More

    ಸಂಪಾದಕೀಯ: ಪಾಲಕರಿಗೆ ಹೊರೆ

    ಹೊಸ ಶೈಕ್ಷಣಿಕ ವರ್ಷ ಜೂನ್​ನಿಂದ ಆರಂಭವಾಗಲಿದೆ. ಈ ನಿಮಿತ್ತ ಶೈಕ್ಷಣಿಕ ಚಟುವಟಿಕೆಗಳು ಈಗಿನಿಂದಲೇ ವೇಗ ಪಡೆದುಕೊಂಡಿದ್ದು, ಬೆಲೆ ಏರಿಕೆಯ ಬಿಸಿ ಇಲ್ಲೂ ಜೋರಾಗಿ ತಟ್ಟಿದೆ. ವರ್ಷದಿಂದ ವರ್ಷಕ್ಕೆ ಈ ವೆಚ್ಚ ಹೆಚ್ಚುತ್ತಲೇ ಸಾಗಿರುವುದು ಕಳವಳಕಾರಿ. ಶಿಕ್ಷಣ ಎಲ್ಲರ ಕೈಗೆ ಎಟಕುವಂತಿರಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯ, ಭರವಸೆಯ ಮಾತುಗಳೆಲ್ಲ ಈ ಸಂದರ್ಭದಲ್ಲಿ ಪೊಳ್ಳಾಗಿ ಕಾಣುತ್ತಿವೆ. ಅಷ್ಟೇ ಅಲ್ಲ ಇಲ್ಲೂ ಉಳ್ಳವರು ಮತ್ತು ಇತರರ ನಡುವೆ ಕಂದಕ ನಿರ್ವಣವಾಗುತ್ತಿದೆ.

    ಶೈಕ್ಷಣಿಕ ಸಂಸ್ಥೆಗಳು ಅದರಲ್ಲೂ ಪಟ್ಟಣ ಮತ್ತು ಮಹಾನಗರಗಳಲ್ಲಿನ ಶಾಲಾ, ಕಾಲೇಜುಗಳು ಯಾವುದೇ ಮಾನದಂಡವನ್ನು ಪಾಲಿಸದೆ, ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರತಿ ವರ್ಷ ಶುಲ್ಕವನ್ನು ಶೇಕಡ 10ರಿಂದ 15ರಷ್ಟು ಹೆಚ್ಚಿಸುತ್ತಿರುವುದು ಪಾಲಕರಿಗೆ ಹೊರೆಯಾಗಿ ಪರಿಣಮಿಸಿರುವುದು ವಾಸ್ತವ. ಕೋವಿಡ್ ಅವಧಿ ನಂತರವಂತೂ ಶುಲ್ಕ ಏರಿಕೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಈ ಬಗ್ಗೆ ಪಾಲಕರು ಪ್ರಶ್ನೆ ಮಾಡಿದರೂ ಶೈಕ್ಷಣಿಕ ಸಂಸ್ಥೆಗಳು ಹಾರಿಕೆಯ ಉತ್ತರ ನೀಡಿ ಕೈತೊಳೆದುಕೊಳ್ಳುತ್ತವೆ. ಶಾಲೆಯನ್ನು ಬದಲಾಯಿಸುವುದು, ಹೊಸದಾಗಿ ಪ್ರವೇಶ ಪಡೆಯುವುದು ಇದೆಲ್ಲ ಪ್ರಕ್ರಿಯೆ ಮತ್ತೂ ದುಸ್ತರವಾಗುವುದರಿಂದ ಪಾಲಕರು ಅನಿವಾರ್ಯವಾಗಿ ಶುಲ್ಕ ಏರಿಕೆಯನ್ನು ಒಪ್ಪಿಕೊಳ್ಳುವಂಥ ಸ್ಥಿತಿ ಇದೆ. ಶಾಲಾ, ಕಾಲೇಜುಗಳ ಶುಲ್ಕ ನಿಗದಿ ವೈಜ್ಞಾನಿಕ ಮಾದರಿಯಲ್ಲಿ ರೂಪಿಸುವ ಮತ್ತು ಹೊರೆಯಾಗಿ ಪರಿಣಮಿಸದಂತೆ ಮಾಡುವ ಕಾಳಜಿ ಇಂದಿನ ದಿನಗಳಲ್ಲಿ ಅತ್ಯಗತ್ಯ.

    ಶುಲ್ಕ ಮಾತ್ರವಲ್ಲ ಈ ಬಾರಿ ಪಠ್ಯಪುಸ್ತಕಗಳು ಕೂಡ ದುಬಾರಿ. ಶಾಲಾ ಮಕ್ಕಳ ಸ್ಕೂಲ್ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಒಂದೇ ವಿಷಯವನ್ನು ಎರಡು ಭಾಗಗಳಾಗಿ ವಿಂಗಡಿಸಿ ಈ ಬಾರಿ ಪುಸ್ತಕ ಮುದ್ರಿಸಲು ತೀರ್ವನಿಸಿದೆ. ಇದರಿಂದ ಪಠ್ಯಪುಸ್ತಕಗಳ ಬೆಲೆ ಏರಿಕೆಯಾಗಲಿದ್ದು, ನೋಟ್​ಬುಕ್ ಮತ್ತಿತರ ಲೇಖನ ಸಾಮಗ್ರಿಗಳ ದರ ಕೂಡ ದುಬಾರಿ ಆಗಿರುವುದು ಪಾಲಕರಿಗೆ ಆಘಾತ ಉಂಟು ಮಾಡಿದೆ. ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗದವರ ಬಜೆಟ್​ನ್ನೇ ಇದು ಏರುಪೇರು ಮಾಡುತ್ತಿದೆ.

    ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಕೆಲ ಪುಸ್ತಕ ಹಾಗೂ ಚಟುವಟಿಕೆಗಳ ಪಠ್ಯವನ್ನು ಮತ್ತೆ ಮುದ್ರಣ ಮಾಡಲಾಗುತ್ತಿದೆ. ಈ ಮೊದಲು ಗಣಿತ, ಪರಿಸರ ಅಧ್ಯಯನ ಮೊದಲಾದ ವಿಷಯಗಳನ್ನು ಎರಡು ಭಾಗಗಳಾಗಿ ಮುದ್ರಿಸಲಾಗುತ್ತಿತ್ತು. ಈಗ ಭಾಷಾ ವಿಷಯವೂ ಸೇರಿ ಎಲ್ಲ ಪುಸ್ತಕಗಳನ್ನು ಎರಡು ಭಾಗಗಳಾಗಿ ಮುದ್ರಣ ಮಾಡುವಂತೆ ಆದೇಶ ನೀಡಲಾಗಿದೆ.

    ಶೈಕ್ಷಣಿಕ ಶುಲ್ಕ, ಪಠ್ಯಪುಸ್ತಕ, ಲೇಖನ ಸಾಮಗ್ರಿ ಎಲ್ಲವೂ ದುಬಾರಿಯಾದರೆ ವಿದ್ಯೆಪ್ರಾಪ್ತಿಯ ಕನಸಿಗೆ ಅಡ್ಡಿ ಉಂಟು ಮಾಡಿದಂತೆಯೇ ಸರಿ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಬೆಲೆ ಏರಿಕೆಯ ಹೊರೆಯನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

    ಹಿಂದೂ ಹುಡುಗಿಯರನ್ನು ಲವ್ ​ಯಾಕೆ ಮಾಡ್ತೀರಿ..? ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ: ಪ್ರಥಮ್​ ಆಕ್ರೋಶ

    ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts