More

    ರೂ. (ಸಿಂಬಲ್ ಹಾಕಿ) 10.23 ಲಕ್ಷ ಮಿಗತೆ ಬಜೆಟ್, ಉಳ್ಳಾಲ ನಗರಸಭೆ ಚೊಚ್ಚಲ ಆಯವ್ಯಯ ಮಂಡನೆ

    ಉಳ್ಳಾಲ: ನಗರಸಭೆಗೆ ನೂತನ ಆಡಳಿತ ಮಂಡಳಿ ಬಂದ ಬಳಿಕ ಪ್ರಥಮ ಬಜೆಟ್ ಮಂಡನಾ ಸಭೆ ಗುರುವಾರ ನಡೆಯಿತು. ಪೌರಾಯುಕ್ತ ರಾಯಪ್ಪ 10.23 ಲಕ್ಷ ರೂ. ಮೊತ್ತದ ಉಳಿತಾಯ ಆಯವ್ಯಯ ಮಂಡಿಸಿದರು. ವಿವಿಧ ಮೂಲಗಳಿಂದ 16.28 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ 4.32 ಕೋಟಿ, ನೀರಿನ ಶುಲ್ಕ 1.80 ಕೋಟಿ, ವಾಣಿಜ್ಯ ಮಳಿಗೆ ಬಾಡಿಗೆ ಶೇ.2ರಷ್ಟು ದಂಡ ವಿಧಿಸಿ 64.38 ಲಕ್ಷ, ಕಟ್ಟಡ ಪರವಾನಗಿ ಮತ್ತು ಅಭಿವೃದ್ಧಿ ಶುಲ್ಕ 29.75 ಲಕ್ಷ, ಉದ್ದಿಮೆ ಪರವಾನಗಿ 25 ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಶುಲ್ಕ 52 ಲಕ್ಷ, ಪೆರ್ಮನ್ನೂರು ಸ್ಟಾಲ್ ಮತ್ತು ನೆಲಬಾಡಿಗೆ 11.61 ಲಕ್ಷ, ಖಾತೆ ಬದಲಾವಣೆ 9.45 ಲಕ್ಷ, ಜಾಹಿರಾತು ಶುಲ್ಕ 3.80 ಲಕ್ಷ, ಒಣಕಸ ಮತ್ತು ಗೊಬ್ಬರ ಮಾರಾಟ 1 ಲಕ್ಷ ಹಾಗೂ ಇತರ ಮೂಲಗಳಿಂದ 99.54 ಲಕ್ಷ ಸಹಿತ 9.10 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

    ಸರ್ಕಾರದ ಎಸ್‌ಎಫ್‌ಸಿ ಮುಕ್ತನಿಧಿಯಿಂದ 52.75 ಲಕ್ಷ, ವೇತನ ಅನುದಾನ 1.50 ಕೋಟಿ, ಕುಡಿಯುವ ನೀರಿಗಾಗಿ 5 ಲಕ್ಷ, ವಿದ್ಯುಚ್ಛಕ್ತಿ ಅನುದಾನ 2.32 ಕೋಟಿ, 15ನೇ ಹಣಕಾಸು ಆಯೋಗದಿಂದ 2.50 ಕೋಟಿ, ಸ್ವಚ್ಛ ಭಾರತ್ ಮಿಶನ್‌ನಿಂದ 10 ಲಕ್ಷ, ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿಯಿಂದ 10 ಲಕ್ಷ, ಡೇನಲ್ಮ್-ವಾಜಪೇಯಿ ವಸತಿಯಿಂದ 4 ಲಕ್ಷ, ಇತರ ಮೂಲಗಳಿಂದ 5 ಲಕ್ಷ ಸಹಿತ ಒಟ್ಟು 7.18 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.

    ನೀರು ಸರಬರಾಜಿಗೆ 1.31 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1.45 ಕೋಟಿ, ರುದ್ರಭೂಮಿ ಅಭಿವೃದ್ಧಿಗೆ 53.61 ಲಕ್ಷ, ಬೀದಿದೀಪಗಳ ನಿರ್ವಹಣೆಗೆ 36.90 ಲಕ್ಷ, ಸಾರ್ವಜನಿಕ ಆರೋಗ್ಯಕ್ಕೆ 24.04 ಲಕ್ಷ, ಆಡಳಿತ ವೆಚ್ಚಕ್ಕೆ 38.50 ಲಕ್ಷ, ಉದ್ಯಾನ ಮತ್ತು ಮಾರುಕಟ್ಟೆ ನಿರ್ವಹಣೆಗೆ 50 ಸಾವಿರ, ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣದಡಿ ಎಸ್‌ಸಿಎಸ್‌ಟಿಗೆ 16 ಲಕ್ಷ, ಶೇ.7.25ರಡಿ 2.48ಲಕ್ಷ, ಅಂಗವಿಕಲರ ಕಲ್ಯಾಣಕ್ಕೆ ರೂ.1.71 ಲಕ್ಷ ಎಸ್‌ಎಫ್‌ಸಿ ನಿಧಿಯಡಿ ನಿರೀಕ್ಷಿಸಲಾಗಿದ್ದು, ನಗರಸಭಾ ಯೋಜನೆಯಡಿ ರೂ 18.80 ಲಕ್ಷ ಮತ್ತು 3.07 ಲಕ್ಷ ಅನುದಾನ ಮೀಸಲಿಡಲಾಗಿದೆ. ರಸ್ತೆ ಮತ್ತು ಚರಂಡಿ ನಿರ್ವಹಣೆಗೆ 1.95 ಕೋಟಿ, ವಾರ್ಡ್ ಅಭಿವೃದ್ಧಿಗಾಗಿ ತಲಾ ರೂ.ಏಳು ಲಕ್ಷ ಅನುದಾನ ಮೀಸಲಿಡಲಾಗಿದೆ.

    ಅನುದಾನ ಹೆಚ್ಚಳಕ್ಕೆ ಒತ್ತಾಯ: ಪ್ರತಿ ಕೌನ್ಸಿಲರ್‌ಗೆ ಕನಿಷ್ಠ 10 ಲಕ್ಷ ರೂ. ಅನುದಾನ ಮೀಸಲಿಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಎಲ್ಲಿ ಅಗತ್ಯವಿದೆಯೂ ಅಲ್ಲಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಇದು ನಗರಸಭೆ ಆದಾಯದಿಂದ ನೀಡುವಂಥದ್ದು ಎಂದು ಪೌರಾಯುಕ್ತ ರಾಯಪ್ಪ ಸಮಜಾಯಿಷಿ ನೀಡಿದರು. ನಗರಭಾ ಅಧ್ಯಕ್ಷೆ ಚಿತ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಉಪಸ್ಥಿತರಿದ್ದರು.

    ಅಂಗಡಿಗಳ ಮರು ಏಲಂ: 4 ಕೋಟಿ ರೂ.ನಷ್ಟು ತೆರಿಗೆ ಬಾಕಿಯಿದ್ದು, ಈ ವರ್ಷ ಮೂರೂವರೆ ಕೋಟಿಯಾದರೂ ವಸೂಲಿ ಮಾಡುತ್ತೇವೆ. ತೆರಿಗೆ ಬಾಕಿಯಿದ್ದವರಿಗೆ ಸೂಚನೆ ನೀಡಿ ಕಟ್ಟದಿದ್ದರೆ ಪತ್ರಿಕಾ ಪ್ರಕಟಣೆ ನೀಡುತ್ತೇವೆ. ತೆರಿಗೆ ವಸೂಲಾತಿ ವಿಚಾರದಲ್ಲಿ ಸದಸ್ಯರು ಸಹಕಾರ ನೀಡಬೇಕು. ಅಂಗಡಿಗಳನ್ನು ಒಳಬಾಡಿಗೆ ನೀಡಿ ಬಾಕಿಯಿಡಲಾಗಿದ್ದು ಅಂಥವುಗಳಿಗೆ ಬೀಗ ಹಾಕಿ ಮರು ಏಲಂ ಕರೆಯಲಾಗುವುದು ಎಂದು ರಾಯಪ್ಪ ಎಚ್ಚರಿಸಿದರು. ಒಂಬತ್ತುಕೆರೆ ಆಶ್ರಯ ಯೋಜನೆ ಮನೆಗಳ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ವಾರ ಅದು ಇತ್ಯರ್ಥವಾಗಲಿದೆ. ಬಳಿಕ ಈಗಿರುವ ಮನೆಗಳನ್ನು ತೆಗೆದು ಹೊಸ ಮನೆಗಳನ್ನು ನಿರ್ಮಿಸಲಾಗುವುದು ಎಂದರು.

    ಮಾತಿನ ಚಕಮಕಿ: ಈ ಬಜೆಟ್ ಬಡವರ ಪಾಲಿನ ಮರಣ ಶಾಸನ. ಇಲ್ಲಿ ಆಡಳಿತ ಪಕ್ಷದ 10 ಸದಸ್ಯರು ಮಾತ್ರ ಇದ್ದಾರೆ. ವಿಪಕ್ಷದ 18 ಸದಸ್ಯರಿದ್ದಾರೆ. ಮೂರು ವರ್ಷ ತೆರಿಗೆ ಹೆಚ್ಚಳ ಮಾಡಬಾರದೆಂಬ ನಿರ್ಣಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗಿದೆ. ಆದರೆ ಬಜೆಟ್‌ನಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಇದನ್ನು ನಾವು ಸಮರ್ಥಿಸುವುದಿಲ್ಲ. ಇದು ಉಳಿತಾಯ ಬಜೆಟ್ ಅಲ್ಲ, ರೂ. ಎರಡು ಕೋಟಿ ನಷ್ಟದ ಬಜೆಟ್ ಎಂದು ಸದಸ್ಯ ದಿನಕರ್ ಉಳ್ಳಾಲ್ ಟೀಕಿಸಿದರು. ಆಕ್ರೋಶಗೊಂಡ ರಾಯಪ್ಪ, ಬಜೆಟ್‌ನಲ್ಲಿ ನಾವು ತೆರಿಗೆ ಹೆಚ್ಚಿಸಿಲ್ಲ, ಮೂರು ವರ್ಷಗಳಿಂದ ಬಾಕಿಯಿರುವ ತೆರಿಗೆ ವಸೂಲಾತಿಗೆ ಕ್ರಮ ಕೈಗೊಂಡಿದ್ದೇವೆ ಅಷ್ಟೇ. ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ನೀವು ಒಳ್ಳೆಯ ಸಲಹೆ ಕೊಡಿ, ಅಳವಡಿಸಿಕೊಳ್ಳುತ್ತೇವೆ ಎಂದರು.

    ಅನುಮೋದನೆಗೆ ಅಡ್ಡಿ: ಕೊನೆಯಲ್ಲಿ ಬಜೆಟ್‌ಗೆ ಅನುಮೋದನೆ ನೀಡುವ ಸಂಬಂಧ ಅಧ್ಯಕ್ಷರು ಅನುಮತಿ ಕೇಳಿದರು. ಅದಾಗಲೇ ಕಾಂಗ್ರೆಸ್‌ನ ಮೂವರು ಸದಸ್ಯರ ಸಹಿತ ಏಳು ಮಂದಿ ವಿವಿಧ ಕಾರಣ ನೀಡಿ ಸಭೆಯಿಂದ ನಿರ್ಗಮಿಸಿದ್ದರು. ಇದನ್ನೇ ಮುಂದಿಟ್ಟುಕೊಂಡ ದಿನಕರ್, ನಿಮ್ಮ ಮೂವರು ಸದಸ್ಯರು ಸಭೆಯಿಂದ ಹೊರಹೋಗಿದ್ದು, ಅವರು ಬಜೆಟ್ ವಿರುದ್ಧ ಇದ್ದಾರೆ ಎಂದರು. ಪೌರಾಯುಕ್ತ, ಅಧ್ಯಕ್ಷ, ಉಪಾಧ್ಯಕ್ಷರ ಸಮಜಾಯಿಷಿ ಕೇಳದ ಅವರು, ಬಜೆಟ್ ಅನುಮೋದನೆಯನ್ನು ಮತಕ್ಕೆ ಹಾಕಿ ಎಂದರು. ಆದರೆ ಇದಕ್ಕೆ ಯಾರಿಂದಲೂ ಬೆಂಬಲ ಸಿಗದ ಕಾರಣ ಬಜೆಟ್‌ಗೆ ಅನುಮೋದನೆ ನೀಡಿ ಸಭೆ ಮುಗಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts