More

    ರುದ್ರಭೂಮಿ ಹೆಸರಿಗೆ ಜಮೀನು: ಚೆಂಬುಗುಡ್ಡೆ ವಿದ್ಯುತ್ ಚಿತಾಗಾರ ವಿವಾದ ಪರಿಹಾರ ನಿರೀಕ್ಷೆ

    ಉಳ್ಳಾಲ: ಚೆಂಬುಗುಡ್ಡೆಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಸಂದರ್ಭ ಎದ್ದಿದ್ದ ವಿವಾದ ಬಗೆಹರಿಯುವ ಹಂತದಲ್ಲಿದೆ. ಆದರೆ ವಿವಾದಿತ ಸ್ಥಳದಲ್ಲೇ ಮತ್ತೆ ಶಿಲಾನ್ಯಾಸ, ಚಿತಾಗಾರ ನಿರ್ಮಾಣ ಬಗ್ಗೆ ಪ್ರಾಯೋಜಿತ ಸಂಸ್ಥೆ ಇನ್ಫೋಸಿಸ್ ಕೈಗೊಳ್ಳುವ ನಿಲುವು ಪ್ರಮುಖ ಪಾತ್ರ ವಹಿಸಲಿದೆ.

    ಚೆಂಬುಗುಡ್ಡೆ ಹಿಂದು ರುದ್ರಭೂಮಿಗೆ ಆಧುನಿಕತೆಗೆ ತಕ್ಕಂತೆ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ತೊಡಗಲಾಗಿತ್ತು. ಪ್ರಸ್ತುತ ಕರೊನಾದಿಂದ ಮೃತಪಟ್ಟವರ ಮೃತದೇಹ ಸುಡಲು ವಿದ್ಯುತ್ ಚಿತಾಗಾರಕ್ಕೆ ಬೋಳೂರಿಗೆ ಹೋಗಬೇಕಿತ್ತು. ಇದರಿಂದ ಚೆಂಬುಗುಡ್ಡೆಗೆ ವಿದ್ಯುತ್ ಚಿತಾಗಾರ ಅನಿವಾರ್ಯ ಎನಿಸಿ ರುದ್ರಭೂಮಿ ನಿರ್ವಹಣಾ ಸಮಿತಿ ಶಾಸಕರಲ್ಲಿ ಬೇಡಿಕೆ ಸಲ್ಲಿಸಿದ್ದರಿಂದ ಅವರ ಮನವಿ ಮೇರೆಗೆ ಇನ್ಫೋಸಿಸ್ ಮುಂದೆ ಬಂದಿತ್ತು. ಆದರೆ ಕಳೆದ ಶುಕ್ರವಾರ ಶಿಲಾನ್ಯಾಸಕ್ಕೆ ಕೆಲವರಿಂದ ಅಡ್ಡಿ ಎದುರಾಗಿ ಶಿಲಾನ್ಯಾಸವೇ ನಿಂತಿತು.

    ಈಗಿರುವ ಕಟ್ಟಿಗೆ ಚಿತಾಗಾರದ ಮುಂಭಾಗ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಮಿತಿ ಒಪ್ಪಿದರೂ, ಇದು ಹೆಚ್ಚು ಬಾಳಿಕೆ ಬಾರದು ಸ್ಥಳೀಯರ ವಾದ. ರುದ್ರಭೂಮಿ ಸುತ್ತ ಕುಡಿಯುವ ನೀರಿನ ಟ್ಯಾಂಕ್ ಬಿಟ್ಟು ಉಳಿದ 1.05 ಎಕರೆ ಜಮೀನು ರುದ್ರಭೂಮಿ ಹೆಸರಿಗೆ ಆಗಬೇಕು ಎಂಬ ಬೇಡಿಕೆ ಇಟ್ಟು ಶಿಲಾನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು.

    ಸದ್ಯ ಶಾಸಕ ಯು.ಟಿ ಖಾದರ್ ಶಿಫಾರಸಿನಂತೆ ರುದ್ರಭೂಮಿ ಸುತ್ತ ಇರುವ ಸರ್ಕಾರದ ದಾಖಲೆಯಲ್ಲಿ ಫೋರಂ ಪ್ರಿವೆನ್ಷನ್ ಎಂದು ಉಲ್ಲೇಖಿಸಲಾಗಿರುವ 1.57 ಎಕರೆ ಜಮೀನನ್ನೂ ರುದ್ರಭೂಮಿ ಹೆಸರಿಗೆ ವರ್ಗಾಯಿಸಲು ಕಂದಾಯ ಇಲಾಖೆ ಸೂಚಿಸಿದೆ. ಅದರಂತೆ ಅಧಿಕಾರಿಗಳು ಸರ್ವೇ ಮಾಡಿ ನೀರಿನ ಟ್ಯಾಂಕ್ ಮತ್ತು ರುದ್ರಭೂಮಿಯ ಆರ್‌ಟಿಸಿ ಸಿದ್ಧಪಡಿಸಲಿದ್ದಾರೆ. ಅದೆಷ್ಟೋ ವರ್ಷಗಳಿಂದ ರುದ್ರಭೂಮಿ ಇದ್ದರೂ ದಾಖಲೆಯೇ ಇಲ್ಲ ಎಂಬ ಕೊರಗು ನೀಗಲಿದೆ.

    ಚಿತಾಗಾರದ ಬಗ್ಗೆ ಉಳಿದ ಸಂಶಯ!: ಸ್ಥಳೀಯರ ಸುದ್ದಿಗೋಷ್ಠಿಯಲ್ಲಿ ಗಮನ ಸೆಳೆದ ಕೆಲವು ಅಂಶಗಳು ವಿದ್ಯುತ್ ಚಿತಾಗಾರದ ಅವಶ್ಯಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಲಕ್ಷ ದಾಟುತ್ತದೆ. ಅದನ್ನು ಪಾವತಿಸುವುದು ಯಾರು? ಎನ್ನುವುದು ಇನ್ನೊಂದು ತಕರಾರು. ವಿದ್ಯುತ್ ಚಿತಾಗಾರದಲ್ಲಿ ಹಿಂದು ಸಂಪ್ರದಾಯದಂತೆ ಸಂಸ್ಕಾರ ಕಷ್ಟ ಎಂಬ ವಾದವೂ ಇದೆ. ವಿದ್ಯುತ್ ಚಿತಾಗಾರ ಸಮಿತಿಗೆ ಬೇಕಾದರೂ, ಸ್ಥಳೀಯರು ಈ ಬಗ್ಗೆ ಉತ್ಸಾಹಿತರಾಗಿಲ್ಲ ಎಂಬ ಅನುಮಾನವಿದೆ. ಇವೆಲ್ಲ ಪ್ರಶ್ನೆಗಳಿಗೆ ಆರ್‌ಟಿಸಿಯಲ್ಲಿ ರುದ್ರಭೂಮಿ ಎಂದು ದಾಖಲಾದ ಬಳಿಕ ಉತ್ತರ ಸಿಗಬಹುದು.

    ಶಾಸಕ ಖಾದರ್ ಭರವಸೆ: ರುದ್ರಭೂಮಿ ನಿರ್ವಹಣಾ ಸಮಿತಿ ಬೇಡಿಕೆಯಂತೆ ಇನ್ಫೋಸಿಸ್ ಬಳಿ ಮಾತನಾಡಿದಾಗ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ದಾಖಲೆ ಬಗ್ಗೆ ಮತ್ತು ಜಾಗದ ವಿಚಾರದಲ್ಲಿ ಸ್ಥಳೀಯರು ತಕರಾರು ಎತ್ತಿದ್ದಾರೆ. ಅವರ ಬೇಡಿಕೆಯಂತೆ ಚಿತಾಗಾರ ನಿರ್ಮಿಸಲು 50-60 ಲಕ್ಷ ರೂ. ಹೆಚ್ಚುವರಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಇರುವುದರಿಂದ ಅವರು ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿದರೆ ಉಳಿದ ಹಣ ಇನ್ಫೋಸಿಸ್ ಭರಿಸಿ ಸ್ಥಳೀಯರ ಬೇಡಿಕೆಯಂತೆಯೇ ವಿದ್ಯುತ್ ಚಿತಾಗಾರ ನಿರ್ಮಿಸಲಿದೆ. ಒಂದೆರಡು ದಿನಗಳಲ್ಲಿ ಆರ್‌ಟಿಸಿ ಸಿದ್ಧವಾಗಲಿದೆ ಎಂದು ಶಾಸಕ ಯು.ಟಿ.ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts