More

    ಕಟ್ಟಡ, ಮನೆ ನಿರ್ಮಾಣಕ್ಕೆ ಪೆಟ್ಟು

    ಗದಗ:ಕರೊನಾ ಎರಡನೇ ಅಲೆ ನಿಯಂತ್ರಿಸಲು 14 ದಿನಗಳ ಲಾಕ್​ಡೌನ್ ಅವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ, ಕಾರ್ವಿುಕರ ಸಮಸ್ಯೆ, ಕಾಮಗಾರಿಗೆ ಸಮರ್ಪಕವಾಗಿ ಸಾಮಗ್ರಿಗಳು ಸಿಗದಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಅದರಲ್ಲಿಯೂ ಮನೆ ನಿರ್ವಣಕ್ಕೆ ಲಾಕ್​ಡೌನ್ ದೊಡ್ಡ ಹೊಡೆತ ನೀಡಿದೆ.
    ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕರು ಬಸವ ಜಯಂತಿ ಹಬ್ಬದಂದು ಮನೆಯ ಗೃಹ ಪ್ರವೇಶ ಕಾರ್ಯ ನಡೆಸುವ ಚಿಂತನೆಯಲ್ಲಿದ್ದರು. ಇದೀಗ ಅವರಿಗೆಲ್ಲ ಸಕಾಲದಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೆ ಅನಿವಾರ್ಯವಾಗಿ ಗೃಹ ಪ್ರವೇಶ ಕಾರ್ಯ ಮುಂದೂಡುವಂತಾಗಿದೆ.
    ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಿದೆ. ಆದರೆ, ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ತರುವುದು ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ. ಮಾರುಕಟ್ಟೆ ಸಂಪೂರ್ಣ ಬಂದ್ ಇರುವುದರಿಂದ ಒಂದು ಸಾಮಾನು ಸಿಕ್ಕರೆ ಇನ್ನೊಂದು ಸಿಗುತ್ತಿಲ್ಲ. ಹೀಗಾಗಿ ಕಟ್ಟಡ ನಿರ್ವಣವನ್ನೆಲ್ಲ ಪೂರ್ಣಗೊಳಿಸಿ ವಿದ್ಯುತ್, ನೀರು, ಸುಣ್ಣ ಬಣ್ಣ ಕಾಮಗಾರಿ ಬಾಕಿ ಉಳಿಸಿಕೊಂಡಿದ್ದವರಿಗೆ ಒಂದು ಸಾಮಗ್ರಿ ಸಿಕ್ಕರೆ ಮತ್ತೊಂದು ಸಾಮಗ್ರಿ ಸಿಗದೆ ಪರದಾಡುವಂತಾಗಿದೆ. ಪೊಲೀಸರ ನೆಪ ಹೇಳಿ ಕಾರ್ವಿುಕರು ಸಹ ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ಜಿಲ್ಲಾದ್ಯಂತ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿವೆ. ಬಸವ ಜಯಂತಿಗೆ ಗೃಹ ಪ್ರವೇಶ ಕಾರ್ಯ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದ ಅನೇಕರು ಫಜೀತಿ ಅನುಭವಿಸುತ್ತಿದ್ದಾರೆ.
    ದುಬಾರಿ ಬೆಲೆಗೆ ಮಾರಾಟ: ಲಾಕ್​ಡೌನ್ ಕೆಲ ವ್ಯಾಪಾರಸ್ಥರಿಗೆ ಅನುಕೂಲವಾಗಿದ್ದು, ಸಿಮೆಂಟ್, ಕಬ್ಬಿಣ ಸೇರಿ ವಿವಿಧ ಸಾಮಗ್ರಿಗಳು ಫ್ಯಾಕ್ಟರಿಯಿಂದ ಪೂರೈಕೆಯಾಗುವುದು ವಿಳಂಬವಾಗುತ್ತಿದೆ ಎಂದು ಇರುವ ಸ್ಟಾಕ್​ಗಳನ್ನು ಕೊಂಚ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಇವೆ. ಹೊಸ ಸ್ಟಾಕ್ ಪೂರೈಕೆಯಾಗುತ್ತಿಲ್ಲ. ಕೇವಲ 4 ಗಂಟೆ ಕೆಲಸಕ್ಕೆ ಬರುವ ಕಾರ್ವಿುಕರಿಗೆ ನಾವು ಪೂರ್ತಿ ಸಂಬಳ ಕೊಡಬೇಕು. ಇದರಿಂದ ಅಲ್ಪಸ್ವಲ್ಪ ದರ ಏರಿಕೆ ಅನಿವಾರ್ಯವಾಗಿದೆ ಎಂದು ವ್ಯಾಪಾರಸ್ಥರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಮಲಪ್ರಭಾ, ತುಂಗಭದ್ರಾ ನದಿಯಲ್ಲಿ ಮರಳು ತೆಗೆಯಲಾಗುತ್ತಿದೆ. 21-22 ಸಾವಿರ ರೂ.ದಲ್ಲಿ ಸಿಗುತ್ತಿದ್ದ ಮರಳು ಇದೀಗ 28- 30 ಸಾವಿರ ರೂಪಾಯಿ ತಲುಪಿದೆ. ಇಷ್ಟು ಹಣ ತೆತ್ತು ಮರಳು ಖರೀದಿಸಿದರೂ ಕಾರ್ವಿುಕರಿಲ್ಲದೇ ಕೆಲಸ ನಡೆಯುತ್ತಿಲ್ಲ ಎಂದು ಜನರು ಗೋಳಾಡುತ್ತಿದ್ದಾರೆ.
    6ರಿಂದ 10ರವರೆಗೆ ಹಾರ್ಡ್​ವೇರ್ ಅಂಗಡಿ ಓಫನ್; ಮುಂಡರಗಿ, ರೋಣ, ಲಕ್ಷೆ್ಮೕಶ್ವರ, ಗಜೇಂದ್ರಗಡ ಮತ್ತು ನರಗುಂದ ಪಟ್ಟಣ ಮತ್ತು ತಾಲೂಕಿನಲ್ಲಿ ಮನೆ ನಿರ್ಮಾಣ ಕಾಮಗಾರಿಗಳು ಎಂದಿನಂತೆ ಸಾಗಿವೆ. ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆವರೆಗೆ ಹಾರ್ಡ್​ವೇರ್ ಅಂಗಡಿಗಳು ತೆರೆದಿರುತ್ತವೆ. ಈ ಸಂದರ್ಭದಲ್ಲಿ ಜನರು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಕೆಲಸವನ್ನು ಮುಂದುವರಿಸಿದ್ದಾರೆ. ಕಾರ್ವಿುಕರು ಬೆಳಗಿನ ವೇಳೆಯೇ ಕಾಮಗಾರಿ ಸ್ಥಳಕ್ಕೆ ತೆರಳಿ ಕೆಲಸ ಮುಗಿಸಿ ಸಂಜೆ ಮರಳುತ್ತಾರೆ. ಹೀಗಾಗಿ ಕಾಮಗಾರಿಗಳಿಗೆ ಸಮಸ್ಯೆಯಾಗಿಲ್ಲ. ಈ ಎಲ್ಲ ಅಡ್ಡಿ ಆತಂಕಗಳ ಮಧ್ಯೆಯೂ ಕೆಲವರು ಸಂಕ್ಷಿಪ್ತವಾಗಿ ಧಾರ್ವಿುಕ ವಿಧಾನಗಳ ಮೂಲಕ ಗೃಹಪ್ರವೇಶ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

    7-8 ಕಿಮೀ ದೂರ: ಕಟ್ಟಡ ಕಾಮಗಾರಿ ಸ್ಥಳವು ಮನೆಯಿಂದ ಸುಮಾರು 7-8 ಕಿಮೀ ದೂರದಲ್ಲಿದೆ. ಅಲ್ಲಿಗೆ ನಡೆದುಕೊಂಡು ಹೋಗಲು ಗಂಟೆಗಟ್ಟಲೇ ಸಮಯಾವಕಾಶ ಬೇಕು. ಅಲ್ಲದೆ, ಅಷ್ಟು ದೂರ ನಡೆದುಕೊಂಡು ಹೋದರೆ ಕೆಲಸ ಮಾಡುವುದಾದರೂ ಹೇಗೆ ಎಂದು ಕಾರ್ವಿುಕರು ಪ್ರಶ್ನಿಸುತ್ತಿದ್ದಾರೆ. ಸ್ವಂತ ವಾಹನಗಳನ್ನು ತೆಗೆದುಕೊಂಡು ಕೆಲಸದ ಸ್ಥಳಕ್ಕೆ ತೆರಳಬೇಕಾದರೆ ಪೊಲೀಸರು ಅವಕಾಶ ನೀಡಲ್ಲ. ನಡೆದುಕೊಂಡು ಹೋಗುವುದಾದರೆ ಹೋಗು, ಇಲ್ಲಾ ಮನೆಯಲ್ಲಿ ಇರು. ನಾಳೆಯಿಂದ ಬಂದರೆ ಬೈಕ್ ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಾರೆ. ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಮಾನವೀಯತೆಯಿಂದ ವಾಹನವನ್ನೂ ಬಿಟ್ಟು ಕಳಿಸುವ ಪೊಲೀಸರೂ ಇದ್ದಾರೆ. ಆದರೂ ನಿರ್ಭಯದಿಂದ ಸಂಚರಿಸಲು ಆಗುತ್ತಿಲ್ಲ ಎಂದು ಕಾರ್ವಿುಕರು ಗೋಳು ತೋಡಿಕೊಳ್ಳುತ್ತಾರೆ. ಕಾಮಗಾರಿ ಸ್ಥಳಕ್ಕೆ ಹೋಗಲು ಕಾರ್ವಿುಕರಿಗೆ ಬೈಕ್ ಅಥವಾ ಇತರೆ ವಾಹನ ಅವಶ್ಯವಿದೆ. ಆದರೆ, ಸರ್ಕಾರ ವಾಹನ ಬಳಸಬಾರದು ಎಂದು ವಾಸ್ತವತೆ ಅರಿವಿಲ್ಲದೇ ನಿಯಮ ರೂಪಿಸಲಾಗಿದೆ ಎಂದು ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಹಲವಾರು ಸಂಘ-ಸಂಸ್ಥೆಗಳವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಗೌಂಡಿ ಮೇಸ್ತ್ರಿ, ಬಾರಬೆಂಡರ್, ಪೇಂಟರ್, ಪ್ಲಂಬರ್, ಕಾರ್ಪೆಂಟರ್ ಇತರೆ ಕೆಲಸ ಮಾಡುವವರಿಗೆ ಬೈಕ್​ನಲ್ಲಿ ಓಡಾಡಲು ಅನುಮತಿ ನೀಡಬೇಕು.
    | ಎಂ.ಐ. ನವಲೂರ, ಅಧ್ಯಕ್ಷ, ಕಟ್ಟಡ ನಿರ್ಮಾಣ ಕಾರ್ವಿುಕರ ಮಹಾಸಂಘ ಗದಗ

    ಆರ್ಥಿಕ ನೆರವು ಘೊಷಿಸಲು ಒತ್ತಾಯ
    ಕರೊನಾ ನಿಯಂತ್ರಣಕ್ಕಾಗಿ ಮೊದಲು ಜನತಾ ಕರ್ಫ್ಯೂ ಹೇರಲಾಗಿತ್ತು. ಇದೀಗ ಸಂಪೂರ್ಣ ಲಾಕ್​ಡೌನ್ ಹೇರಿದ್ದರಿಂದ ಆಟೋ ಟ್ಯಾಕ್ಸಿ ಚಾಲಕರು, ಶ್ರಮಿಕರು ಬಿಪಿಎಲ್ ಕಾರ್ಡ್​ದಾರರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈ ವರ್ಗದ ಜನರಿಗೆ ಆರ್ಥಿಕ ನೆರವು ಘೊಷಿಸಬೇಕು ಎಂದು ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ಗೋವಿಂದ ಗೌಡರ ಒತ್ತಾಯಿಸಿದ್ದಾರೆ. ಆಟೋ-ಟ್ಯಾಕ್ಸಿ ಚಾಲಕರು ನಿತ್ಯ ತಮ್ಮ ವಾಹನ ಓಡಿಸಿಯೇ ಜೀವನ ನಡೆಸುತ್ತಾರೆ. ಇದೀಗ ಸರ್ಕಾರ ಯಾವುದೇ ವಾಹನಗಳನ್ನು ಬೀದಿಗಿಳಿಸಬೇಡಿ ಎಂದು ಆದೇಶಿಸಿದ್ದರಿಂದ ಅವರೆಲ್ಲರ ಬದುಕು ಬೀದಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೊಷಿಸಬೇಕು ಹಾಗೂ ಬಿಪಿಎಲ್ ಕುಟುಂಬಗಳಿಗೆ ಆಹಾರ ಧಾನ್ಯ ನೀಡುತ್ತಿದ್ದು, ಅವರಿಗೆ ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
    ಎಪಿಎಂಸಿ ಬಂದ್ ನಾಳೆ
    ಮೇ 14ರಂದು ರಂಜಾನ್ ನಿಮಿತ್ತ ಸರ್ಕಾರಿ ರಜೆ ಇರುವುದರಿಂದ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ಹಣ್ಣು, ಹೂವು, ತರಕಾರಿ, ದವಸ ಧಾನ್ಯಗಳ ವ್ಯಾಪಾರ-ವಹಿವಾಟು ಇರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆ ತಿಳಿಸಿದೆ.
    ನರೇಗಾ ಕಾಮಗಾರಿಗಳಿಗೆ ನೀಡಿಲ್ಲ ಅನುಮತಿ
    ಗದಗ: ಕೋವಿಡ್-19 ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಿಂದ ಮೇ 24ರ ವರೆಗೆ ನರೇಗಾ ಕಾಮಗಾರಿಗಳಿಗೆ ಅನುಮತಿ ನೀಡಿಲ್ಲ. ಆದರೆ, ಈ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳು ಜನರಿಂದ ಕೆಲಸದ ಬೇಡಿಕೆ ಅರ್ಜಿ ಸ್ವೀಕರಿಸಬೇಕು. ಮಹಾತ್ಮಾ ಗಾಂಧಿ ನರೇಗಾ ಅಧಿನಿಯಮದನ್ವಯ ಕೆಲಸದ ಬೇಡಿಕೆ ಸಲ್ಲಿಸಿದ 15 ದಿನಗಳೊಳಗೆ ಕೆಲಸ ನೀಡಬೇಕು. ಆದ್ದರಿಂದ ಈ ಅವಧಿಯಲ್ಲಿ ಕೆಲಸ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ಮೇ 25ರಿಂದ ಕೆಲಸ ನೀಡುವುದರಿಂದ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
    ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಲಿಕಾರರಿಂದ ನಮೂನೆ 6 ರಲ್ಲಿ ಕೆಲಸದ ಬೇಡಿಕೆ ಅರ್ಜಿ ಸ್ವೀಕರಿಸಬೇಕು. ಕೆಲಸದ ಬೇಡಿಕೆಗಳನ್ನು ಕ್ರೋಢೀಕರಿಸಿ, ಕೂಲಿಕಾರರಿಗೆ ಮೇ 25 ರಿಂದ ಗ್ರಾಮವಾರು ಕಾಮಗಾರಿಗಳನ್ನು ಆರಂಭಿಸಿ ಕೆಲಸ ನೀಡಬೇಕು. ಕೆಲಸ ನೀಡುವ ಸಂದರ್ಭದಲ್ಲಿ ಕೂಲಿಕಾರರನ್ನು 20-25 ಜನರ ಗುಂಪುಗಳಾಗಿ ವಿಂಗಡಿಸಿ ಕಾಮಗಾರಿ ಸ್ಥಳದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆಲಸ ನೀಡಲು ಕ್ರಮ ವಹಿಸಬೇಕು. ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಕೂಲಿಕಾರರಿಗೆ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ಕೆಲಸದ ಬೇಡಿಕೆ ಸಲ್ಲಿಸುವ ಕುರಿತು ವ್ಯಾಪಕವಾಗಿ ಅರಿವು ಮೂಡಿಸಬೇಕು. ಯೋಜನೆಯಡಿ ವಿತರಿಸಲಾದ ಜಾಬ್ ಕಾರ್ಡ್​ಗಳ ವ್ಯಾಲಿಡೇಷನ್ ಮತ್ತು ಅಪ್​ಡೇಷನ್ ಪ್ರಕ್ರಿಯೆಯನ್ನು ಎರಡು ವಾರಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.
    ದುರ್ಬಲ ಮತ್ತು ಯೋಜನೆಯ ಸೌಲಭ್ಯ ವಂಚಿತ ಜನರನ್ನು ಗುರುತಿಸಿ ಅವರಿಗೆ ಹೊಸ ಜಾಬ್ ಕಾರ್ಡ್​ಗಳನ್ನು ವಿತರಿಸಬೇಕು. 2021-22 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿನ ಎಲ್ಲಾ ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ಸಿದ್ಧಪಡಿಸಿ ಅಗತ್ಯ ಮಂಜೂರಾತಿಗಳನ್ನು ನೀಡಬೇಕು. ಕೂಲಿಕಾರರನ್ನು 15-20 ಜನರ ಗುಂಪುಗಳಾಗಿ ಸಂಘಟಿಸಿ, ಪ್ರತಿ ಗುಂಪಿನಲ್ಲಿ ಕಾಯಕ ಬಂಧುವನ್ನು ಗುರುತಿಸಬೇಕು. ಯಾವುದೇ ಕಾಮಗಾರಿಯನ್ನು ಯಂತ್ರಗಳಿಂದ ನಿರ್ವಹಿಸಿದರೆ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts