More

    ಪಲಿಮಾರಿಗೆ ಬೇಕು ರುದ್ರಭೂಮಿ

    ಹೇಮನಾಥ್ ಪಡುಬಿದ್ರಿ
    ನಂದಿಕೂರು ಮತ್ತು ಪಲಿಮಾರು ಕಂದಾಯ ಗ್ರಾಮಗಳಿಂದ ಕೂಡಿರುವ ಪಲಿಮಾರು ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡು 25 ವರ್ಷ ಕಳೆದರೂ ಸೂಕ್ತ ಜಮೀನು ಸಿಗದೆ ಸಾರ್ವಜನಿಕ ಹಿಂದು ರುದ್ರಭೂಮಿ ಕನಸು ನಿರ್ಮಾಣ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಅಷ್ಟ ಮಠಗಳಲ್ಲೊಂದಾದ ಪಲಿಮಾರು ಮೂಲ ಮಠ ಹೊಂದಿರುವ ಈ ಗ್ರಾಮದಲ್ಲಿ 2011ರ ಜನಗಣತಿಯಂತೆ 6,316 ಜನಸಂಖ್ಯೆಯಿದೆ. ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಇಲ್ಲಿ ಆಡಳಿತ ನಡೆಸಿದ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ. ಆದರೆ ಸೂಕ್ತ ಸರ್ಕಾರಿ ಜಮೀನು ಲಭಿಸದೆ ಬಹು ವರ್ಷಗಳಿಂದ ಬೇಡಿಕೆಯಿರುವ ಸಾರ್ವಜನಿಕ ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ. ಶವ ಸಂಸ್ಕಾರ ಮಾಡಬೇಕೆಂದರೆ ಒಂದೋ ಸ್ವಂತ ಜಮೀನು ಇಲ್ಲವೇ ಸಮೀಪದ ಸಾರ್ವಜನಿಕ ರುದ್ರಭೂಮಿ ಅವಲಂಬಿಸುವ ಅನಿವಾರ್ಯತೆ ಇಂದಿಗೂ ಇದೆ. ಇಲ್ಲಿರುವ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಅವರವರ ಪ್ರಾರ್ಥನಾ ಮಂದಿರಗಳ ಬಳಿ ಶವ ಸಂಸ್ಕಾರಕ್ಕೆ ದಫನ ಭೂಮಿಗಳಿವೆ. ಈ ಮಧ್ಯೆ ಖಾಸಗಿ ಜಮೀನು ಮಾಲೀಕರಲ್ಲಿ ರುದ್ರಭೂಮಿಗಾಗಿ ಜಾಗ ಕೇಳುವ ವಿಷಯದಲ್ಲಿ ಸಂಧಾನ ಯತ್ನಗಳು ನಡೆದಿತ್ತು. ಗ್ರಾಪಂ ಈ ಯೋಜನೆಗೆ ಪರ್ಯಾಯವಾಗಿ ಸರ್ಕಾರದಿಂದ ಮಂಜೂರಾದ ಜಮೀನಿನಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಪಲಿಮಾರು ಗ್ರಾಮಕ್ಕೆ ಹೊಂದಿಕೊಂಡೇ ಇರುವ ಇನ್ನಾ ಗ್ರಾಮದ ಸಾರ್ವಜನಿಕ ರುದ್ರಭೂಮಿಯನ್ನು ಎರಡು ಗ್ರಾಮಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಬಳಕೆ ಮಾಡುವ ಬಗ್ಗೆಯೂ ಸ್ಥಳೀಯರು ಸಲಹೆ ನೀಡಿದ್ದರು. ಅದಕ್ಕೆ ಗ್ರಾಪಂ ಸಮ್ಮತಿಸಿಲ್ಲ.
    ಖಾಸಗಿ ಜಮೀನಿನವರು ಕೆಲ ಬೇಡಿಕೆ ಇಟ್ಟು ತಮ್ಮ ಜಮೀನಿನ ಕೊನೆಯಲ್ಲಿ ರಸ್ತೆ ಸೇರಿದಂತೆ 50 ಸೆಂಟ್ಸ್ ಜಮೀನನ್ನು ಗ್ರಾಪಂಗೆ ನೀಡಲು ಮುಂದಾಗಿದ್ದರು. ಈ ಕುರಿತಂತೆ ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿತ್ತು. ಒಂದು ವೇಳೆ ಖಾಸಗಿ ಜಮೀನು ಪಡೆಯುದಿದ್ದರೂ, ದಾನಪತ್ರ ಪಡೆದು ಹಸ್ತಾಂತರ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗ್ರಾಪಂಗೆ ಸೂಚಿಸಿದ್ದರು. ಕಾರಣಾಂತರದಿಂದ ಅದೂ ಮುರಿದು ಬಿತ್ತು. ಈಗ ಖಾಸಗಿ ಜಮೀನುದಾರರು ಹಸ್ತಾಂತರಕ್ಕೆ ಮುಂದಾಗಿದ್ದರೂ ಗ್ರಾಮಾಡಳಿತ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಪರಿಣಾಮ ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕಾದ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾದಲ್ಲಿ ರುದ್ರಭೂಮಿ ನಿರ್ಮಾಣ ಮತ್ತಷ್ಟು ವಿಳಂಬವಾಗಲಿದೆ.

    ಜಮೀನು ಸಿಕ್ಕರೂ ಮುಗಿದಿಲ್ಲ ವ್ಯಾಜ್ಯ: ಸಾರ್ವಜನಿಕ ರುದ್ರಭೂಮಿ ಹಾಗೂ ಘನ ದ್ರವತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕಾಗಿ ಗ್ರಾಮದ ಸರ್ವೇ ಸಂಖ್ಯೆ 87/2ರಲ್ಲಿ 1.05 ಎಕ್ರೆ ಜಮೀನನ್ನು 2016 ನ.16ರಂದು ಅಂದಿನ ಜಿಲ್ಲಾಧಿಕಾರಿ ಮಂಜೂರು ಮಾಡಿ ಗ್ರಾಪಂ ಹೆಸರಿನಲ್ಲಿ ಪಹಣಿ ಪತ್ರವನ್ನೂ ನೀಡಿದ್ದರು. ಆದರೆ ಆ ಜಮೀನಿಗೆ ಹೊಂದಿಕೊಂಡಿರುವ ಖಾಸಗಿ ಜಮೀನಿನವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಪ್ರಕರಣ ಇನ್ನೂ ಇತ್ಯರ್ಥವಾಗದೆ ರುದ್ರಭೂಮಿ ನಿರ್ಮಾಣಕ್ಕೆ ತೊಡಕಾಗಿದೆ. ಈ ಮಧ್ಯೆ ಸಾರ್ವಜನಿಕ ರುದ್ರಭೂಮಿಗಾಗಿ ಜನ ಅದೆಷ್ಟೋ ಗ್ರಾಮಸಭೆಗಳಲ್ಲಿ ಒತ್ತಾಯಿಸುತ್ತ ಬಂದಿದ್ದಾರೆ. 2017ರಲ್ಲಿ ಇಲ್ಲಿನ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರು ಮೃತಪಟ್ಟಾಗ ಶವ ಸಂಸ್ಕಾರಕ್ಕಾಗಿ ರುದ್ರಭೂಮಿಯಿಲ್ಲದೆ ಗ್ರಾಪಂ ಮುಂಭಾಗದ ಚಿತೆ ನಿರ್ಮಿಸಿ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು.

    ಎರಡು ವರ್ಷಗಳ ಹಿಂದೆಯೇ ಪ್ರಕರಣ ಇತ್ಯರ್ಥವಾಗಿದ್ದಲ್ಲಿ ಗ್ರಾಮಕ್ಕೆ ಅಗತ್ಯವಿರುವ ಸಾರ್ವಜನಿಕ ರುದ್ರಭೂಮಿ ಸಹಿತ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಅದರಲ್ಲೇ ಮಾದರಿ ಎರೆಹುಳ ಗೊಬ್ಬರ ತಯಾರಿಕಾ ಘಟಕ ಆರಂಬಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಖಾಸಗಿ ಜಮೀನು ಹಸ್ತಾಂತರಕ್ಕೆ ಈಗ ಮುಂದಾದಲ್ಲಿ ಚುನಾವಣೆ ಘೋಷಣೆಯಾದರೆ ತೊಡಕಾಗಲಿದೆ. ಅದಕ್ಕಾಗಿ ನಾವು ಉತ್ಸಾಹ ತೋರುತ್ತಿಲ್ಲ.
    ಜಿತೇಂದ್ರ ಪುರ್ಟಾಡೋ, ಪಲಿಮಾರು ಗ್ರಾಪಂ ಅಧ್ಯಕ್ಷ

    ರುದ್ರಭೂಮಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕ ನಿರ್ಮಾಣಕ್ಕೆ ಅನುದಾನದ ಕೊರತೆಯಿಲ್ಲ. ಜಮೀನು ತ್ವರಿತ ಹಸ್ತಾಂತರಕ್ಕೆ ಖಾಸಗಿಯವರು ಒಪ್ಪಿದ್ದಾರೆ. ಈಗ ಹಸ್ತಾಂತರ ಮಾಡಿಕೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯ. ಚುನಾವಣೆ ನಡೆದರೂ ಮುಂದೆ ಬರುವ ಹೊಸ ಆಡಳಿತಕ್ಕೆ ಯೋಜನೆ ಕಾರ್ಯಗತ ಮಾಡಲು ಅನುಕೂಲವಾಗಲಿದೆ.
    ಸತೀಶ್, ಪಲಿಮಾರು ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts