More

    ನಿಗದಿತ ದರದಲ್ಲಿಯೇ ಬೀಜ, ಗೊಬ್ಬರ ಖರೀದಿಸಿ

    ಬ್ಯಾಡಗಿ: ರೈತರು ಗೊಬ್ಬರ, ಬೀಜಗಳ ಪ್ಯಾಕೆಟ್​ಗಳನ್ನು ನಿಗದಿತ (ಎಂಆರ್​ಪಿ) ದರದಲ್ಲಿ ಖರೀದಿಸಿ ಪಾವತಿ ಪಡೆಯಬೇಕು. ಮಾರಾಟ ಕೇಂದ್ರದವರು ಹೆಚ್ಚಿನ ದರ ಪಡೆದಲ್ಲಿ ರಸಗೊಬ್ಬರ ಆದೇಶ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ತಹಸೀಲ್ದಾರ್ ರವಿ ಕೊರವರ ತಿಳಿಸಿದರು.

    ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಬೀಜ, ಗೊಬ್ಬರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ಈಗ ದಾಸ್ತಾನಿರುವ ಗೊಬ್ಬರವನ್ನು ಹಳೆಯ ದರದಲ್ಲಿ ಮಾರಬೇಕು. ಮುಂಬರುವ ದಿನಗಳಲ್ಲಿ ಹೊಸ ದರದಂತೆ ವ್ಯಾಪಾರ ಮಾಡಬಹುದು ಎಂದರು.

    ಕೃಷಿ ಸಹಾಯಕ ನಿರ್ದೇಶಕ ಎ.ಡಿ. ವೀರಭದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಯೂರಿಯಾ ರಸಗೊಬ್ಬರ 5514 ಟನ್ ಬೇಡಿಕೆಯಿದ್ದು, ಸದ್ಯ 662 ಟನ್ ಲಭ್ಯವಿದೆ. ಡಿಎಪಿ 2023 ಟನ್ ಬೇಡಿಕೆಯಿದ್ದು, 642 ಟನ್ ಸಂಗ್ರಹವಿದೆ. ಅಲ್ಲದೆ, ಫೆಡರೇಷನ್​ನಿಂದ ಪ್ರತಿ ಸೊಸೈಟಿಗೆ 100 ಟನ್ ರಸಗೊಬ್ಬರ ಪೂರೈಸಲು ಪ್ರಸ್ತಾವನೆ ಕಳುಹಿಸಿದ್ದು, ಶೀಘ್ರದಲ್ಲಿ ಪೂರೈಕೆಯಾಗಲಿದೆ ಎಂದರು.

    ಸಚಿವರ ಮಾತಿಗೆ ಬೆಲೆಯಿಲ್ಲ: ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಕೃಷಿ ಸಚಿವ ಬಿ.ಸಿ. ಪಾಟೀಲ ಅಲರು ಹಳೆಯ ದರದಲ್ಲಿ ರಸಗೊಬ್ಬರ ಮಾರುವಂತೆ ಸೂಚಿಸಿದ್ದಾರೆ. ಆದರೆ, ಕೃಷಿ ಅಧಿಕಾರಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಡಿಎಪಿ 1200 ರೂಪಾಯಿ ಬದಲಾಗಿ, 1900 ರೂಪಾಯಿಗೆ ಹೆಚ್ಚಳವಾಗಿದೆ. ಯೂರಿಯಾ 268 ರೂಪಾಯಿ ಚೀಲದ ಮೇಲೆ ಎಂಆರ್​ಪಿ ದರವಿದ್ದರೂ 300-350 ರೂಪಾಯಿ ಪಡೆಯುತ್ತಿದ್ದಾರೆ. ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನೆಪಮಾತ್ರಕ್ಕೆ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಕಳೆದ ಬಾರಿ ಕಳಪೆ ಬೀಜ ಮಾರಾಟಗಾರರ ಮೇಲೆ ಏನು ಕ್ರಮವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಡಿಎಪಿ ಗೊಬ್ಬರಕ್ಕೆ ಒಂದೇ ವರ್ಷದಲ್ಲಿ 700 ರೂಪಾಯಿ ಹೆಚ್ಚಳವಾಗಿದೆ. ಆದರೆ, 10 ವರ್ಷಗಳಿಂದ ಗೋವಿನ ಜೋಳದ ಬೆಲೆ 100 ರೂಪಾಯಿ ಏರಿಲ್ಲ. ಹೀಗಾದ್ರೆ ರೈತಕುಲ ಉಳಿಯುವುದು ಹೇಗೆ? ಎಂದು ಪ್ರಶ್ನಿಸಿದರು.

    ದಾಸ್ತಾನು ನಾಮಫಲಕ ಹಾಕುತ್ತಿಲ್ಲ: ರೈತ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೀಜ, ಗೊಬ್ಬರ ಮಾರಾಟಗಾರರು ಅಂಗಡಿ ಮುಂದೆ ದಾಸ್ತಾನು ಪಟ್ಟಿ ಅಳವಡಿಸಬೇಕು. ಪಾವತಿ ನೀಡಲು ಹಿಂದೇಟು ಹಾಕಿದಲ್ಲಿ ನಾಮಫಲಕದಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಬೇಕು ಎಂದು ಆಗ್ರಹಿಸಿದರು.

    ಅಗ್ರೋ ಮಾಲೀಕ ಜಯಣ್ಣ ಮಲ್ಲಿಗಾರ, ಕೃಷಿ ಸಹಾಯಕ ಅಧಿಕಾರಿಗಳಾದ ಮಂಜುನಾಥ ಎಂ., ತಾಂತ್ರಿಕ ಅಧಿಕಾರಿ ಬಸವರಾಜ ಮರಗಣ್ಣನವರ, ರೈತ ಮುಖಂಡ ಕಿರಣಕುಮಾರ ಗಡಿಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts