More

  ಕುಂಬಳೆ ಪೇಟೆಗೆ ಬಸ್ ನಿಲ್ದಾಣ ಮರೀಚಿಕೆ: ಜನತೆಗಿಲ್ಲಿ ನಿತ್ಯ ಸಂಕಷ್ಟ

  ಪುರುಷೋತ್ತಮ ಪೆರ್ಲ ಕಾಸರಗೋಡು

  ಅಭಿವೃದ್ಧಿಗೊಳ್ಳುತ್ತಿರುವ ಕುಂಬಳೆ ಪೇಟೆಗೆ ಸುಸಜ್ಜಿತ ಬಸ್ ನಿಲ್ದಾಣ ಕಟ್ಟಡ ಎಂಬುದು ಮರೀಚಿಕೆಯಾಗಿ ಉಳಿದಿದೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣವಿಲ್ಲದೆ ಜನತೆಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.

  ಹಳೇ ಬಸ್ ನಿಲ್ದಾಣ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ನೆಲಸಮಗೊಳಿಸಿ ಹಲವು ವರ್ಷಗಳೇ ಸಂದರೂ, ಕುಂಬಳೆ ಗ್ರಾಪಂಗೆ ಇನ್ನೂ ಬಸ್ ಪ್ರಯಾಣಿಕರಿಗಾಗಿ ಸೂಕ್ತ ಸೂರು ನಿರ್ಮಿಸಿ ಕೊಡಲಾಗಿಲ್ಲ. ಕಾಸರಗೋಡು-ಮಂಗಳೂರು, ಕುಂಬಳೆ-ಮುಳ್ಳೇರಿಯ, ಕುಂಬಳೆ-ಪುತ್ತಿಗೆ-ಪೆರ್ಲ, ಕುಂಬಳೆ-ಬದಿಯಡ್ಕ-ಪೆರ್ಲ, ಕುಂಬಳೆ-ಕಳತ್ತೂರು ಸೇರಿದಂತೆ ನಾನಾ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಇದು ಪ್ರಮುಖ ಕೇಂದ್ರವಾಗಿದೆ. ಬಸ್ಸಿಗೆ ಕಾಯುವವರಿಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರೂ, ಬಹುತೇಕ ಪ್ರಯಾಣಿಕರು, ಅಂಗಡಿ, ಹೋಟೆಲ್ ಸೇರಿದಂತೆ ವ್ಯಾಪಾರಿ ಸಂಸ್ಥೆಗಳ ಸೂರಿನಡಿಯಲ್ಲಿ ಆಶ್ರಯ ಪಡೆಯಬೇಕಾಗುತ್ತಿದೆ.

  ಬಸ್‌ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿ ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೇಟೆ ಜತೆಗೆ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ಕುಂಬಳೆ ಪೇಟೆಗೆ ಸುಸಜ್ಜಿತ ಬಸ್ ನಿಲ್ದಾಣ ಕಟ್ಟಡದ ಕೊರತೆ ನಾಗರಿಕ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ. ಇಕ್ಕಟ್ಟಾದ ಜಾಗದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರುತ್ತಿದೆ. ಇದರೊಂದಿಗೆ ಬೀದಿಬದಿ ವ್ಯಾಪಾರಿಗಳೂ ಒಂದಷ್ಟು ಜಾಗ ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಕುಂಬಳೆ ಪೇಟೆಗೆ ಸುಸಜ್ಜಿತ ಬಸ್‌ನಿಲ್ದಾಣ ಕಟ್ಟಡ ನಿರ್ಮಾಣಕಾರ್ಯದ ಬಗ್ಗೆ ಸ್ಥಳೀಯ ಗ್ರಾಪಂ ಯಾವುದೇ ಆಸಕ್ತಿ ತೋರದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

  ಸಾರ್ವಜನಿಕ ಶೌಚಗೃಹವಿಲ್ಲ

  ದೂರದೂರಿಂದ ಕುಂಬಳೆ ತಲುಪುವವರಿಗೆ ದೇಹಬಾಧೆ ತೀರಿಸಲು ಶೌಚಗೃಹ ಇಲ್ಲ. ಇದಕ್ಕಾಗಿ ಹೋಟೆಲ್ ಅಥವಾ ಇತರ ಸಂಸ್ಥೆಗಳ ಶೌಚಗೃಹ ಬಳಸಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇನ್ನು ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಮಹಿಳೆಯರು, ವೃದ್ಧರಿಗೆ ಬಸ್ ನಿಲ್ದಾಣಕ್ಕೆ ತೆರಳುವುದೂ ಸಮಸ್ಯೆಯಾಗುತ್ತಿದೆ. ಕುಂಬಳೆ ಗ್ರಾಪಂ ಪ್ರತಿವರ್ಷದ ಬಜೆಟ್‌ನಲ್ಲಿ ಕುಂಬಳೆ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಲಾಗುತ್ತಿದ್ದರೂ, ಕೆಲಸ ಆರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

  ಕುಂಬಳೆ ಪೇಟೆಯಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಜಾಗದ ಅಭಾವವಿದ್ದು, ಈ ಬಗ್ಗೆ ಮಾತುಕತೆ ಮುಂದುವರಿದಿದೆ. ಇದಕ್ಕೂ ಮೊದಲು ಈ ಹಿಂದೆ ಬಸ್‌ನಿಲ್ದಾಣ ಕಟ್ಟಡವಿದ್ದ ಸ್ಥಳದಲ್ಲಿ ಸುಸಜ್ಜಿತ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಬಗ್ಗೆ ಪಂಚಾಯಿತಿ ಕ್ರಮ ಆರಂಭಿಸಿದೆ. ಕಟ್ಟಡ ನಿರ್ಮಾಣದ ಯೋಜನಾ ನಕಾಶೆ ತಯಾರಿ ಬಗ್ಗೆ ತಿರುವನಂತಪುರದ ಇಂಜಿನಿಯರಿಂಗ್ ಕಾಲೇಜು ಒಂದಕ್ಕೆ ಜವಾಬ್ದಾರಿ ವಹಿಸಿಕೊಡಲಾಗಿದೆ. ಜತೆಗೆ ಕುಂಬಳೆ ಬದಿಯಡ್ಕ ಹಾದಿಯ ಕೆಎಸ್‌ಟಿಪಿ ರಸ್ತೆ ಅಂಚಿಗೆ ಶೌಚಗೃಹ ನಿರ್ಮಾಣಕ್ಕೂ ಪಂಚಾಯಿತಿ ಯೋಜನೆಯಿರಿಸಿಕೊಂಡಿದೆ.
  – ತಾಹಿರಾ ಕೆ.ವಿ, ಅಧ್ಯಕ್ಷೆ ಕುಂಬಳೆ ಗ್ರಾಪಂ

  See also  ಕೌಟುಂಬಿಕ ಕಲಹ : ಒಬ್ಬನ ಕೊಲೆಯಲ್ಲಿ ಅಂತ್ಯ, ಇಬ್ಬರ ಬಂಧನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts