More

    ಮೆಕ್ಕೆಜೋಳಕ್ಕೆ ಬಂಪರ್ ಬೆಲೆ!

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಮಳೆ ಕೊರತೆ, ಲದ್ದಿ ಹುಳು ಕಾಟದಿಂದ ಈ ಬಾರಿ ತಾಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಕಡಿಮೆ ಪ್ರಮಾಣದಲ್ಲಿ ಇಳುವರಿ ಬಂದಿದೆ. ಇದೇ ಕಾರಣಕ್ಕೋ ಏನೊ? ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಕೂಡ ಬಂದಿದೆ.

    ಸದ್ಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2200 ರೂ.ವರೆಗೂ ಬೆಲೆ ಬಂದಿದ್ದು, ಮಾರಾಟ ಜೋರಾಗಿಯೇ ನಡೆದಿದೆ. ಇದು ಕುಂದು ಕೊರತೆಗಳ ನಡುವೆಯೂ ನಾನಾ ಹೋರಾಟ ನಡೆಸಿ ಮೆಕ್ಕೆಜೋಳ ಉಳಿಸಿಕೊಂಡ ರೈತರಿಗೆ ವರದಾನವಾಗಿದೆ.

    ರೈತರು ಮೆಕ್ಕೆಜೋಳವನ್ನು ತಮ್ಮ ಜಮೀನು ಅಥವಾ ಒಣಗಿಸಲು ಹಾಕಿದ ಸ್ಥಳದಿಂದಲೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದು ಖರೀದಿಸುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಮಾರಾಟಕ್ಕೆ ಮುಂದಾಗಿದ್ದು, ಪ್ರತಿ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2 ಸಾವಿರ ರೂ.ನಿಂದ 2200 ರೂ.ವರೆಗೂ ಮಾರಾಟ ಆಗುತ್ತಿದೆ. ಹೀಗಾಗಿ ಸದ್ಯ ಎಪಿಎಂಸಿ ಹಾಗೂ ನಗರದ ಹೊರವಲಯದ ಸರ್ವೀಸ್ ರಸ್ತೆಯಲ್ಲಿ ಮೆಕ್ಕೆಜೋಳ ವಹಿವಾಟು ಭರದಿಂದ ಸಾಗಿದೆ.

    ಅಳಿದುಳಿದ ಮೆಕ್ಕೆಜೋಳಕ್ಕೆ ಬೆಲೆ…

    ತಾಲೂಕಿನ ನೀರಾವರಿ ಮಾಡಿಕೊಂಡು 20 ಸಾವಿರ ಹಾಗೂ ಮಳೆ ಆಶ್ರಿತ ಪ್ರದೇಶದಲ್ಲಿ 24 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ಪ್ರಸಕ್ತ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ಬಹಳಷ್ಟು ರೈತರು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜಗಳು ಮೊಳಕೆಯೊಡೆಯುವ ಮೊದಲೇ ಮುರುಟಿಹೋಗಿದ್ದವು.

    ಅಲ್ಲದೆ, ಕೆಲವರು ಬೆಳೆದ ಮೆಕ್ಕೆಜೋಳ ತೆನೆ ಕಟ್ಟಿದ್ದರೂ ಮಳೆ ಕೊರತೆಯಿಂದ ಒಣಗಿ ಹಾಳಾಗಿವೆ. ಇದರ ನಡುವೆಯೂ ನೀರಾವರಿ ಮಾಡಿಕೊಂಡು ಹಾಗೂ ಕೀಟ ಬಾಧೆಯನ್ನೂ ತೊಲಗಿಸಿ ಬೆಳೆ ಉಳಿಸಿಕೊಂಡ ರೈತರ ಮೆಕ್ಕೆಜೋಳ ಇದೀಗ ಕೈಗೆ ಬಂದಿದೆ. ಅಂಥ ರೈತರಿಗೆ ಸದ್ಯ ಮೆಕ್ಕೆಜೋಳ ವರದಾನವಾಗಿದೆ.

    ಉತ್ತಮ ಬೆಲೆ…

    2022ರ ಸೆಪ್ಟೆಂಬರ್​ನಿಂದ ಡಿಸೆಂಬರ್ ತಿಂಗಳವರೆಗೂ ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಆ ಸಾಲಿನ ಮುಂಗಾರು ಹಂಗಾಮಿನಲ್ಲಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 800 ರೂ.ವರೆಗೂ ಬೆಲೆ ಇಳಿಕೆಯಾಗಿತ್ತು. ಆಗ ರೈತರು 1,600 ರೂ.ಗೆ ಕ್ವಿಂಟಾಲ್​ನಂತೆ ದರ ನಿಗದಿ ಪಡಿಸಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಹೋರಾಟ ಸಹ ಮಾಡಿದ್ದರು. ಆದರೀಗ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದ್ದು, ಒಂದು ಕ್ವಿಂಟಾಲ್​ಗೆ 2200 ರೂ. ವರೆಗೂ ಮಾರಾಟವಾಗುತ್ತಿದೆ.

    ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಮೆಕ್ಕೆಜೋಳ ಫಸಲು ಕಡಿಮೆ ಪ್ರಮಾಣದಲ್ಲಿ ಬಂದಿದೆ. ಆದ್ದರಿಂದ ಬೇಡಿಕೆ ಬಂದಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ವ್ಯಾಪಾರಿಗಳು ಬಂದು ಖರೀದಿ ಮಾಡುತ್ತಿರುವ ಕಾರಣ ಬೆಲೆ ಏರಿಕೆಯಾಗಿದೆ. ರೈತರು ಎಪಿಎಂಸಿ ಅಥವಾ ಒಣಹಾಕಿದ ಸ್ಥಳದಿಂದ ಮೆಕ್ಕೆಜೋಳವನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮೆಕ್ಕೆಜೋಳ ವ್ಯಾಪಾರ ಚನ್ನಾಗಿ ನಡೆದಿದೆ. ಬೆಲೆಯೂ ಸದ್ಯ ಉತ್ತಮವಾಗಿದೆ.

    | ಪರಮೇಶ ನಾಯ್ಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ನೀರಾವರಿ ಮಾಡಿಕೊಂಡು 5 ಎಕರೆ ಮೆಕ್ಕೆಜೋಳ ಬೆಳೆದಿದ್ದೇವೆ. ಬೆಳೆ ಮಾರಾಟಕ್ಕೆ ಬರುವ ಸಮಯಕ್ಕೆ ಲದ್ದಿ ಹುಳು ಕಾಟದಿಂದ ಕೊಂಚ ಹಾಳಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿರುವ ಕಾರಣ ಕೈಗೆ ದೊರೆತ ಮೆಕ್ಕೆಜೋಳವನ್ನು ಎಪಿಎಂಸಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದೇವೆ. ಸಮಾಧಾನಕರ ಬೆಲೆ ದೊರೆತಿದೆ.

    | ಗಣೇಶಪ್ಪ ಸಾಲಿಮನಿ, ಮೆಕ್ಕೆಜೋಳ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts