More

    ಬಜೆಟ್ ಮಂಡನೆಗೆ ಡಿಸಿ ಸಜ್ಜು!

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಆರ್ಥಿಕ ಸಮಸ್ಯೆ, ಆದಾಯ ಸೋರಿಕೆ, ಚುನಾಯಿತ ಸದಸ್ಯರಿಲ್ಲದೆ ಅತಂತ್ರ ಸ್ಥಿತಿಯಲ್ಲಿರುವ ಮಹಾನಗರ ಪಾಲಿಕೆಯು 2020-21ನೇ ಸಾಲಿನ ಬಜೆಟ್ ಮಂಡಿಸಲು ಸಜ್ಜಾಗಿದೆ! ಆದರೆ, ಆರ್ಥಿಕ ವರ್ಷ ಮುಗಿಯುತ್ತಿದ್ದರೂ 8.69 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಉಳಿದಿದೆ.

    2019 ಮಾರ್ಚ್ 10ಕ್ಕೆ ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅಧಿಕಾರಾವಧಿ (ಐದು ವರ್ಷಗಳು) ಪೂರ್ಣಗೊಂಡಿದ್ದರೂ ಬಳಿಕ ಚುನಾವಣೆ ನಡೆದಿಲ್ಲ. ಹಾಗಾಗಿ ಸದ್ಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ 2020-21ನೇ ಸಾಲಿನ ಬಜೆಟ್ ಮಂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆರ್ಥಿಕ ವಿಭಾಗದ ಅಧಿಕಾರಿಗಳು ಬಜೆಟ್ ತಯಾರಿ ಆರಂಭಿಸಿದ್ದಾರೆ. ಮತ್ತೊಂದೆಡೆ ಬಜೆಟ್ ಕುರಿತು ಸಲಹೆ, ಸೂಚನೆ ಸಂಗ್ರಹಿಸಲು ಸಾರ್ವಜನಿಕರ, ಉದ್ಯಮಿಗಳು, ವೈದ್ಯರು, ಶಿಕ್ಷಣ ಸಂಸ್ಥೆಗಳ ಸಭೆ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಆರ್ಥಿಕ ಹೊರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 1.32 ಲಕ್ಷಕ್ಕೂ ಅಧಿಕ ಆಸ್ತಿಗಳಿಂದ ವಾರ್ಷಿಕ 35 ರಿಂದ 42 ಕೋಟಿ ರೂ. ವರೆಗೆ ಆದಾಯ ಗುರಿ ಹಾಕಿಕೊಳ್ಳಲಾಗುತ್ತಿದೆ. ಆದರೆ, ಪ್ರತಿವರ್ಷ ತೆರಿಗೆ ವಸೂಲಿ ಆಗುತ್ತಿರುವುದು ಶೇ. 78ರಷ್ಟು ಮಾತ್ರ. ಮತ್ತೊಂದೆಡೆ ವಾರ್ಷಿಕ ಬಜೆಟ್‌ಗಿಂತ 25 ರಿಂದ 30 ಕೋಟಿ ರೂ. ಹೆಚ್ಚುವರಿ ಕೆಲಸ ಕೈಗೊಂಡಿರುವುದೂ ಹೊರೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪಾಲಿಕೆಯ ಆಸ್ತಿಗೆ ತಕ್ಕಂತೆ ವಾರ್ಷಿಕ ಆದಾಯ ಕಡಿಮೆ ಆಗಿದೆ. ಗುತ್ತಿಗೆ ಮುಗಿದಿರುವ ಆಸ್ತಿಗಳನ್ನು ವಶಕ್ಕೆ ಪಡೆದು ಹೊಸದಾಗಿ ಬಾಡಿಗೆ ದರ ನಿಗದಿಸಿ, ವಸೂಲಿ ಮಾಡುವ ಕೆಲಸವೂ ಆಗುತ್ತಿಲ್ಲ.

    ಪಾಲಿಕೆ ಒಡೆತನದ 1.32 ಲಕ್ಷ ಆಸ್ತಿಗಳಲ್ಲಿ ಶೇ. 54ರಷ್ಟು ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದೆ. ಬಾಡಿಗೆ ದರ ಬದಲಾಗಿಲ್ಲ. ಇನ್ನೂ ಬಹುತೇಕ ಆಸ್ತಿಗಳ ಮರುಮೌಲ್ಯಮಾಪನ ನಡೆಸಿ ವ್ಯತ್ಯಾಸದ ತೆರಿಗೆ ಹಣ ವಸೂಲಿ ಮಾಡುವ ಕೆಲಸ ಅರ್ಧದಲ್ಲಿಯೇ ಮೊಟಕುಗೊಂಡಿದೆ. ಹೀಗಾಗಿ ವಾರ್ಷಿಕ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಪಾಲಿಕೆ ಮಾಜಿ ಸದಸ್ಯರು ದೂರಿದ್ದಾರೆ.

    ವೇತನ ಪಾವತಿಗೂ ತೊಡಕು: ಕಳೆದ ನಾಲ್ಕೈದು ವರ್ಷ ಅವಧಿಯಲ್ಲಿ ಪಾಲಿಕೆ ಮಂಡಿಸಿರುವ ಬಜೆಟ್‌ನಲ್ಲಿ ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಿವೆ. 2016ರಲ್ಲಿ 28 ಕೋಟಿ ರೂ., 2017ರಲ್ಲಿ 34ಕೋಟಿ ರೂ., 2018ರಲ್ಲಿ 36 ಕೋಟಿ ರೂ. ಆದಾಯ ಬಂದಿದೆ. ಆದರೆ, ಪ್ರತಿವರ್ಷ ತೆರಿಗೆ ವಸೂಲಾತಿಯಲ್ಲಿ 5 ರಿಂದ 6 ಕೋಟಿ ರೂ. ವರೆಗೆ ಬಾಕಿ ಉಳಿಯುತ್ತಿದೆ. ಇದರಿಂದ ಆದಾಯ ನಂಬಿಕೊಂಡು ಹಾಕಿಕೊಂಡಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಪಾಲಿಕೆಯ ವ್ಯಾಪ್ತಿಯ ಗುತ್ತಿಗೆದಾರರ ಬಳಿ 1099 ಹೊರಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವುದು ಕಷ್ಟವಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    2020-21ನೇ ಸಾಲಿನ ಬಜೆಟ್ ಮಂಡನೆ ಮುನ್ನ ಸಾರ್ವಜನಿಕರ, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆಯುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಡಳಿತಾಧಿಕಾರಿ

    ಪಾಲಿಕೆಯ 2020-21ನೇ ಸಾಲಿನ ಬಜೆಟ್ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿ ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜ್ಯ ಸರ್ಕಾರದ ಬಜೆಟ್ ಮಂಡನೆಗೂ ಮತ್ತು ಪಾಲಿಕೆ ಬಜೆಟ್ ಮಂಡನೆಗೂ ಯಾವುದೇ ಸಂಬಂಧ ಇಲ್ಲ.
    | ಕೆ.ಎನ್. ಜಗದೀಶ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts