ರಾಯಚೂರು: ನಗರದ ಸಿಯಾತಲಾಬ್ ಬಡಾವಣೆಯಲ್ಲಿ ಸ್ಲಂ ಬೋರ್ಡ್‌ನ ಶಿಥಿಲಾವಸ್ಥೆಯಲ್ಲಿದ್ದ ಮನೆಗಳನ್ನು ತೆರವುಗೊಳಿಸಿದ ಮನೆಗಳನ್ನು ಮರು ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕ್ರಾಂತಿಯೋಗಿ ಶ್ರೀ ಬಸವೇಶ್ವರ ಸೇವಾ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಎಂಟು ತಿಂಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಮನೆಗಳನ್ನು ನಗರಸಭೆಯಿಂದ ತೆರವುಗೊಳಿಸಿ ಹೊಸ ಮನೆ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಇದುವರೆಗೂ ಮನೆ ನಿರ್ಮಾಣ ಮಾಡಲಾಗಿಲ್ಲ. ಇದ್ದ ಮನೆಗಳನ್ನು ತೆರವುಗೊಳಿಸಿದ್ದರಿಂದ ಬಡ ಜನರು ಶೆಡ್‌ಗಳಲ್ಲಿ ವಾಸ ಮಾಡುವಂತಾಗಿದ್ದು, ರಾತ್ರಿ ಸಮಯದಲ್ಲಿ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಜತೆಗೆ ಬೇಸಿಗೆ ಬರುತ್ತಿದ್ದು, ಟಿನ್‌ಶೆಡ್‌ನಲ್ಲಿ ವಾಸ ಮಾಡುವುದು ಸಮಸ್ಯೆಯಾಗಲಿದೆ. ಕಾರಣ ಕೂಡಲೇ ತೆರವುಗೊಳಿಸಲಾಗಿದ್ದ ಸ್ಥಳದಲ್ಲಿಯೇ ಜನರಿಗೆ ಹೊಸದಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಮೂಲಕ ಬಡ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಅಧ್ಯಕ್ಷ ಕೆ.ರಾಜೇಶಕುಮಾರ, ಪದಾಧಿಕಾರಿಗಳಾದ ಜಂಬಣ್ಣ, ರಾಜು, ವೀರೇಶ, ನಿವಾಸಿಗಳಾದ ದುರ್ಗಮ್ಮ, ಸಾವಿತ್ರಮ್ಮ, ಮಲ್ಲಮ್ಮ, ನಾಗಮ್ಮ, ಜಂಬಮ್ಮ, ಹುಲಿಗೆಮ್ಮ, ಕರಿಯಮ್ಮ ಪಾಲ್ಗೊಂಡಿದ್ರು.