More

    ನಿರ್ಮಾಣ ಕಾಮಗಾರಿಗೆ ನೂರೆಂಟು ವಿಘ್ನ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಲಾಕ್‌ಡೌನ್ ಮರು ಪರಿಶೀಲನೆಯ ಮುಂದಿನ ಹಂತದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ವಿನಾಯಿತಿ ಒದಗಿಸುವ ಭರವಸೆ ಯೇನೋ ಸರ್ಕಾರದ ಕಡೆಯಿಂದ ದೊರೆತಿದೆ. ಆದರೆ ಹೇಗೆ ಆರಂಭಿಸುವುದು ಎನ್ನುವುದೇ ಗುತ್ತಿಗೆದಾರರು ಹಾಗೂ ಫಲಾನುಭವಿಗಳ ಸವಾಲು.
    ಮರಳು, ಕೆಂಪು ಕಲ್ಲು, ಜಲ್ಲಿ ಸಹಿತ ವಿವಿಧ ಸಾಮಗ್ರಿಗಳು ಬಹುತೇಕ ಎಲ್ಲ ಕಡೆ ಖಾಲಿಯಾಗಿವೆ. ಕಟ್ಟಡ ನಿರ್ಮಾಣ ಸಂದರ್ಭ ಸೆಂಟ್ರಿಂಗ್, ಸಾರಣೆ, ಕಲ್ಲು, ಮಣ್ಣು ಹೊತ್ತೊಯ್ಯಲು ಮುಂತಾದ ಕೆಲಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಉತ್ತರ ಕನ್ನಡ ಹಾಗೂ ಹೊರ ರಾಜ್ಯದ ಕೌಶಲ ರಹಿತ ಕಾರ್ಮಿಕರನ್ನು ಬಳಸಲಾಗುತ್ತದೆ. ದೊಡ್ಡ ಮಟ್ಟದ ಗುತ್ತಿಗೆದಾರರೇನೋ ಸ್ವಲ್ಪ ಮಟ್ಟಿನ ಕೌಶಲ ರಹಿತ ಕಾರ್ಮಿಕರಿಗೆ ಶೆಡ್ ನಿರ್ಮಿಸಿ ಆಶ್ರಯ ಒದಗಿಸಿ ವಾರದಲ್ಲಿ ಓರ್ವರಿಗೆ ಒಂದು ಸಾವಿರದಿಂದ ಎರಡು ಸಾವಿರ ರೂ. ತನಕ ಆರ್ಥಿಕ ನೆರವು ಒದಗಿಸಿ ಇಟ್ಟುಕೊಂಡಿದ್ದಾರೆ.

    ಕೌಶಲ ರಹಿತ ಕಾರ್ಮಿಕರ ಕೊರತೆ
    ಆದರೆ ದೊಡ್ಡ ಸಂಖ್ಯೆಯಲ್ಲಿರುವ ಮಧ್ಯಮ ಹಾಗೂ ಸಣ್ಣ ಗುತ್ತಿಗೆದಾರರು ಕೌಶಲ ರಹಿತ ಕಾರ್ಮಿಕರ ವಿಷಯದಲ್ಲೂ ತುಂಬಾ ತೊಂದರೆಯಲ್ಲಿ ಸಿಲುಕಲಿದ್ದಾರೆ. ಇವರ ಸ್ವಾಧೀನದಲ್ಲಿ ಕೌಶಲ ರಹಿತ ಕಾರ್ಮಿಕರ ತಂಡ ಇರುವುದಿಲ್ಲ. ಮಂಗಳೂರು ಹೊರವಲಯದ ಕೂಳೂರು, ಬಂಗ್ರಕೂಳೂರು, ಪಣಂಬೂರು ಮುಂತಾದ ಕಡೆ ಬೆಳಗ್ಗೆ ಸುಮಾರು 7.30ಕ್ಕೆ ಗುತ್ತಿಗೆದಾರರ ಜನ ಬಂದು ಅಲ್ಲಿ ಸೇರಿರುವ ಕಾರ್ಮಿಕರ ತಂಡವನ್ನು ಭೇಟಿ ಮಾಡಿ ಕೂಲಿ ನಿಗದಿಪಡಿಸಿ ಅವರನ್ನು ಕರೆದೊಯ್ದು ಕೆಲಸ ಮುಗಿದ ಬಳಿಕ ಅದೇ ಸ್ಥಳಕ್ಕೆ ಬಿಡುವುದು ಕ್ರಮ. ಆದರೆ ಇಂತಹ ದೊಡ್ಡ ಸಂಖ್ಯೆಯ ಕಾರ್ಮಿಕರು ಈಗಾಗಲೇ ಊರು ಬಿಟ್ಟಿದ್ದಾರೆ. ಅಲ್ಲೋ ಇಲ್ಲೋ ಉಳಿದ ಜನ ಊರಿಗೆ ಹೊರಡಲು ಲಾಕ್‌ಡೌನ್ ತೆರವಾಗಲು ಕಾಯುತ್ತಿದ್ದಾರೆ. ಅವರು ಊರಿಗೆ ಹೊರಟರೆ ಮಳೆಗಾಲ ಮುಗಿಯುವ ಮೊದಲು ವಾಪಸಾಗುವುದು ಅನುಮಾನ.

    ಅರ್ಧದಲ್ಲಿರುವ ಕಾಮಗಾರಿ
    ಜಿಲ್ಲೆಯೊಂದರಲ್ಲೇ ಸಾವಿರಾರು ವಾಸದ ಮನೆಗಳ ಕಾಮಗಾರಿ ಅರ್ಧದಲ್ಲಿವೆ. ಕೆಲವರು ಇರುವ ಮನೆಯನ್ನೇ ಪೂರ್ಣ ಕೆಡವಿ ಅಥವಾ ಭಾಗಶಃ ಕೆಡವಿ ಮನೆ ಕಟ್ಟಿಸುತ್ತಿದ್ದರು. ಮೇ ಮುಗಿಯುವ ಮೊದಲು ದೊಡ್ಡ ಮಳೆ ಶುರುವಾಗುವ ಸಾಧ್ಯತೆಯೇ ಅಧಿಕ. ಅಷ್ಟರೊಳಗೆ ಇಂತಹ ಮನೆಗಳ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ. ಆದ್ದರಿಂದ ಇಂತಹ ಮನೆ ಮಾಲೀಕರು ಸಂಕಷ್ಟ ಎದುರಿಸಲಿದ್ದಾರೆ. ಇದಲ್ಲದೆ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹಾಗೂ ಹೆದ್ದಾರಿ ಕಾಮಗಾರಿ ಕೂಡ ಲಾಕ್‌ಡೌನ್ ಪ್ರಯುಕ್ತ ಅರ್ಧದಲ್ಲೇ ನಿಂತಿದೆ.

    ಕಾಮಗಾರಿ ವೆಚ್ಚ ಹೆಚ್ಚಳ
    ಬದಲಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಕೊರತೆ ಉಂಟಾಗಿ ಬೆಲೆ ಏರಿಕೆ ಸಾಧ್ಯತೆ ಅಧಿಕ. ಇದರಿಂದ ಈಗಾಗಲೇ ನಿರ್ದಿಷ್ಟ ಮೊತ್ತಕ್ಕೆ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಸಮಸ್ಯೆ ಎದುರಿಸಲಿದ್ದಾರೆ. ಅಂತಿಮವಾಗಿ ಇದರ ಹೊಡೆತ ಕಟ್ಟಡ/ಮನೆ ನಿರ್ಮಿಸುತ್ತಿರುವವರ ಮೇಲೆಯೇ ಬೀಳಲಿದೆ.

    ಲಾಕ್‌ಡೌನ್ ಸಂದರ್ಭ ಹೆಚ್ಚು ತೊಂದರೆಗೆ ಒಳಗಾದ ಕ್ಷೇತ್ರಗಳಲ್ಲಿ ನಿರ್ಮಾಣ ಕ್ಷೇತ್ರ ಕೂಡ ಒಂದು. ಒಂದು ಕಡೆ ಮರಳು, ಕೆಂಪುಕಲ್ಲು ಮುಂತಾದ ಅಗತ್ಯ ಸಾಮಗ್ರಿಗಳ ಕೊರತೆ, ಕಾರ್ಮಿಕರ ಕೊರತೆ. ಹೋಟೆಲ್ಗಳು ತೆರೆಯದಿರುವುದರಿಂದಲೂ ಸಮಸ್ಯೆ. ಸಂಚಾರ- ಸಾಗಾಟ ವ್ಯವಸ್ಥೆ ಸರಾಗವಾಗಲು ಕೂಡ ಸಮಯ ಬೇಕು. ಮಳೆಗಾಲ ಸಮೀಪದಲ್ಲಿದೆ.
    ಪುರುಷೋತ್ತಮ ಕೊಟ್ಟಾರಿ
    ಅಧ್ಯಕ್ಷರು, ಸಿವಿಲ್ ಗುತ್ತಿಗೆದಾರರ ಸಂಘ, ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts