More

    ಬ್ಯಾಡಗಿ ಅಖಾಡದಲ್ಲಿ ಎಲೆಕ್ಷನ್ ಘಾಟು ಬಲುಜೋರು * ಹಾಲಿ- ಮಾಜಿಗಳ ಜಂಗಿ ಕುಸ್ತಿ *

    ಕೇಶವಮೂರ್ತಿ ವಿ.ಬಿ. ಹಾವೇರಿ

    ಮೆಣಸಿನಕಾಯಿ ಮಾರುಕಟ್ಟೆ ಮೂಲಕ ವಿಶ್ವವಿಖ್ಯಾತಿ ಹೊಂದಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಲೆಕ್ಷನ್ ಘಾಟು ಬಲು ಜೋರಾಗಿದೆ. ಈಗಾಗಲೇ ಚುನಾವಣಾ ಅಖಾಡಕ್ಕೆ ಧುಮುಕಿರುವ ಹಾಲಿ- ಮಾಜಿ ಶಾಸಕ, ಸಚಿವರು ಟಿಕೆಟ್‌ಗಾಗಿ ಭರ್ಜರಿ ತಾಲೀಮು ನಡೆಸಿದ್ದಾರೆ. ಕ್ಷೇತ್ರದಾದ್ಯಂತ ಚುನಾವಣೆಯ ರಣಕಹಳೆ ಮೊಳಗಿಸುತ್ತಿದ್ದಾರೆ. ‘ಹಾಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರಿಗೆ ಈಗಾಗಲೇ ಒಂದು ಬಾರಿ ಆಶೀರ್ವಾದ ಮಾಡಿದ್ದೀರಿ. ಇನ್ನೊಂದು ಬಾರಿ ಆಶೀರ್ವದಿಸಿ’ ಎಂದು ಬ್ಯಾಡಗಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘಂಟಾಘೋಷವಾಗಿ ಹೇಳಿದ್ದು, ಶಾಸಕರಿಗೆ ಆನೆಬಲ ಬಂದಂತಾಗಿದೆ. ಆದರೆ, ಇದಕ್ಕೆ ಮಾಜಿ ಶಾಸಕ, ಬಿಜೆಪಿ ಮುಖಂಡ ಸುರೇಶಗೌಡ್ರ ಪಾಟೀಲ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ತಾವು ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವುದಾಗಿ ಘೋಷಿಸಿದ್ದಾರೆ.
    ಹಾಲಿ ಶಾಸಕರು ಇದ್ದರೂ ಸಹ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಹಾಗಾಗಿ, ಬದಲಾವಣೆ ಮಾಡಿ ಎಂದು ಹಲವರು ಹೈಕಮಾಂಡ್‌ಗೆ ದುಂಬಾಲು ಬಿದ್ದಿದ್ದಾರೆ. ಶಾಸಕರ ಹಿರಿಯ ಸಹೋದರ ಸಿ.ಆರ್.ಬಳ್ಳಾರಿ ಅವರೂ ಕೂಡ ‘ತಮಗೆ ಟಿಕೆಟ್ ಕೊಡಿ. ಪ್ರತಿ ಸಲ ತ್ಯಾಗ ಮಾಡಲು ಆಗುವುದಿಲ್ಲ’ ಎಂದು ಸವಾಲು ಹಾಕಿದ್ದಾರೆ. ಉಳಿದಂತೆ ಮುರಿಗೆಪ್ಪ ಶೆಟ್ಟರ, ಎಂ.ಎಸ್.ಪಾಟೀಲ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎಲ್ಲೆಡೆ ಸಂಚರಿಸುತ್ತಿದ್ದಾರೆ.
    ಕಳೆದ ಬಾರಿ ವಿರುಪಾಕ್ಷಪ್ಪ ಬಳ್ಳಾರಿ ವಿರುದ್ಧ ಸೋಲು ಕಂಡಿರುವ ಉದ್ಯಮಿ, ಮಾಜಿ ಪುರಸಭೆ ಅಧ್ಯಕ್ಷ ಎಸ್.ಆರ್.ಪಾಟೀಲ ಈ ಬಾರಿ ಮತ್ತೆ ಟಿಕೆಟ್ ಪಡೆದು ಶಾಸಕ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಬಸವರಾಜ ಶಿವಣ್ಣವರ ಕೂಡ ಅವಿರತ ಪ್ರಯತ್ನ ನಡೆಸಿದ್ದಾರೆ. ಹೈಕಮಾಂಡ್ ಜತೆ ಉತ್ತಮ ನಂಟು ಹೊಂದಿರುವ ಇಬ್ಬರೂ ಮುಖಂಡರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಈ ಕುರಿತು ಈಗಾಗಲೇ ಹಲವು ಸುತ್ತಿನ ಸಮೀಕ್ಷೆ ನಡೆಸಿರುವ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕು ಎಂಬ ಕುರಿತು ಪರಿಶೀಲಿಸುತ್ತಿದೆ.
    ಬ್ಯಾಡಗಿ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಆಮ್ ಆದ್ಮಿ ಪಕ್ಷದ ಎಂ.ಎನ್.ನಾಯಕ ಕ್ಷೇತ್ರದ ತುಂಬ ಪ್ರಚಾರ ಪೊರಕೆ ಹಿಡಿದು ಓಡಾಡುತ್ತಿದ್ದಾರೆ. ಉಳಿದಂತೆ ಈ ಬಾರಿಯೂ ಬಿಜೆಪಿ- ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳು ಅದಲ್-ಬದಲ್ ಆದರೂ ಅಚ್ಚರಿ ಇಲ್ಲ.
    ಬಿಜೆಪಿ ಆಕಾಂಕ್ಷಿಗಳು
    ವಿರುಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ್ರ ಪಾಟೀಲ, ಮುರಿಗೆಪ್ಪ ಶೆಟ್ಟರ, ಎಂ.ಎಸ್.ಪಾಟೀಲ, ಸಿ.ಆರ್.ಬಳ್ಳಾರಿ,
    ಕಾಂಗ್ರೆಸ್ ಆಕಾಂಕ್ಷಿಗಳು
    ಬಸವರಾಜ ಶಿವಣ್ಣವರ, ಎಸ್.ಆರ್.ಪಾಟೀಲ, ಶಂಕರಗೌಡ್ರ ಪಾಟೀಲ, ದಾನಪ್ಪ ಚೂರಿ, ಪ್ರಕಾಶ ಬನ್ನಿಹಟ್ಟಿ. ಶಿವಪ್ಪ ಅಂಬಲಿ, ನಾಗರಾಜ ಆನ್ವೇರಿ, ಸುರೇಶಗೌಡ ಪಾಟೀಲ (ದಿಡಗೂರ)
    ಆಮ್ ಆದ್ಮಿ ಆಕಾಂಕ್ಷಿ
    ಎಂ.ಎನ್.ನಾಯಕ

    ವಿರುಪಾಕ್ಷಪ್ಪ ಬಳ್ಳಾರಿ ಪ್ಲಸ್

    ನೀರಾವರಿಗೆ ಆದ್ಯತೆ ನೀಡಿರುವುದು

    ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಟ್ಟಿರುವುದು

    ಸ್ವಂತ ಜಮೀನಿನಲ್ಲಿ ಕೆರೆ ನಿರ್ಮಾಣ, ಆಸ್ಪತ್ರೆಗೆ ಜಾಗ

    ವಿರುಪಾಕ್ಷಪ್ಪ ಬಳ್ಳಾರಿ ಮೈನಸ್

    ಕೆಲ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ

    ಕೆಲ ಹಳೇ ಕಾರ್ಯಕರ್ತರ ಕಡೆಗಣನೆ ಆರೋಪ

    ಸಹೋದರ ಸಿ.ಆರ್.ಬಳ್ಳಾರಿ ಟಿಕೆಟ್‌ಗಾಗಿ ಪೈಪೋಟಿ ನೀಡುತ್ತಿರುವುದು ಬಾಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts