More

    ಸೇತುವೆಯಾದರೂ ಸಂಚಾರಕ್ಕಿಲ್ಲ ಭಾಗ್ಯ

    ಕುಂದಾಪುರ: ನಾಡಾ -ಮೊವಾಡಿ ನಿವಾಸಿಗಳ ಹಲವು ದಶಕಗಳ ಕನಸು ಸೇತುವೆ ನಿರ್ಮಾಣ ಮೂಲಕ ಈಡೇರಿದರೂ ಸಂಪರ್ಕ ರಸ್ತೆ ಆಗದೆ ಸಂಚಾರ ಸಮಸ್ಯೆ ಇನ್ನೂ ಮುಗಿದಿಲ್ಲ.
    ನಾಡಾ -ಮೊವಾಡಿ ಮಧ್ಯೆ ಸೌಪರ್ಣಿಕಾ ನದಿ ಹರಿಯುತ್ತಿದ್ದು, ದೋಣಿ ಕಳುವಿನ ಬಳಿಕ ಸೇತುವೆ ನಿರ್ಮಿಸಲಾಗಿದೆ. ಮೊವಾಡಿ ನಿವಾಸಿಗಳು ವಾಣಿಜ್ಯ ವ್ಯವಹಾರ, ಆಸ್ಪತ್ರೆ ಇನ್ನಿತರ ವ್ಯವಸ್ಥೆಗಳಿಗೆ ನಾಡಾವನ್ನೇ ನೆಚ್ಚಿಕೊಂಡಿದ್ದು, ಬೇಸಿಗೆಯಲ್ಲಿ ದೋಣಿ ಮೂಲಕ ಸಾಗುತ್ತಾರೆ. ಮಳೆಗಾಲದಲ್ಲಿ ನೆರೆ, ನದಿಯ ಅಬ್ಬರಕ್ಕೆ ದೋಣಿಗೆ ಕಡ್ಡಾಯ ರಜೆ ಇರುವುದರಿಂದ ಸಮಸ್ಯೆ.

    ಇಲ್ಲಿನ ಸಂಪರ್ಕ ಸಮಸ್ಯೆ ಮುಕ್ತಿಗೆ ಸೌಪರ್ಣಿಕಾ ನದಿಗೆ ಸೇತುವೆ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಜನರ ಆಶಯ. ಜನ ಪ್ರತಿಭಟನೆ, ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ಕೊಟ್ಟ ಬಳಿಕ ಸೇತುವೆಯೇನೋ ನಿರ್ಮಾಣವಾಯಿತು. ಆದರೆ ಮೊವಾಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಬೆಸೆಯುವ 2 ಕಿ.ಮೀ. ರಸ್ತೆ ಬಾಕಿಯಾಗಿದ್ದರಿಂದ ಸೇತುವೆ ಆದರೂ ಸಂಚಾರಕ್ಕೆ ಕಾಲ ಕೂಡಿಬಂದಿಲ್ಲ.

    9.29 ಕೋಟಿ ರೂ. ವೆಚ್ಚದಲ್ಲಿ ಸೇತುವೆ
    ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ 9.29 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಉದ್ದ 150 ಮೀಟರ್. ಸೇತುವೆಗೆ ಏಳು ಪಿಲ್ಲರ್ ಇದ್ದು, ಸೇತುವೆ ಎರಡೂ ಬದಿಯಲ್ಲಿ 35 ಮೀಟರ್ ರಸ್ತೆ ಗುತ್ತಿಗೆ ಪಡೆದ ಗುತ್ತಿಗೆದಾರರೇ ಮಾಡಬೇಕಿದ್ದು, ಮಾರ್ಚ್ ಅಂತ್ಯದಲ್ಲಿ ಗುತ್ತಿಗೆದಾರರು ಬಿಟ್ಟುಕೊಡಲಿದ್ದಾರೆ. ನಾಡಾ ಬದಿಯಿಂದ ಸೇತುವೆ ಸಂಪರ್ಕ ಮಾಡುವ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮೊವಾಡಿ ಬದಿ ಸ್ವಲ್ಪ ದೂರ ಡಾಂಬರು ರಸ್ತೆಯಿದ್ದರೂ ಅದು ಹದಗೆಟ್ಟಿದೆ. ತೋಟದಲ್ಲಿ ಸಣ್ಣದೊಂದು ಸೇತುವೆ ಆಗಬೇಕಿದ್ದು, ಪರಿಸರದ ಜನ ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಟ್ಟಿದ್ದಾರೆ.

    ಮೊವಾಡಿಯಿಂದ ರಾಷ್ಟ್ರೀಯ ಹೆದ್ದಾರಿ-66 ಸಂಪರ್ಕ ಬಳಿ ಡೈವರ್ಶನ್ ಇಲ್ಲದಿರುವುದು ಸಮಸ್ಯೆ ಉಂಟು ಮಾಡಿದೆ. ಮೊವಾಡಿಯಿಂದ ಕುಂದಾಪುರ ಕಡೆಗೆ ಹೋಗುವವರಿಗೆ ಸಮಸ್ಯೆ ಇಲ್ಲ. ಆದರೆ ಕುಂದಾಪುರದಿಂದ ಬರುವವರು ತ್ರಾಸಿಗೆ ಹೋಗಿ ತಿರುಗಿ ಬರಬೇಕು. ಆಂಡರ್‌ಪಾಸ್‌ನಲ್ಲಿ ಲಘು ಮತ್ತು ದ್ವಿಚಕ್ರ ವಾಹನಕ್ಕೆ ಮಾತ್ರ ಅವಕಾಶವಿದೆ. ಮೊವಾಡಿ ಕ್ರಾಸ್ ಬಳಿ ರಸ್ತೆ ವಿಭಜಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
    ರೆನ್ಸವಲ್ ಫಿರೇರ, ತ್ರಾಸಿ ಗ್ರಾಪಂ ಸದಸ್ಯ

    ರಸ್ತೆ ನಿರ್ಮಾಣಕ್ಕೆ ನಾವು ಜಾಗ ಬಿಟ್ಟುಕೊಟ್ಟಿದ್ದೇವೆ. ಸೇತುವೆಯಿಂದ ಮೊವಾಡಿ ಶಾಲೆ ತನಕ 18 ಅಡಿಯ ರಸ್ತೆ ಮಾಡಿದರೆ ನಾಡಾ, ಮೊವಾಡಿ ನಿವಾಸಿಗಳಿಗೆ ಬೈಂದೂರು, ಕುಂದಾಪುರ, ಗಂಗೊಳ್ಳಿ ಮತ್ತಷ್ಟು ಹತ್ತಿರವಾಗಲಿದೆ. ಮೊವಾಡಿ ಸಂಪರ್ಕ ಮಾಡಲು 35 ಲಿಂಕ್ಸ್ ಸರ್ಕಾರಿ ಜಾಗವಿದ್ದು, ಅದನ್ನು ಬಿಡಿಸಿಕೊಂಡು ರಸ್ತೆ ನಿರ್ಮಿಸಬೇಕು. ಎಂಟು ಅಡಿ ಅಗಲ ತೋಡು ಕೂಡ ರಸ್ತೆ ಬದಿಯಲ್ಲಿದ್ದು, ತೋಡಿಗೆ ನಾಲ್ಕು ಲಿಂಕ್ ಬಿಟ್ಟು ರಸ್ತೆ ಮಾಡಲು ಅವಕಾಶವಿದೆ. ರಸ್ತೆಯಾದರೆ ಸಂಚಾರ ವ್ಯವಸ್ಥೆ ಸುಧಾರಿಸಲಿದೆ.
    ಅನಿಲ್ ಲೂವಿಸ್, ಕೃಷಿಕ, ಮೊವಾಡಿ

    ಮೊವಾಡಿ ಸೇತುವೆ ಬೆಸೆಯುವ ಒಂದು ಕಡೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮೊವಾಡಿ ಬದಿ ರಸ್ತೆ ಕ್ಲಿಯರೆನ್ಸ್ ಮಾಡಲು ಸ್ಥಳಕ್ಕೆ ಇಂಜಿನಿಯರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಸರ್ವೇ ಮಾಡಿ ಸರ್ಕಾರಿ ಜಾಗ ಬಿಡಿಸಿಕೊಂಡು ಆದಷ್ಟು ಬೇಗ ರಸ್ತೆ ನಿರ್ಮಿಸಿ ಸಂಚಾರ ಮುಕ್ತ ಮಾಡಲಾಗುತ್ತದೆ. ಮೊವಾಡಿ ಕ್ರಾಸ್ ಡೈವರ್ಶನ್ ಬಗ್ಗೆ ಹೆದ್ದಾರಿ ಅಭಿವೃದ್ಧಿ ನಿಗಮದೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರದ ಪ್ರಯತ್ನ ಮಾಡಲಾಗುತ್ತದೆ.
    ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts