More

    ವಾರ ಬಳಿಕ ಬಸ್ ಸಂಚಾರ ನಿರ್ಧಾರ

    ಉಡುಪಿ: ಜಿಲ್ಲೆ ಹಸಿರು ವಲಯದಲ್ಲಿದ್ದರೂ, ಸಾರ್ವಜನಿಕರಿಗೆ ಬಸ್ ಸೇವೆ ಸದ್ಯಕ್ಕೆ ಸಿಗದು.
    ಈ ಬಗ್ಗೆ ವಾರದ ನಂತರ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸೇವೆ ಸಂಬಂಧಿಸಿ ಜಿಲ್ಲೆಯೊಳಗಿನ ಬಸ್ ಸಂಚಾರವನ್ನು ಇನ್ನೂ ಒಂದು ವಾರದ ಕಾಲ ಆರಂಭಿಸುವುದಿಲ್ಲ. ಈ ನಡುವೆ ಮೇ 3ರ ಬಳಿಕ ರಿಕ್ಷಾಗಳಲ್ಲಿ ಒಬ್ಬ ಗ್ರಾಹಕರನ್ನು ಮಾತ್ರ ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

    ಒಂದು ವೇಳೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದರೂ ಜಿಲ್ಲೆಯ ಬಸ್ ಮಾಲೀಕರು ಸೇವೆ ಆರಂಭಿಸುವ ಚಿಂತನೆ ಮಾಡಿಲ್ಲ. ಈಗಾಗಲೆ ಕೋಟ್ಯಂತರ ರೂ.ನಷ್ಟದಲ್ಲಿರುವ ಸ್ಥಳೀಯ ಸಾರಿಗೆ ಉದ್ಯಮ ಮತ್ತಷ್ಟು ನಷ್ಟ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಮಾಲೀಕರ ವರ್ಗ ಅಸಾಹಯಕತೆ ವ್ಯಕ್ತಪಡಿಸಿದೆ. ಜಿಲ್ಲಾಡಳಿತ ಒಪ್ಪಿಗೆ ನೀಡಿದರೂ, ಕೊವಿಡ್-19 ನಿಯಂತ್ರಣದ ನಿಯಮಾವಳಿಗಳು ಅನುಸರಿಸುವುದು ಕಷ್ಟ ಎಂಬುದು ಮಾಲೀಕರ ಅಭಿಪ್ರಾಯ. ಒಂದು ಬಸ್‌ನಲ್ಲಿ ಶೇ.50 ಪ್ರಯಾಣಿಕರು, ಅಂದರೆ ಸೀಟ್‌ಗೆ ಒಬ್ಬರು ಅಥವಾ ಇಬ್ಬರು ಪ್ರಯಾಣಿಕರಂತೆ ಕೂರಿಸಿಕೊಂಡು ಬಸ್ ಸಂಚಾರ ನಷ್ಟಕ್ಕೆ ಕಾರಣವಾಗುತ್ತದೆ. ಕನಿಷ್ಟ ಡೀಸೆಲ್ ಹಣವೂ ಇದರಲ್ಲಿ ಪೂರೈಸುವುದಿಲ್ಲ ಎನ್ನುತ್ತಿದ್ದಾರೆ ಮಾಲೀಕರು.

    ಬಸ್ ಮಾಲೀಕರಿಂದ ಸಭೆ: ಮೇ 3ರ ಬಳಿಕ ಖಾಸಗಿ ಬಸ್ ಸಂಚಾರ ಪುನರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಬಸ್ ಮಾಲೀಕರ ಸಂಘದ ನಡುವೆ ವಿಶೇಷ ಸಭೆ ನಡೆಯಬೇಕಿತ್ತು. ಈ ಸಭೆ ಶನಿವಾರ ನಡೆದಿಲ್ಲ. ಈ ಕಾರಣದಿಂದ ಸಿಟಿ ಮತ್ತು ಸರ್ವಿಸ್ ಬಸ್ ಸಂಘದ ಪ್ರಮುಖರು ಮಾತ್ರ ಸಭೆ ಸೇರಿ ಬಸ್ ಓಡಾಟ ಅನುಮತಿ ಲಭಿಸಿದರೆ, ಎದುರಿಸಬೇಕಾದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸೇವೆ ನೀಡುವುದು, ಡೀಸೆಲ್ ವೆಚ್ಚ, ಸಿಬ್ಬಂದಿ ವೇತನ, ಬಸ್ ನಿರ್ವಹಣೆ ವೆಚ್ಚದ ಬಗ್ಗೆ ಚರ್ಚೆ ನಡೆದಿದೆ. ಕೋವಿಡ್-19 ನಿಯಮಾವಳಿ ಅನುಸರಿಸುವುದು, ಬಸ್‌ನಲ್ಲಿ ಸ್ಯಾನಿಟೈಸರ್ ಬಳಕೆ, ಕಂಡಕ್ಟರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲ ನಿಯಮಾವಳಿ ಅನುರಿಸಿಕೊಂಡು ಬಸ್ ಸಂಚಾರ ಸಾಕಷ್ಟು ಹೊರೆಯಾಗಲಿದೆ. ಆದಾಯಕ್ಕಿಂತ, ನಷ್ಟವೇ ಹೆಚ್ಚಲಿದೆ ಎಂಬುದು ಮಾಲೀಕರ ಅಭಿಪ್ರಾಯ. ಬಸ್ ಮಾಲೀಕರು ಮತ್ತು ಜಿಲ್ಲಾಧಿಕಾರಿ ಸಭೆ ನಡೆಯುವವರೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

    ಜಿಲ್ಲೆಯ ಬಸ್‌ಗಳ ಸ್ಥಿತಿಗತಿ: ಉಡುಪಿ ನಗರ ಭಾಗದಲ್ಲಿ 80 ಸಿಟಿ ಬಸ್‌ಗಳಿವೆ ಇದನ್ನೆ ನೆಚ್ಚಿಕೊಂಡು 250 ಕಾರ್ಮಿಕರು (ಡ್ರೈವರ್, ಕ್ಲೀನರ್, ಕಂಡಕ್ಟರ್) ಜೀವನ ಮಾಡುತಿದ್ದಾರೆ. ಸಿಟಿ ಬಸ್‌ಗಳ ದಿನದ ಆದಾಯ 7 ಲಕ್ಷ ರೂ., ಇದೆ. ಲಾಕ್‌ಡೌನ್‌ನಿಂದಾಗಿ ಸಿಟಿ ಬಸ್ ಲಕ್ಷಾಂತರ ರೂ., ಆದಾಯ ಖೋತ ಆಗಿದೆ. ಶಿವಮೊಗ್ಗ, ಮಂಗಳೂರು, ಭಟ್ಕಳ, ಕುಂದಾಪುರ, ಹೆಬ್ರಿ, ಚಿಕ್ಕಮಗಳೂರು, ಶೃಂಗೇರಿ, ಶಿವಮೊಗ್ಗ, ಸಾಗರ ಮೊದಲಾದ ಕಡೆ ಜಿಲ್ಲಾ ಕೇಂದ್ರ ಸರ್ವಿಸ್ ಬಸ್ಸುಗಳ ಓಡಾಟ ಇದೆ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಬಸ್‌ಗಳಿವೆ. 1800 ಮಂದಿ ಕಾರ್ಮಿಕ ವರ್ಗ ಇದರಲ್ಲಿದ್ದಾರೆ. ದಿನಕ್ಕೆ ಒಂದು ಬಸ್ 7 ರಿಂದ 10 ಸಾವಿರ ರೂ.ಆದಾಯ ಗಳಿಸುತಿತ್ತು.

    ಸರ್ಕಾರ ಅನುಮತಿ ನೀಡಿದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ ಪೂರಕ ನಿಯಮಾವಳಿಗಳನ್ನು ಅನುಸರಿಸಿಕೊಂಡು ಬಸ್ ಸಂಚಾರ ನಡೆಸುವ ಬಗ್ಗೆ ಬಸ್ ಮಾಲೀಕರು ಸಭೆ ನಡೆಸಿ ಸಾಧಕ-ಬಾಧಕ ಚರ್ಚೆ ನಡೆಸಿದ್ದು, ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಯಬೇಕಿತ್ತು. ಕಾರಣಾಂತರಗಳಿಂದ ನಡೆದಿಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ.
    ಕುಯಿಲಾಡಿ ಸುರೇಶ್ ನಾಯಕ, ಅಧ್ಯಕ್ಷ, ಬಸ್ ಮಾಲೀಕರ ಸಂಘ, ಉಡುಪಿ ಜಿಲ್ಲೆ

    ಸರ್ಕಾರದಿಂದ ಆದೇಶ ಬಾರದ ಕಾರಣ ಖಾಸಗಿ ಬಸ್ ಮಾಲೀಕರ ಸಂಘದ ಜತೆ ಸಭೆ ನಡೆಸಿಲ್ಲ. ಆದೇಶ ಬಂದ ಕೂಡಲೇ ಸಭೆ ನಡೆಸಿ ಈ ಬಗ್ಗೆ ಸೂಚನೆ ನೀಡಲಾಗುವುದು. ಕೆಎಸ್‌ಆರ್‌ಟಿಸಿ ಬಸ್ ಆರಂಭಿಸುವ ಬಗ್ಗೆ ಆರ್‌ಟಿಒ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸದ್ಯದ ಮಟ್ಟಿಗೆ ಜಿಲ್ಲೆಯ ಯಾವ ಭಾಗಕ್ಕೆ ಬಸ್ ಓಡಿಸಬಹುದು, ಪ್ರಯಾಣಿಕರ ಆದ್ಯತೆ ಸಂಬಂಧಿಸಿ ಜಂಟಿಯಾಗಿ ರೂಟ್ ಸರ್ವೇ ನಡೆಸಿ ಶೀಘ್ರ ವರದಿ ನೀಡಲು ಸೂಚನೆ ನೀಡಲಾಗಿದೆ. ವಾರದ ಬಳಿಕ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು.
    – ಜಿ.ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts