More

    ಗುಂಡಿಮಯವಾದ ಜಿಲ್ಲಾ ರಸ್ತೆ

    ಬೈಲಹೊಂಗಲ: ಬೈಲಹೊಂಗಲ-ಎಂ.ಕೆ.ಹುಬ್ಬಳ್ಳಿ ಮಾರ್ಗ ಮಧ್ಯದ ಜಿಲ್ಲಾ ರಸ್ತೆಯಲ್ಲಿ ಭಾರಿ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದ್ದು, ಇದು ರಸ್ತೆಯೋ ಅಥವಾ ಕೆರೆಯೋ ಎಂಬ ಸಂಶಯ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಮೂಡಿದೆ.

    ಸುಗಮ ಸಂಚಾರದ ಉದ್ದೇಶದಿಂದ ಕೋಟ್ಯಂತರ ರೂ. ಖರ್ಚು ಮಾಡಿ ಮೂರ‌್ನಾಲ್ಕು ವರ್ಷಗಳ ಹಿಂದೆ ಈ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಆದರೆ, ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ರಸ್ತೆ ಹಾಳಾಗಿರುವುದು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ ಎಂಬುದು ಜನರ ಆರೋಪ.

    ಅನೇಕ ಗ್ರಾಮಗಳಿಗೆ ಸಂಪರ್ಕ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಹತ್ತಾರು ಹಳ್ಳಿಗಳನ್ನು ಸೇರುತ್ತದೆ. ಯರಡಾಲ ಕ್ರಾಸ್‌ದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದವರೆಗೆ ರಸ್ತೆಯಲ್ಲಿ ಗುಂಡಿಗಳ ನಿರ್ಮಾಣವಾಗಿದ್ದರಿಂದ ವಾಹನ ಸಂಚಾರರು ಪರದಾಡು ವಂತಾಗಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು, ಈ ಭಾಗದಲ್ಲಿ ಸಂಚರಿಸುವವರ ಗೋಳು ಹೇಳತೀರದಾಗಿರುತ್ತದೆ.

    ಕೇಳುವವರಿಲ್ಲ ಗೋಳು: ತಾಲೂಕಿನ ಯರಡಾಲ, ನೇಗಿನಹಾಳ, ಕುರಗುಂದ, ಹೊಳಿಹೊಸೂರ ಸೇರಿ ಸುತ್ತಮುತ್ತಲ ಗ್ರಾಮಗಳು ರೈತರು ಈ ಮಾರ್ಗದ ಮೂಲಕ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳಿ ಕೃಷಿಗೆ ಸಂಬಂಧಪಟ್ಟ ವ್ಯವಹಾರ ಮಾಡುತ್ತಾರೆ. ಆದರೆ, ರಸ್ತೆ ಹಾಳಾದ ಕಾರಣ ರೈತರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಅನೇಕ ಪ್ರಯಾಣಿಕರು ಈ ಹಿಂದೆ ಗುಂಡಿಗಳಲ್ಲಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ಅನೇಕ ಉದಾಹರಣೆಗಳಿವೆ. ರಾತ್ರಿ ಹೊತ್ತು ಎಷ್ಟೇ ಜಾಗೃತಿವಹಿಸಿದರೂ ರಸ್ತೆ ಅಪಘಾತ ಕಟ್ಟಿಟ್ಟ ಬುತ್ತಿ. ವೃದ್ಧರು, ಗರ್ಭಿಣಿಯರು ಇಲ್ಲಿ ಸಂಚರಿಸಲು ಹಿಂಜರಿಯುತ್ತಾರೆ. ಜೀವಕ್ಕೆ ಘಾತಕವಾದ ರಸ್ತೆ ದುರಸ್ತಿ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಹೆಚ್ಚಿನ ಅವಧಿ, ಕಡಿಮೆ ಸಂಚಾರ: ಅಧಿಕಾರಿಗಳ ನಿರ್ಲಕ್ಷೃದಿಂದ ಸುಮಾರು 16 ಕಿ.ಮೀ. ಅಂತರದ ರಸ್ತೆಯಲ್ಲಿ ತೆರಳಲು ಪ್ರಯಾಣಿಕರಿಗೆ ಸುಮಾರು ಒಂದು ಗಂಟೆ ಸಮಯ ತಗಲುತ್ತದೆ. ಈ ಕುರಿತು ಸಾರ್ವಜನಿಕರು ಅನೇಕ ಬಾರಿ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕುಂಟುನೆಪ ಹೇಳಿ ಕಾಲಹರಣ ಮಾಡುತ್ತಾರೆ ಎಂಬುದು ಪ್ರಯಾಣಿಕರ ಆರೋಪ. ಜಿಲ್ಲಾ ಕೇಂದ್ರಕ್ಕೆ ತೆರಳುವ ಈ ಮಾರ್ಗವನ್ನು ತೀರಾ ಕಡೆಗಣಿಸಿದ್ದು
    ಜನರು ಹಾಗೂ ಪ್ರಯಾಣಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಇದೇ ರಸ್ತೆಗೆ ಹೊಂದಿಕೊಂಡಿರುವ ನೇಗಿನಹಾಳ-ಬೇವಿನಕೊಪ್ಪ, ನೇಗಿನಹಾಳ-ಸಂಪ ಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಇದೇ ಪರಿಸ್ಥಿತಿಯಿದೆ. ಸಂಬಮಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

    ಯರಡಾಲ ಕ್ರಾಸ್‌ನಿಂದ ಎಂ.ಕೆ.ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಮಳೆಗಾಲ ಮುಗಿದ ಕೂಡಲೇ ಎಸ್‌ಎಸ್‌ಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.
    | ಮಹಾಂತೇಶ ದೊಡಗೌಡರ ಶಾಸಕರು ಚ.ಕಿತ್ತೂರು

    ರಸ್ತೆ ದುರಸ್ತಿಗೆ ಶಾಸಕರನ್ನು ಆಗ್ರಹಿಸ ಲಾಗಿದೆ. ಕ್ರಮಕ್ಕೆ ಮುಂದಾಗದಿದ್ದರೆ ಸುತ್ತಲಿನ ಗ್ರಾಮಸ್ಥರು ಸೇರಿ ಹೋರಾಟ ನಡೆಸುತ್ತೇವೆ.
    | ರವಿ ಅಂಗಡಿ ನೇಗಿನಹಾಳ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts