More

    ಬಸ್‌ಗಳಿದ್ದರೂ ಸಿಬ್ಬಂದಿ ಇಲ್ಲದೇ ಗೋಳು

    ದೊಡ್ಡಬಳ್ಳಾಪುರ ಪ್ರಯಾಣಿಕರ ಪರದಾಟ ಚಾಲಕ, ನಿರ್ವಾಹಕರಿಲ್ಲದೆ ಗೋಳಾಟ


    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿ ಬಳಿಕ ತಾಲೂಕಿನಾದ್ಯಂತ ಮಹಿಳಾ ಪ್ರಯಾಣಿಕರು ಸೇರಿ ಪ್ರಯಾಣಿಕರ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ. ಆದರೆ ನಿಗದಿತವಾಗಿ ಬಸ್ ಬಾರದೆ ಪ್ರಯಾಣಿಕರು ಮಾತ್ರ ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.
    ಆದರೆ, ತಾಲೂಕಿನಲ್ಲಿ ಬಸ್‌ಗಳ ಸಮಸ್ಯೆ ಇಲ್ಲದಿದ್ದರೂ ಬಸ್ ಚಾಲಕರು, ನಿರ್ವಾಹಕರು ಹಾಗೂ ಬಸ್ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊರತೆಯೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
    2018ರಿಂದ ನೇಮಕಾತಿ ಇಲ್ಲ ದೊಡ್ಡಬಳ್ಳಾಪುರ ಘಟಕಕ್ಕೆ 2018ರಿಂದಲೂ ಈವರೆಗೆ ವಿವಿಧ ಕಾರಣಗಳಿಂದಾಗಿ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ, ಡಿ.ಗ್ರೂಪ್ ಸಿಬ್ಬಂದಿ ಸೇರಿ ಆಯಾ ಕಟ್ಟಿನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 5-6 ವರ್ಷಗಳಿಂದ ನಿವೃತ್ತಿ ಹೊಂದಿದ ಸಿಬ್ಬಂದಿ ಸಂಖ್ಯೆಯೂ ಅಧಿಕವಾಗಿದ್ದು, ಅವರಿಂದ ತೆರವಾದ ಸ್ಥಾನಗಳಿಗೆ ಭರ್ತಿ ಮಾತ್ರ ಆಗಿಲ್ಲ. ಹೀಗಾಗಿ ಸಮರ್ಪಕವಾಗಿ ಬಸ್‌ಗಳು ಇದ್ದರೂ ಚಾಲಕ, ನಿರ್ವಾಹಕ, ಸಿಬ್ಬಂದಿ ಕೊರತೆಯಿಂದಾಗಿ ಬಸ್‌ಗಳನ್ನು ರಸ್ತೆಗಿಳಿಸದಂತಾಗಿದೆ. ಇದರಿಂದ ಪ್ರಯಾಣಿಕರೂ ಪರದಾಡುವಂತಾಗಿದೆ.
    ಬೇಕಾಗಿದ್ದಾರೆ ಡ್ರೈವರ್, ಕಂಡಕ್ಟರ್: ದೊಡ್ಡಬಳ್ಳಾಪುರದ ಕೆಎಸ್‌ಆರ್‌ಟಿಸಿ ಘಟಕಕ್ಕೆ ಒಟ್ಟು 325 ಚಾಲಕರು, ನಿರ್ವಾಹಕರ ಅವಶ್ಯಕತೆ ಇದೆ. ಪ್ರಸ್ತುತ 214 ಮಂದಿ ಚಾಲಕರು, ನಿರ್ವಾಹಕರು ಕರ್ತವ್ಯದಲ್ಲಿದ್ದಾರೆ. ಒಟ್ಟು 111 ಸಿಬ್ಬಂದಿ ಕೊರತೆ ಎದುರಾಗಿದೆ. ಘಟಕಕ್ಕೆ ಒಟ್ಟು 8 ಮಂದಿ ತಾಂತ್ರಿಕ ಸಿಬ್ಬಂದಿ ತುರ್ತಾಗಿ ಭರ್ತಿಯಾಗಬೇಕಿದೆ.

    76 ರೂಟ್ 87 ಬಸ್‌ಗಳು: ತಾಲೂಕಿನ ಗ್ರಾಮಾಂತರ ಭಾಗದಲ್ಲಿಯೂ ಯಾವುದೇ ಬಸ್‌ಗಳ ಸಮಸ್ಯೆ ಇಲ್ಲ. ಹಾಲಿ ಇರುವ 76 ಮಾರ್ಗಗಳಿಗೆ 86 ಬಸ್‌ಗಳಿವೆ. ಆದರೆ, 11 ಬಸ್‌ಗಳಿಗೆ ಚಾಲಕ, ನಿರ್ವಾಹಕರಿಲ್ಲ. ಮಳೆಗಾಲವಾದ್ದರಿಂದ ಪಿಕಪ್ ಮತ್ತು ಡ್ರಾಪ್ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ. ಗ್ರಾಮಾಂತರದಲ್ಲಿ ಕಿರಿದಾದ ರಸ್ತೆ, ಡಾಂಬರೀಕರಣ ಇಲ್ಲದ ಭಾಗಗಳಲ್ಲಿ ನಿಧಾನಗತಿಯಲ್ಲಿ ಚಾಲನೆ ಮಾಡುವಂತೆ ಘಟಕದಿಂದಲೇ ಸೂಚನೆ ನೀಡಿದ್ದೇವೆ. ರಸ್ತೆಗಳು ಸರಿಇಲ್ಲದ ಭಾಗದಲ್ಲಿ ಸಮಯ ಪಾಲನೆ ಆಗುತ್ತಿಲ್ಲ.

    ಗುತ್ತಿಗೆ ಆಧಾರದಲ್ಲಿ ನೇಮಕ: ಸದ್ಯಕ್ಕೆ ಚಾಲಕರು, ನಿರ್ವಾಹಕರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಕೇಂದ್ರ ನಿಗಮದ ನಿರ್ದೇಶನದಂತೆ 25 ರಿಂದ 30 ಮಂದಿ ಚಾಲಕ, ನಿರ್ವಾಹಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭ ಮಾಡಲಾಗುವುದು. ಉಳಿದ ತಾಂತ್ರಿಕ ಸಿಬ್ಬಂದಿ ಭರ್ತಿ ಕೆಲಸವನ್ನೂ ಶೀಘ್ರವಾಗಿ ಮಾಡಲಾಗುವುದು ಎಂದು ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್ ಘಟಕ ವ್ಯವಸ್ಥಾಪಕ ಎಸ್.ಆರ್.ಸಂತೋಷ ತಿಳಿಸಿದ್ದಾರೆ.


    ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್
    ಪ್ರತಿನಿತ್ಯ ಬೆಂಗಳೂರು ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕಾಡುತ್ತಿರುವ ಬಸ್ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗಿದ್ದು, ಬೆಳಗ್ಗೆ 5 ಗಂಟೆಯಿಂದ 6.30ರ ವರೆಗೆ ಪ್ರತಿ ಅರ್ಧ ಗಂಟೆಗೊಂದು ಬಸ್, 6.30ರಿಂದ 10 ಗಂಟೆವರೆಗೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ಬಸ್ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಗಂಟೆಗೊಮ್ಮೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಆಧಾರದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.


    ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬಸ್‌ಗಳಿಗೆ ಕೊರತೆ ಇಲ್ಲ. ಬಸ್‌ಗಳು ಕೂಡ ಉತ್ತಮ ಸ್ಥಿತಿಯಲ್ಲಿವೆ. ಆದರೆ ಚಾಲಕ, ನಿರ್ವಾಹಕ ಸೇರಿ ಘಟಕದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಎದುರಾಗಿದೆ. ಜತೆಗೆ ಮಳೆಯಿಂದಾಗಿ ರಸ್ತೆಗಳಲ್ಲಿ ಹಳ್ಳ ಹೆಚ್ಚಿರುವುದರಿಂದ ನಿಧಾನಗತಿಯಲ್ಲಿ ಸಾಗುವುದು ಅನಿವಾರ್ಯವಾಗಿದೆ. ಆದ್ದರಿಂದ ಸಮಯದಲ್ಲಿ ಏರುಪೇರಾಗಿದೆ.
    ಎಸ್.ಆರ್. ಸಂತೋಷ
    ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ, ದೊಡ್ಡಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts