More

    ಸೇತುವೆ ಮತ್ತೆ ಕುಸಿಯದಂತೆ ತಾತ್ಕಾಲಿಕ ಕ್ರಮ

    ಮಂಗಳೂರು: ಫಲ್ಗುಣಿ ನದಿಗೆ ಅಡ್ಡವಾಗಿ ಕಟ್ಟಿರುವ ಬಜ್ಪೆ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಬಿರುಕು ಬಿಟ್ಟು ಎರಡು ಕಾಲು ಅಡಿ ಜಗ್ಗಿದ ಹಿನ್ನೆಲೆಯಲ್ಲಿ ಇನ್ನಷ್ಟು ಕುಸಿಯದಂತೆ ಸೇತುವೆ ಕಂಬಗಳ ಸುತ್ತ ದೊಡ್ಡ ಗಾತ್ರದ ಕಲ್ಲುಗಳನ್ನು ಇಟ್ಟು ತಾತ್ಕಾಲಿಕ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕಾಮಗಾರಿ ಬುಧವಾರ ನಡೆಸಲಾಗಿದೆ.

    ತಜ್ಞರ ತಂಡ ಬೆಂಗಳೂರಿನಿಂದ ಬರಬೇಕಾಗಿದ್ದು, ಕೋವಿಡ್ ಕಾರಣದಿಂದ ಒಂದೆರಡು ದಿನ ವಿಳಂಬ ಆಗಬಹುದು. ಈ ನಡುವೆ ಮಂಗಳೂರಿನ ಲೋಕೋಪಯೋಗಿ ಇಂಜಿನಿಯರ್‌ಗಳ ತಂಡ ಬೆಂಗಳೂರಿನ ಪರಿಣಿತರೊಂದಿಗೆ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅವರ ಸಲಹೆಯಂತೆ ಕಲ್ಲು ಹಾಕುವ ತುರ್ತು ಕಾರ್ಯ ಮಾಡಲಾಗಿದೆ.

    ಸೇತುವೆಗೆ ಹೆಚ್ಚಿನ ಹಾನಿ ಆಗದಂತೆ ತಡೆಯುವ ನಿಟ್ಟಿನಲ್ಲಿ ತಜ್ಞರು ನೀಡಿದ ಸಲಹೆಯನ್ನು ಕಾರ್ಯಗತಗೊಳಿಸಲಾಗಿದೆ. ಮುಂದೆ ತಂಡ ಸೇತುವೆ ವೀಕ್ಷಣೆ ಮಾಡಿದ ಬಳಿಕ ನೀಡುವ ಸಲಹೆಯನ್ನು ತಕ್ಷಣಕ್ಕೆ ಕೈಗೊಳ್ಳಲಿದ್ದೇವೆ. ಇದು ತಜ್ಞರು ನೀಡುವ ವರದಿಯನ್ನು ಆಧರಿಸಿ ಅಪಾಯ ಇಲ್ಲದೆ ಇದ್ದರೆ ಮಾತ್ರ ಲಘು ವಾಹನಗಳಿಗೆ ಸಂಚರಿಸಲು ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಮಂಗಳೂರಿನ ಪಿಡಬ್ಲುೃಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಯಶವಂತ್ ತಿಳಿಸಿದ್ದಾರೆ.

    ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ: ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಹಾಗೂ ವ್ಯಕ್ತಿಗಳು ಸೇತುವೆ ಮೇಲೆ ಸಂಚರಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಎರಡೂ ಬದಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿಷಯ ತಿಳಿಯದೆ ಬುಧವಾರ ಬೆಳಗ್ಗೆಯೂ ಹಲವು ಮಂದಿ ಸೇತುವೆ ಬಳಿಯ ತನಕ ಬಂದು ಹಿಂತಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಸ್ತುತ ಬಜ್ಪೆ ಕಡೆ ಹೋಗುವ ವಾಹನಗಳು ಉಡುಪಿ ಕಡೆಯಿಂದ ಮೂಲ್ಕಿ, ಮೂರು ಕಾವೇರಿ, ಕಟೀಲು ಮೂಲಕ, ಮಂಗಳೂರು ಕಡೆಯಿಂದ ಕೂಳೂರು, ಜೋಕಟ್ಟೆ ಮೂಲಕ ಹಾಗೂ ವಾಮಂಜೂರು, ಗುರುಪುರ, ಕೈಕಂಬ ಮಾರ್ಗವಾಗಿ ಸಂಚರಿಸುತ್ತಿವೆ. ಲಾಕ್‌ಡೌನ್ ಇರುವುದರಿಂದ ವಾಹನಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸಮಸ್ಯೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ ಪರ್ಯಾಯ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ವಾಹನ ದಟ್ಟಣೆ ಎದುರಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನದಿಯಲ್ಲಿ ಮಣ್ಣು ತುಂಬಿದ್ದೇ ಕಾರಣ?: ಸೇತುವೆ ಪರಿಸರದಲ್ಲಿ ಅವ್ಯಾಹತ ಮರಳುಗಾರಿಕೆಯ ಜತೆಗೆ ಹೊಸ ಸೇತುವೆ ಕಾಮಗಾರಿ ನಡೆಸಲು ನದಿಗೆ ಅವೈಜ್ಞಾನಿಕವಾಗಿ ಮಣ್ಣು ತುಂಬಿ ನದಿಯ ನೀರನ್ನು ಒಂದು ಬದಿಯಲ್ಲಿ ಹೋಗಲು ಬಿಟ್ಟಿರುವುದು ಕಾರಣ ಎಂದು ಹೇಳಲಾಗುತ್ತಿದೆ. ನದಿಗೆ ಅಡ್ಡಲಾಗಿ ಮಣ್ಣು ತುಂಬಿದ ಸ್ಥಳದಲ್ಲಿ ನೀರು ಹೋಗಲು ಪೈಪ್ ಅಳವಡಿಸಿದ್ದರೂ ಅದರ ಮೇಲೆ ಮಣ್ಣು ಬಿದ್ದು ಹರಿವು ಇರಲಿಲ್ಲ. ಸೋಮವಾರ ಇಡೀ ದಿನ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ರಭವಾಗಿದ್ದರಿಂದ ಮೊದಲೇ ಮರಳುಗಾರಿಕೆಯಿಂದ ನಲುಗಿದ್ದ ಸೇತುವೆ ಕಂಬಗಳು ಕುಸಿದಿವೆ. ಮಂಗಳವಾರ ಹಾಗೂ ಬುಧವಾರ ನದಿಯಲ್ಲಿ ತುಂಬಿದ್ದ ಮಣ್ಣು ತೆರವು ಕಾಮಗಾರಿ ನಡೆಸಲಾಗಿದೆ. ಸೇತುವೆ ಸಂಪೂರ್ಣ ಕುಸಿದು ಬೀಳಬಹುದು ಎನ್ನುವ ಭೀತಿಯಿಂದ ಮಣ್ಣು ತೆರವು ಕಾರ್ಯ ನಡೆಸಿದ್ದಾರೆ. 150 ಮೀ. ಅಗಲದ ನದಿಯಲ್ಲಿ ಹರಿಯುವ ನೀರನ್ನು ಕೇವಲ 15 ಮೀ. ನಡುವೆ ಹರಿಯಲು ಬಿಟ್ಟಿರುವುದು ದುರಂತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಡುಗಡ್ಡೆ ಮಾಯ: ದಶಕದಿಂದ ಡ್ರೆಜ್ಜಿಂಗ್ ಮೂಲಕ ವ್ಯಾಪಕ ಮರಳುಗಾರಿಕೆಯಿಂದ ಮರವೂರು ಸೇತುವೆಯಿಂದ ಬಜ್ಪೆಯತ್ತ ಸಾಗುವಾಗ ಎಡಭಾಗಕ್ಕೆ ಕಾಣುತ್ತಿದ್ದ 50 ಮೀ. ಸುತ್ತಳತೆಯ ನದಿ ಮಧ್ಯದ ನಡುಗಡ್ಡೆಯೊಂದು ಅರ್ಧಕ್ಕೆ ಕುಸಿದು ಹೋಗಿದೆ. ಸುತ್ತಲೂ ಮರಳು ತೆಗೆಯುವುದರಿಂದ ಅಡಿಭಾಗ ಕರಗಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನಡುಗಡ್ಡೆ ಎರಡೂ ಪಾರ್ಶ್ವದಲ್ಲಿ ಅರ್ಧದಷ್ಟು ಉಳಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts