತು ಕೈಗೊಂಡ ಕ್ರಮದ ಮಾಹಿತಿ ನೀಡುವಂತೆ ವ್ಯವಸ್ಥಾಪಕರಿಗೆ ಅಧ್ಯಕ್ಷೆ ಸವಿತಾ ಸುತ್ತಕೋಟಿ ತಾಕೀತು ಮಾಡಿದರು.

    ಪಟ್ಟಣದ ತಾ.ಪಂ.ನ ಸುವರ್ಣಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2 ವರ್ಷಗಳಿಂದ ಬಹುತೇಕ ಸಭೆಗಳಿಗೆ ಅಧಿಕಾರಿಗಳು ಗೈರು, ತಡವಾಗಿ ಬರುವುದು, ಅನುಪಾಲನೆ ವರದಿ ನೀಡದಿರುವುದು ಸೇರಿ ಕೆಲ ತಪ್ಪುಗಳು ನಡೆದಾಗ ನೋಟಿಸ್ ನೀಡುವಂತೆ ಸೂಚನೆ ನೀಡಲಾಗಿತ್ತು. ಈವರೆಗೂ ಎಷ್ಟು ಅಧಿಕಾರಿಗಳಿಗೆ ನೋಟಿಸ್ ನೀಡಿ, ಉತ್ತರ ಪಡೆದಿದ್ದೀರಿ. ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಕುರಿತು ಮಾಹಿತಿ ಒದಗಿಸಿ ಎಂದು ಸೂಚಿಸಿದರು.

    ವ್ಯವಸ್ಥಾಪಕ ಪ್ರಕಾಶ ಹಿರೇಮಠ, 2 ವರ್ಷದಿಂದ ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ನೀಡಿದರೂ ಉತ್ತರಿಸುತ್ತಿಲ್ಲ ಎಂದರು. ಇದಕ್ಕೆ ಗರಂ ಆದ ಅಧ್ಯಕ್ಷೆ ಕೂಡಲೆ ಜಿಲ್ಲಾಧಿಕಾರಿ, ಆಯುಕ್ತರಿಗೆ ಹಾಗೂ ಜಿಲ್ಲಾ ಮಟ್ಟದ ಆಯಾ ಅಧಿಕಾರಿಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಠರಾವು ಮಾಡಿ, ಪತ್ರ ಕಳುಹಿಸಿ ಎಂದರು.

    ಸ್ಥಾಯಿ ಸಮಿತಿ ಚೇರ್ಮನ್ ಯಲ್ಲನಗೌಡ್ರ ಕರೆಗೌಡ್ರ ಮಾತನಾಡಿ, ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ 112 ಮನೆಗಳು ಬ್ಲಾಕ್ ಆಗಿವೆ. ಅಡಿಪಾಯ ಹಾಕಿ ವರ್ಷ ಕಳೆದಿದೆ. ಹೀಗಾದರೆ ಮುಂದೆ ಬಡವರ ಗತಿಯೇನು. ನ್ಯಾಯ ಕೊಡುವರು ಯಾರು. ಎರಡು ತಿಂಗಳ ಹಿಂದೆ ಶಾಸಕರು ಪಟ್ಟಿ ಕೇಳಿದರೂ ಅಧಿಕಾರಿಗಳು ನೀಡುತ್ತಿಲ್ಲ ಎಂದು ಪಿಡಿಒಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದರು.

    ಪ್ರತಿಕ್ರಿಯಿಸಿದ ಇಒ ಅಬೀದ್ ಗದ್ಯಾಳ, ನಿಗದಿತ ಸಮಯದೊಳಗೆ ಅಫ್​ಲೋಡ್ ಮಾಡದಿರುವ ಅಧಿಕಾರಿಗಳಿಂದ ಬಡವರು ಗೋಳಾಡುವಂತಾಗಿದೆ. ತಪ್ಪಿತಸ್ಥರಿಗೆ ತಕ್ಷಣ ನೋಟಿಸ್ ನೀಡಿ ಎಂದು ವ್ಯವಸ್ಥಾಪಕರಿಗೆ ತಿಳಿಸಿದರು.

    ಕೆರೂಡಿ, ತಿಪಲಾಪುರ, ಕಳಗೊಂಡ ಗ್ರಾಮಗಳಿಗೆ ಸಂಬಂಧಿಸಿದಂತೆ ಹೆಸ್ಕಾಂ ಲೈನ್​ವುನ್ ಲಭ್ಯವಿಲ್ಲ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿದ್ದು, ಕೇಳುವವರೇ ಇಲ್ಲದಂತಾಗಿದೆ. ಗ್ರಾಮ ಪಂಚಾಯಿತಿ ಸಭೆಗೆ ಕರೆಸಿದರೂ ಹೆಸ್ಕಾಂ ಅಧಿಕಾರಿಗಳು ಬರುತ್ತಿಲ್ಲ. ಹೀಗಾದ್ರೆ ಜನರ ಗೋಳು ಕೇಳೋರ್ಯಾರು ಎಂದು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಪಾಟೀಲ ಪ್ರಶ್ನಿಸಿದರು.

    ಹೆಸ್ಕಾಂ ಇಂಜಿನಿಯರ್ ಮಾಲತೇಶ ಹುಣಸಿಮರದ ಮಾತನಾಡಿ, ಶೀಘ್ರದಲ್ಲೇ ಲೈನ್​ವುನ್ ಹುದ್ದೆ ಭರ್ತಿಯಾಗಲಿದ್ದು, ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನಾಳೆಯೇ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

    ಸಭೆಯಲ್ಲಿ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಲೋಕೋಪಯೋಗಿ ಇಂಜಿನಿಯರ್ ಎನ್.ಎ. ದೊಡ್ಡಮನಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಟಿ. ವಿಜಯಲಕ್ಷ್ಮೀ, ಕೆಆರ್​ಐಡಿಎಲ್ ಇಂಜಿನಿಯರ್ ಎಂ.ಎ. ಮೈನುಕರ, ಶಿಶುಯೋಜನಾಧಿಕಾರಿ ರಾಮಲಿಂಗಪ್ಪ ಅರಳಗುಪ್ಪಿ, ರೇಷ್ಮೆ ವಿಸ್ತರ್ಣಾಧಿಕಾರಿ ಆರ್.ಎಂ. ಪೂಜಾರ, ಪಶುವೈದ್ಯಾಧಿಕಾರಿ ಎಂ. ಗೋಪಿನಾಥ ಇತರರಿದ್ದರು.

    ಹೆಕ್ಟೇರ್ ಜಮೀನಿದ್ದರಷ್ಟೇ ಸ್ಪಿಂಕ್ಲರ್ ಸೌಲಭ್ಯ!: ಶಾಂತಪ್ಪ ದೊಡ್ಡಮನಿ ಮಾತನಾಡಿ, ಹಿರೇಕೆರೂರು ತಾಲೂಕಿನಲ್ಲಿ 1 ಎಕರೆ, 1.5 ಎಕರೆ ಜಮೀನಿನ ರೈತರಿಗೆ ಸ್ಪಿಂಕ್ಲರ್ ನೀಡಲಾಗುತ್ತಿದೆ. ಬ್ಯಾಡಗಿಯಲ್ಲಿ ಕಡ್ಡಾಯವಾಗಿ ಹೆಕ್ಟೇರ್ ಜಮೀನು ಬೇಕು. ಗುಂಟೆ ಕಡಿಮೆಯಿದ್ದರೂ ಕೊಡಲ್ಲ ಎನ್ನುತ್ತಾರೆ. ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಜಮೀನು ಸಣ್ಣ ಹಿಡುವಳಿ ಆಗಿವೆ. ಇದರಿಂದ ಬಹುತೇಕ ರೈತರಿಗೆ ಅನ್ಯಾಯವಾಗುತ್ತಿದೆ. ಜಂಟಿ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಿ ಎಂದು ಕೃಷಿ ಸಹಾಯಕರಿಗೆ ತಿಳಿಸಿದರು. ಕೃಷಿ ಸಹಾಯಕ ನಿರ್ದೇಶಕ ಎಂ. ಗೌಡಪ್ಪಳವರ, ರಾಜ್ಯಕ್ಕೆ ಒಂದೇ ಕೃಷಿ ನೀತಿಯಿದ್ದು, ನಿಯಮ ಎಲ್ಲರೂ ಪಾಲಿಸಬೇಕಿದೆ. ಸಣ್ಣ ರೈತರ ಜಮೀನು ಎರಡು ಎಕರೆಗಿಂತ ಕಡಿಮೆಯಿದ್ದು, ನಮಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

    ಸಭೆಗೆ ಗೈರಾದ ಅಧಿಕಾರಿಗಳು: ಎಪಿಎಂಸಿ, ಅಬಕಾರಿ, ನಿರ್ವಿುತಿ ಕೇಂದ್ರ, ಅಲ್ಪಸಂಖ್ಯಾತ ವಿಸ್ತರ್ಣಾಧಿಕಾರಿ, ಆಹಾರ ಇಲಾಖಾಧಿಕಾರಿ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ, ಹೆಸ್ಕಾಂ, ಆರೋಗ್ಯಾಧಿಕಾರಿಗಳು ಗೈರಾಗಿದ್ದರು. ಕೆಲವರು ಸಹಾಯಕ ಅಧಿಕಾರಿಗಳನ್ನು ಕಳುಹಿಸಿದ್ದು, ಅವರಿಗೆ ಪೂರ್ಣ ಮಾಹಿತಿಯಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts