More

    ಏಕಾಏಕಿ ಬಸ್ ಸಂಚಾರ ಬಂದ್

    ಹುಬ್ಬಳ್ಳಿ/ಧಾರವಾಡ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಅವಳಿ ನಗರದಲ್ಲಿ ಶುಕ್ರವಾರ ಸಾರಿಗೆ ಸಂಸ್ಥೆ ನೌಕರರು ಮುಷ್ಕರಕ್ಕೆ ಇಳಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.

    ಬೆಳಗ್ಗೆ 8-9 ಗಂಟೆ ಹೊತ್ತಿಗೆ ಹುಬ್ಬಳ್ಳಿ ನಗರದ ಬಸ್ ನಿಲ್ದಾಣಗಳಿಂದ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಪ್ರಯಾಣಿಕರು ವಿಚಲಿತರಾದರು. ಏಕಾಏಕಿ ಬಸ್ ಸೇವೆ ಬಂದ್ ಆಗಿದ್ದರಿಂದ ದೂರ ಊರಿನ ಪ್ರಯಾಣಿಕರು ತೊಂದರೆಗೆ ಸಿಲುಕಿದರು.

    ಹುಬ್ಬಳ್ಳಿ ಹೊಸ ಹಾಗೂ ಹಳೇ ಬಸ್ ನಿಲ್ದಾಣ, ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದಿಂದ ಯಾವುದೇ ಬಸ್​ಗಳು ಹೊರಡಲಿಲ್ಲ.

    ಬೆಳಗ್ಗೆ 9 ಗಂಟೆ ಹೊತ್ತಿಗೆ ಸಾರಿಗೆ ಸಂಸ್ಥೆ ಸಿಬ್ಬಂದಿ ಸೇರಿ ನಗರದ ಹೊಸೂರ ಸರ್ಕಲ್, ಐಟಿ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕ, ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಲಕರನ್ನು ತರಾಟೆಗೆ ತೆಗೆದುಕೊಂಡರು, ಪ್ರಯಾಣಿಕರನ್ನು ಅಲ್ಲಿಯೇ ಇಳಿಸುವಂತೆ ಹಾಗೂ ರಸ್ತೆಯಲ್ಲೇ ಬಸ್ ತಡೆದು ಪ್ರತಿಭಟನೆ ಬೆಂಬಲಿಸುವಂತೆ ಒತ್ತಡ ಹೇರಿದರು.

    ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಸಾರಿಗೆ ನೌಕರರು, ಪೊಲೀಸರ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಚಾಲಕರು ಕರ್ತವ್ಯಕ್ಕೆ ಮರಳಿದಲ್ಲಿ ಸೂಕ್ತ ರಕ್ಷಣೆ ನೀಡುವುದಾಗಿ ಭರವಸೆ ನೀಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲು ಪೊಲೀಸರು ಮನವಿ ಮಾಡಿದರು.

    ಹುಬ್ಬಳ್ಳಿ ವಿಭಾಗೀಯ ಕಚೇರಿ ಮುಂದೆ ಸುಮಾರು 50- 0 ಜನ ಸಾರಿಗೆ ನೌಕರರು ಕೆಲಸ ಸ್ಥಗಿತಗೊಳಿಸಿ ನಿಂತಿದ್ದರು. ಗೋಕುಲ ರೋಡ್ ಪೊಲೀಸರು ಸಾರಿಗೆ ನೌಕರರಿಗೆ ಕರ್ತವ್ಯಕ್ಕೆ ಮರಳಲು ಸೂಚಿಸಿದರು.

    ಒಂದು ವೇಳೆ ಕರ್ತವ್ಯಕ್ಕೆ ಮರಳದೇ ಪ್ರತಿಭಟನೆಗೆ ಮುಂದಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದೆಂದು ನೌಕರರಿಗೆ ಎಚ್ಚರಿಸಿದರು.

    ಸ್ಥಳಕ್ಕೆ ಬಂದ ಉತ್ತರ ವಿಭಾಗದ ಎಸಿಪಿ ವಿನೋದ್ ಮುಕ್ತೇದಾರ ಅವರು ಸಾರಿಗೆ ನೌಕರರಿಗೆ ಗುಂಪುಗೂಡಿ ನಿಲ್ಲದಂತೆ ಹಾಗೂ ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದರು. ಆದರೂ, ಕೇಳದ ನೌಕರರು ಬಸ್​ಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿ ವಾಪಸ್ ಮನೆಯತ್ತ ತೆರಳಿದರು. ಕೆಲವರು ಅಲ್ಲಲ್ಲಿ ಗುಂಪುಗೂಡಿ ನಿಂತಿದ್ದರು.

    ಚಾಲಕರ ಮುಷ್ಕರದಿಂದಾಗಿ ಪ್ರಯಾಣಿಕರು ತೀವ್ರ ಪರದಾಡಿದರು. ಮಧ್ಯಾಹ್ನ 12 ಗಂಟೆ ನಂತರ ನಗರ ಸಾರಿಗೆ ಬಸ್ ಆರಂಭವಾದವು. ಆದರೆ, ಸಂಜೆಯವರೆಗೂ ಗ್ರಾಮೀಣ ಸಾರಿಗೆಗಳು ಆರಂಭವಾಗಿರಲಿಲ್ಲ.

    ಧಾರವಾಡದಲ್ಲಿ ಬೆಳಗ್ಗೆ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ಆರಂಭಗೊಂಡಿದ್ದರೆ, ಅನ್ಯ ಜಿಲ್ಲೆಗಳಿಗೆ ತೆರಳುವ ಬಸ್​ಗಳ ಸಂಚಾರ ಮಾತ್ರ ಬಂದಾಗಿತ್ತು. ಆದರೆ, 11 ಗಂಟೆ ಹೊತ್ತಿಗೆ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್​ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟನೆಗೆ ಮುಂದಾದರು.

    ಕೆಲ ನಿಮಿಷಗಳಲ್ಲಿಯೇ ಎಲ್ಲ ಘಟಕಗಳ ಸಿಬ್ಬಂದಿ ಬಿಆರ್​ಟಿಎಸ್ ಟರ್ವಿುನಲ್​ನಲ್ಲಿ ಧರಣಿ ನಡೆಸಿದರಲ್ಲದೆ, ಬಿಆರ್​ಟಿಎಸ್ ಬಸ್ ಸಂಚಾರ ಸ್ಥಗಿತಗೊಳಿಸಿದರು. ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ, ತಮ್ಮನ್ನೂ ಸರ್ಕಾರಿ ನೌಕರರೆಂದು ಘೊಷಿಸಬೇಕು ಎಂದು ಆಗ್ರಹಿಸಿದರು.

    14 ಲಕ್ಷ ರೂ.ಆದಾಯ ನಷ್ಟ: ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ನಿತ್ಯ 193 ಮಾರ್ಗಗಳಲ್ಲಿ 212 ಬಸ್​ಗಳು ಸಂಚರಿಸುತ್ತವೆ. ಶುಕ್ರವಾರ ಒಂದೂ ಬಸ್ ಸಂಚರಿಸದ ಕಾರಣ ಸುಮಾರು 14 ಲಕ್ಷ ರೂ. ಆದಾಯ ನಷ್ಟವಾಗಿದೆ ಎಂದು ಧಾರವಾಡ ಘಟಕ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ತಿಳಿಸಿದ್ದಾರೆ.

    ಆಟೋ ಚಾಲಕರಿಂದ ಸುಲಿಗೆ

    ಬೆಳಗ್ಗೆಯಿಂದಲೇ ಬಸ್ ಇಲ್ಲದ ಕಾರಣ ಬಹುತೇಕ ಜನರು ಖಾಸಗಿ ವಾಹನ, ಆಟೋಗಳನ್ನು ನಂಬಿಕೊಳ್ಳಬೇಕಾಯಿತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೋ ಚಾಲಕರು ಬೇಕಾಬಿಟ್ಟಿ ದರ ನಿಗದಿ ಮಾಡಿ ಪ್ರಯಾಣಿಕರನ್ನು ಕರೆದೊಯ್ದರು. ಕೆಲವೆಡೆ ನಿತ್ಯದ ದರಕ್ಕಿಂತ ಮೂರು- ನಾಲ್ಕು ಪಟ್ಟು ಹೆಚ್ಚು ದರ ಪಡೆದರು. ಬಸ್ ನಿಲ್ದಾಣ ಅಕ್ಕಪಕ್ಕದಲ್ಲಿ ಒಂದು ರೀತಿ ಆಟೋ ಜಾತ್ರೆಯಂತೆ ಕಂಡು ಬಂತು. ರಾತ್ರಿಯಂತೂ ಕೆಲ ಆಟೋ ಚಾಲಕರ ಸುಲಿಗೆ ತೀವ್ರವಾಗಿತ್ತು. ಬಾಯಿಗೆ ಬಂದ ರೇಟ್ ಹೇಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಮನೆಗೆ ತೆರಳುವ ಅನಿವಾರ್ಯತೆಯಿಂದ ಜನ ಕೂಡ ಹಿಡಿಶಾಪ ಹಾಕುತ್ತ ಸಿಕ್ಕ ವಾಹನ ಏರುತ್ತಿದ್ದರು. ಬೇಂದ್ರೆ ನಗರ ಸಾರಿಗೆ ಬಸ್ ಸಂಚಾರ ಎಂದಿನಂತೆ ಇತ್ತು. ಅವುಗಳಲ್ಲೂ ಜನ ಕಿಕ್ಕಿರಿದು ತುಂಬಿಕೊಂಡು ಹೋದರು.

    ಕಲಘಟಗಿ ವರದಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರ ಶುಕ್ರವಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

    ನಿತ್ಯ ಹುಬ್ಬಳ್ಳಿ, ಧಾರವಾಡ, ತಡಸ, ಮುಂಡಗೋಡ, ಯಲ್ಲಾಪುರ ಹಾಗೂ ಹಳಿಯಾಳಗಳತ್ತ ಸಾಗುವ ಪ್ರಯಾಣಿಕರಿಗೆ ಬೆಳಗಿನ ಸಮಯ ತಾಲೂಕು ಕೇಂದ್ರ ಸ್ಥಳಕ್ಕೆ ಬರಲು ಸಾಧ್ಯವಾಯಿತು. ಆದರೆ, ಮರಳಿ ಮನೆ ಸೇರಲು ಸಾರಿಗೆ ಸಂಸ್ಥೆ ಬಸ್ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

    ಬೆಳಗಿನ ಸಮಯದಲ್ಲಿಯೇ ಬಸ್ ನಿಲ್ದಾಣದ ಎದುರು ಪ್ರಯಾಣಿಕರು ಹೆಚ್ಚಾಗುತ್ತಿದ್ದಂತೆಯೇ ಸಿಪಿಐ ವಿಜಯ ಬಿರಾದರ ಸಿಬ್ಬಂದಿಯೊಂದಿಗೆ ಧಾವಿಸಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರಿಗೆ ಸಂಚರಿಸಲು ಅನುಕೂಲ ಮಾಡಿಕೊಟ್ಟರು.

    ಕುಂದಗೋಳ ವರದಿ: ತಾಲೂಕಿನಲ್ಲೂ ಸಾರಿಗೆ ನೌಕರರ ದಿಢೀರ್ ಪ್ರತಿಭಟನೆಯ ಬಿಸಿ ತಟ್ಟಿತು. ಬಸ್ ಓಡಾಟವಿಲ್ಲದೆ ಪ್ರಯಾಣಿಕರು ಪರದಾಡಿದರು. ಸಂಜೆ ನೌಕರರು ಹಾಗೂ ಬೇರೆ ಕಡೆ ಹೋಗುವಂತಹ ಪ್ರಯಾಣಿಕರು ಬೈಕ್, ಆಟೋ, ಖಾಸಗಿ ವಾಹನದ ಮೂಲಕ ಮನೆ ತಲುಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts