More

    ಎಮ್ಮೆಗಳಿಗೊಂದು ಬ್ಯೂಟಿ ಪಾರ್ಲರ್!

    ಕೊಲ್ಲಾಪುರ ಕಾಪೋರೇಟರ್ ವಿಜಯ ಸೂರ್ಯವಂಶಿ ವಿನೂತನ ಪರಿಕಲ್ಪನೆ | ಮಹಿಷ ಕಾಳಜಿಗೆ ಮೆಚ್ಚುಗೆ

    ಇಮಾಮಹುಸೇನ್ ಗೂಡುನವರ

    ಬೆಳಗಾವಿ : ಹೆಣ್ಮಕ್ಕಳಿಗಾಗಿ ಬ್ಯೂಟಿ ಪಾರ್ಲರ್, ಪುರುಷರಿಗಾಗಿ ಮೆನ್ಸ್ ಪಾರ್ಲರ್ ಇರೋದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಗರ ಸೇವಕರೊಬ್ಬರು ಎಮ್ಮೆಗಳಿಗಾಗಿ ವಿಶೇಷ ಬ್ಯೂಟಿ ಪಾರ್ಲರ್ ಆರಂಭಿಸಿ ಗಮನ ಸೆಳೆದಿದ್ದಾರೆ. ಇಂಥ ಹೊಸ ಪ್ರಯತ್ನಕ್ಕೆ ಕೈ ಹಾಕಿ ಜಾನುವಾರು ಪ್ರೀತಿ ಮೆರೆಯುತ್ತಿರುವವರು ನಗರ ಸೇವಕ ವಿಜಯ ಸೂರ್ಯವಂಶಿ. ಮಂಗೇಶ್ಕರ್ ನಗರದಲ್ಲಿ ತಲೆ ಎತ್ತಿರುವ ಈ ಪಾರ್ಲರ್​ನಲ್ಲಿ ನಿತ್ಯ 50ಕ್ಕಿಂತ ಅಧಿಕ ಎಮ್ಮೆಗಳಿಗೆ ಸ್ನಾನ, ಎಣ್ಣೆಯಿಂದ ಮಸಾಜ್ ಮಾಡಲಾಗುತ್ತಿದೆ. ಮೂರು ವಾರಕ್ಕೊಮ್ಮೆ ಕೇಶ ಕತ್ತರಿಸಿ ಎಮ್ಮೆಗಳ ಅಂದ ಹೆಚ್ಚಿಸಲಾಗುತ್ತಿದೆ. 6 ತಿಂಗಳ ಹಿಂದೆ ಶುರುವಾದ ಪಾರ್ಲರ್​ನಲ್ಲಿ ಲಭ್ಯವಿರುವ ಸೇವೆಗಳೆಲ್ಲವೂ ಉಚಿತ ಎಂಬುದು ಗಮನಾರ್ಹ.

    ಎಮ್ಮೆಗಳಿಗೊಂದು ಬ್ಯೂಟಿ ಪಾರ್ಲರ್!ಪಾರ್ಲರ್​ನಲ್ಲಿ ರೈತರೇ ಎಮ್ಮೆಗಳಿಗೆ ಸ್ನಾನ ಮಾಡಿಸುತ್ತಾರೆ. ಮಸಾಜ್ ಮಾಡಿ ಕೇಶವನ್ನೂ ಕತ್ತರಿಸುತ್ತಾರೆ. ಪಾಲಿಕೆ ಜಾಗದಲ್ಲೇ ಪಾರ್ಲರ್ ಇದ್ದುದರಿಂದ ಪಾಲಿಕೆ ಸಿಬ್ಬಂದಿ ನಿರ್ವಹಣೆ ಮಾಡುತ್ತಾರೆ. ವಿದ್ಯುತ್ ಶುಲ್ಕವನ್ನಷ್ಟೇ ನಾನು ಭರಿಸುತ್ತೇನೆ. ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ 6 ನಗರ ಸೇವಕರು ತಂತಮ್ಮ ವಾರ್ಡ್​ಗಳಲ್ಲಿ ಈ ಮಾದರಿ ಪಾರ್ಲರ್ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ.
    | ವಿಜಯ ಸೂರ್ಯವಂಶಿ, ನಗರ ಸೇವಕ, ಕೊಲ್ಲಾಪುರ

    ಪಾರ್ಲರ್​ಗೆ ಹೊಂದಿಕೊಂಡಂತೆ ಎರಡು ಉದ್ಯಾನಗಳಿವೆ. ಪಾರ್ಲರ್​ಗೆ ಬರುವ ಎಮ್ಮೆಗಳು ಹಾಕುವ ಸಗಣಿಯನ್ನು ಗೊಬ್ಬರವಾಗಿ ಹಾಗೂ ಮೈತೊಳೆದ ನಿರುಪಯುಕ್ತ ನೀರನ್ನು ಆ ಉದ್ಯಾನಕ್ಕೆ ಬಳಸಲಾಗುತ್ತಿದೆ. ಎಮ್ಮೆಗಳ ಕೇಶವನ್ನು ಮರುಬಳಕೆ ಮಾಡಲಾಗುತ್ತದೆ. ಕೊಲ್ಲಾಪುರ ಮಹಾನಗರ ಪಾಲಿಕೆ 81 ವಾರ್ಡ್ ಹೊಂದಿದೆ. ಆ ಪೈಕಿ ವಿನೂತನ ಯೋಜನೆ ಜಾರಿಗಾಗಿ ಸೂರ್ಯವಂಶಿ ಪ್ರತಿನಿಧಿಸುವ ವಾರ್ಡ್ 44ಕ್ಕೆ ಪಾಲಿಕೆಯಿಂದ ಅಗ್ರಸ್ಥಾನ ಸಿಕ್ಕಿದೆ.

    15 ಲಕ್ಷ ರೂ. ವೆಚ್ಚ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಹೊಸ ಪರಿಕಲ್ಪನೆಯ ಯೋಜನೆಗಳಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಅನುದಾನ ನೀಡುತ್ತದೆ. ಈ ಅನುದಾನ ಬಳಸಿ ಹೊಸತೇನಾದರೂ ಮಾಡುವ ಇಚ್ಛೆ ನನ್ನಲ್ಲಿತ್ತು. ಕೈಗಾರಿಕೆಗಳ ತ್ಯಾಜ್ಯ ಹಾಗೂ ಜಾನುವಾರು ಮೈತೊಳೆಯುವುದರಿಂದ ಪಂಚಗಂಗಾ ನದಿ, ಕೆರೆ-ಕಟ್ಟೆ ಮತ್ತು ನಾಲೆ ಕಲುಷಿತಗೊಳ್ಳುತ್ತಿದ್ದವು. ಜಲಮೂಲ ಶುಚಿಗೊಳಿಸುವ ಸದಾಶಯದ ಜತೆಗೆ ರೈತರಿಗೂ ಅನುಕೂಲ ಕಲ್ಪಿಸಲು ಸರ್ಕಾರದ 15 ಲಕ್ಷ ರೂ. ಅನುದಾನದಲ್ಲಿ ಎಮ್ಮೆಗಳಿಗೆ ಸೀಮಿತವಾದಂಥ ಈ ಪಾರ್ಲರ್ ಆರಂಭಿಸಿದ್ದೇನೆ ಎನ್ನುತ್ತಾರೆ ವಿಜಯ ಸೂರ್ಯವಂಶಿ.

    ಇದನ್ನೂ ಓದಿ: ನಿತ್ಯಭವಿಷ್ಯ|ಈ ರಾಶಿಯವರು ಬಹುದಿನಗಳಿಂದ ನಿರೀಕ್ಷಿಸಿದ ಕಾರ್ಯವೊಂದು ಇಂದು ಸಫಲವಾಗಲಿದೆ..

    ಆರೋಗ್ಯ ತಪಾಸಣೆ: ನನ್ನ ವಾರ್ಡ್​ನಲ್ಲಿರುವ ರೈತರು 200ಕ್ಕೂ ಅಧಿಕ ಎಮ್ಮೆ ಹೊಂದಿದ್ದಾರೆ. ಎಮ್ಮೆಗಳ ಸ್ನಾನಕ್ಕಾಗಿ ಪಾರ್ಲರ್​ನಲ್ಲಿ ಷವರ್ ವ್ಯವಸ್ಥೆ ಮಾಡಲಾಗಿದೆ. ಪಾಲಿಕೆಗೆ ಸೇರಿದ ಬಾವಿ ನೀರು ಬಳಸಿ ಎಮ್ಮೆಗಳಿಗೆ ಸ್ನಾನ ಮಾಡಿಸುತ್ತಾರೆ. ಕೇಶ ಕತ್ತರಿಸುತ್ತಾರೆ. ಸರ್ಕಾರಿ ಆಸ್ಪತ್ರೆ ಪಶು ವೈದ್ಯರು ಆಗಾಗ್ಗೆ ಬಂದು ಎಮ್ಮೆಗಳ ಆರೋಗ್ಯ ತಪಾಸಣೆ ಮಾಡುತ್ತಾರೆ. ಪಾರ್ಲರ್ ಆರಂಭದಿಂದ ರೈತರಿಗೂ ಅನುಕೂಲವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಎಮ್ಮೆಗಳನ್ನು ಓಡಿಸುವ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಇದರಿಂದ ಎಮ್ಮೆಗಳ ಆರೋಗ್ಯ ರಕ್ಷಣೆಗೂ ಒತ್ತು ಸಿಗುತ್ತಿದೆ ಎನ್ನುತ್ತಾರೆ ವಿಜಯ ಸೂರ್ಯವಂಶಿ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಹುಲಿ ಸಂರಕ್ಷಿತ ಉದ್ಯಾನವನಗಳಿನ್ನು ಹೈಟೆಕ್ – ಸಚಿವ ಆನಂದ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts